ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಸಂಘಟನಾ ಶಕ್ತಿಗೆ ‘ಅಪ್ಪಾಜಿ’ ನಾಮಬಲ

Last Updated 20 ಸೆಪ್ಟೆಂಬರ್ 2021, 8:34 IST
ಅಕ್ಷರ ಗಾತ್ರ

ಭದ್ರಾವತಿ: ಮೂರು ದಶಕಗಳ ಕಾಲ ಕ್ಷೇತ್ರದಲ್ಲಿ ರಾಜಕೀಯ ನಡೆಸಿದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ನಿಧನರಾಗಿ ಒಂದು ವರ್ಷ ತುಂಬಿದ್ದು, ಸೆ. 21ರಂದು ಹಮ್ಮಿಕೊಂಡಿರುವ ‘ಪುಣ್ಯಸ್ಮರಣೆ’ ಕಾರ್ಯಕ್ರಮ ಜೆಡಿಎಸ್ ಪಾಲಿಗೆ ಸಂಘಟನಾ ಶಕ್ತಿ ತುಂಬುವ ದಿನವಾಗಿದೆ.

ಅಪ್ಪಾಜಿ ಕ್ಷೇತ್ರದ ರಾಜಕಾರಣದಲ್ಲಿ ಮೂರು ದಶಕಗಳ ಕಾಲ ಸಕ್ರಿಯರಾಗಿ ಮೂರು ಬಾರಿ ಶಾಸಕರಾಗಿ, ತಮ್ಮ ಅವಧಿಯಲ್ಲಿ ನಗರಸಭೆ, ತಾಲ್ಲೂಕು ಪಂಚಾಯಿತಿ ಹಾಗೂ ಕ್ಷೇತ್ರದ ಎಲ್ಲ ಸೊಸೈಟಿ ಹಾಗೂ ಇನ್ನಿತರೆ ಸಹಕಾರ ಸಂಘಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅಧಿಕಾರ ನಡೆಸಿದವರು.

ಅಪ್ಪಾಜಿ ನಂತರ ಯಾರು ಎಂಬ ಪ್ರಶ್ನೆ ಇತ್ತು. ಅದಕ್ಕೆ ಉತ್ತರದ ರೀತಿಯಲ್ಲಿ ಕಳೆದೊಂದು ವರ್ಷದಲ್ಲಿ ಕ್ಷೇತ್ರದಲ್ಲಿ ನಡೆದ ಗ್ರಾಮ ಪಂಚಾಯಿತಿ ಹಾಗೂ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಅದರ ಕಾರ್ಯಕರ್ತರು ಅವರ ಭಾವಚಿತ್ರದೊಂದಿಗೇ ಹೋರಾಟ ನಡೆಸಿದರು. ಅದರ ಫಲವಾಗಿ ಉತ್ತಮ ಸಾಧನೆಯನ್ನೇ ತೋರಿತು.

ಜಿಲ್ಲೆಯಲ್ಲಿ ಜೆಡಿಎಸ್ ಹಿನ್ನಡೆ ಕಂಡರೂ ಕ್ಷೇತ್ರದಲ್ಲಿ ಮಾತ್ರ ಅಪ್ಪಾಜಿ ನಾಮಬಲದ ಶಕ್ತಿ
ಇನ್ನೂ ಜೀವಂತ ವಾಗಿರುವುದನ್ನು ಇಲ್ಲಿನ ಕಾರ್ಯಕರ್ತರು ಮಾಡಿ ತೋರಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎನ್ನುತ್ತಾರೆ ಪಕ್ಷದ ಹಿರಿಯರು.

ಜಿಲ್ಲೆಗೆ ಮೇಲ್ಪಂಕ್ತಿ: ತಮ್ಮ ಮೂರು ದಶಕಗಳ ರಾಜಕಾರಣದಲ್ಲಿ ಎಂದೂ ಪಕ್ಷದ ರಾಜಕಾರಣ ಮಾಡದೆ ಎಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ ಜತೆಗೆ ಹೆಜ್ಜೆ ಇಟ್ಟಿದ್ದ ಅಪ್ಪಾಜಿ ಎರಡು ಬಾರಿ ಪಕ್ಷೇತರರಾಗಿ, ಒಂದು ಬಾರಿ ಜೆಡಿಎಸ್ ಮೂಲಕ ಗೆದ್ದು ತಮ್ಮ ಶಕ್ತಿ ತೋರಿದವರು.

‘ಇವೆಲ್ಲದರ ಜತೆ ಜೆಡಿಎಸ್ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಅವರು ಜೆಡಿಎಸ್ ವರಿಷ್ಠ ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಿಷ್ಠರಾಗಿ ರಾಜಕೀಯ ಬದುಕು ನಡೆಸಿದ್ದಲ್ಲದೆ ಎಂದೂ ಹಿಂಬಾಗಿಲ ರಾಜಕಾರಣ ಮಾಡದೆ ಪಕ್ಷಕ್ಕೆ ಹೆಗಲು ಕೊಟ್ಟವರು’ ಎನ್ನುತ್ತಾರೆ ಅಧ್ಯಕ್ಷ ಆರ್.ಕರುಣಾಮೂರ್ತಿ.

ಸದ್ಯ ಜಿಲ್ಲೆಯಲ್ಲಿ ಮಧು ಬಂಗಾರಪ್ಪ, ಮಂಜುನಾಥಗೌಡ ಅವರಂತಹ ಘಟಾನುಘಟಿ ನಾಯಕರು ಪಕ್ಷ ತೊರೆದುಹೋದರೂ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಗಟ್ಟಿ ನೆಲವನ್ನು ಉಳಿಸಿಕೊಂಡಿದೆ ಎಂಬುದನ್ನು ನಗರಸಭಾ ಚುನಾವಣೆಯಲ್ಲಿ
ಸಾರಿದೆ. ಇದಕ್ಕೆ ಪಕ್ಷ ಹಾಗೂ ಅಪ್ಪಾಜಿ ನಾಮಬಲದ ಶಕ್ತಿ ಕಾರಣ ಎನ್ನುವುದನ್ನು ಎಲ್ಲ ಪಕ್ಷದ ನಾಯಕರೂ ಒಪ್ಪುತ್ತಾರೆ.

‘ತಂದೆಯೊಂದಿಗೆ ಮಗ ಅಜಿತ್ ರಾಜಕೀಯ ಕೆಲಸ ಮಾಡುತ್ತಿದ್ದ. ಎರಡು ಬಾರಿ ನಗರಸಭಾ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಆತನಿಗಿದೆ. ಈಗ ಪತಿಯ ಸ್ಥಾನದಲ್ಲಿ ನಿಂತು ಅವರ ಸೇವೆಯನ್ನು ಮಾಡುವ ನಿರ್ಣಯ ಹೊತ್ತು ಕಾರ್ಯಕರ್ತರ ಜತೆಗಿದ್ದೇನೆ’ ಎನ್ನುತ್ತಾರೆ ಶಾರದ ಅಪ್ಪಾಜಿ.

ಘೋಷಣೆ ಸಾಧ್ಯತೆ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೆ. 19ರಂದು ಅಪ್ಪಾಜಿ ಹೆಸರಿನಲ್ಲಿ ನಡೆಯುವ ಪುಣ್ಯಸ್ಮರಣೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಜತೆಗೆ ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆಗೆ ಅಗತ್ಯ ಇರುವ ನಾಯಕತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕಾರ್ಯಕರ್ತರ ನಡುವೆ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT