ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6,251 ಮಂದಿ ತಮಿಳು ಸಮುದಾಯದವರ ಓಂ ಶಕ್ತಿ ಯಾತ್ರೆಗೆ ಈಶ್ವರಪ್ಪ ನೆರವು

ಎಲ್ಲ ಸಮುದಾಯದವರನ್ನು ಯಾತ್ರೆಗೆ ಕಳುಹಿಸಿ: ಕಾಂಗ್ರೆಸ್ ಆಗ್ರಹ
Last Updated 5 ಜನವರಿ 2023, 20:54 IST
ಅಕ್ಷರ ಗಾತ್ರ

ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ನೆರವಿನಿಂದ ಶಿವಮೊಗ್ಗದ 6,251 ಮಂದಿ ತಮಿಳು ಸಮುದಾಯದವರು ಶುಕ್ರವಾರ ತಮಿಳುನಾಡಿನ ಮೇಲ್‌ ಮರುವತ್ತೂರಿನ ಓಂ ಶಕ್ತಿ ಕ್ಷೇತ್ರಕ್ಕೆ ಯಾತ್ರೆ ತೆರಳಿದರು.

ಇಲ್ಲಿನ ಶರಾವತಿ ನಗರದಲ್ಲಿರುವ ಶುಭಮಂಗಳ ಕಲ್ಯಾಣ ಮಂಟಪದ ಆವರಣದಿಂದ ಯಾತ್ರಾರ್ಥಿಗಳನ್ನು ಹೊತ್ತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 112 ಬಸ್‌ಗಳು ತಮಿಳುನಾಡಿನತ್ತ ಸಾಗಿದವು.

ವಿನೋಬ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ರಾತ್ರಿ ಓಂ ಶಕ್ತಿ ದೇವಸ್ಥಾನ ಟ್ರಸ್ಟ್ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ
ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡಿದರು.

ಏಳು ದಿನಗಳ ಯಾತ್ರೆ: ಶಿವಮೊಗ್ಗದಿಂದ ಹೊರಟ ಭಕ್ತರು ಶ್ರೀರಂಗಪಟ್ಟಣ, ನಂಜನಗೂಡು, ತಮಿಳುನಾಡಿನ ರಾಮೇಶ್ವರಂ ಸೇರಿ 30ಕ್ಕೂ ಹೆಚ್ಚು ದೇವಸ್ಥಾನಗಳ ದರ್ಶನ ಮಾಡಲಿದ್ದಾರೆ. ಒಟ್ಟು 6 ರಾತ್ರಿ, 7 ಹಗಲು ಈ ಯಾತ್ರೆ ನಡೆಯಲಿದೆ. ಯಾತ್ರೆಗೆ ಹೊರಟವರಲ್ಲಿ ಮಹಿಳೆಯರು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

‘ಓಂಶಕ್ತಿ ಕ್ಷೇತ್ರಕ್ಕೆ ಈ ಮೊದಲು ಸ್ವಂತ ಹಣದಲ್ಲಿ ಹೋಗಿದ್ದೇನೆ. ಆದರೆ, ಈ ಬಾರಿ ಈಶ್ವರಪ್ಪ ಅವರ ನೆರವಿನಿಂದ ಕುಟುಂಬ ಸಮೇತ
ಹೊರಟಿದ್ದೇನೆ. ಇಷ್ಟೊಂದು ಜನರನ್ನು ಕಳುಹಿಸುವುದು ಸಣ್ಣ ಮಾತಲ್ಲ. ಹಣ ಇದ್ದವರೆಲ್ಲರೂ ಈ ಕೆಲಸ ಮಾಡುವುದಿಲ್ಲ’ ಎಂದು ಯಾತ್ರೆಗೆ ಹೊರಟಿದ್ದ ಶಿವಮೊಗ್ಗದ ಗೋಪಾಳ ನಿವಾಸಿ, ಮೇಸ್ತ್ರಿ ಕೆಲಸ ಮಾಡುವ ಕಾರ್ತಿಕ್ ಜಯರಾಮ್ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ತಿಕ್ ತಾಯಿ ಉಮ್ಮಣಮ್ಮ ಅವರಲ್ಲೂ ಯಾತ್ರೆಗೆ ಹೊರಟ ಸಂಭ್ರಮ ಮನೆಮಾಡಿತ್ತು.

ಕೆ.ಎಸ್‌. ಈಶ್ವರಪ್ಪ ಅವರು ಸಹ ಕುಟುಂಬ ಸಮೇತ ಜ. 8ರಂದು ಮೇಲ್‌ಮರುವತ್ತೂರಿಗೆ ತೆರಳಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಎಲ್ಲ ಜಾತಿ– ಧರ್ಮದವರನ್ನು ಕಳುಹಿಸಿ’

‘ಈಶ್ವರಪ್ಪ ಮತದಾರರನ್ನು ತೀರ್ಥಕ್ಷೇತ್ರಕ್ಕೆ ಕಳುಹಿಸುವುದಕ್ಕೆ ನಮ್ಮ ವಿರೋಧವಿಲ್ಲ. ಹೀಗೆ ಕಳುಹಿಸುವುದರಿಂದ ಅವರಿಗೆ ಒಳ್ಳೆಯದಾಗುವುದಿದ್ದರೆ ಶಿವಮೊಗ್ಗದ ಎಲ್ಲ ಜಾತಿ–ಧರ್ಮದವರನ್ನು ಅವರ ನಂಬುಗೆಯ ಧರ್ಮಕ್ಷೇತ್ರಗಳಿಗೆ ಕಳುಹಿಸಿಕೊಡಲಿ’ ಎಂದು ಕಾಂಗ್ರೆಸ್‌ ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್. ನಾಗರಾಜ್ ಒತ್ತಾಯಿಸುತ್ತಾರೆ.

‘ಪೂರಾ ಹಣ ನಾನು ಭರಿಸಲ್ಲ’

‘ಚುನಾವಣಾ ರಾಜಕಾರಣಕ್ಕೂ ಇದಕ್ಕೂ ಸಂಬಂಧವಿಲ್ಲ. 14 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಯಾತ್ರೆಗೆ ಪೂರಾ ಹಣ ನಾನು ಕೊಡುತ್ತಿಲ್ಲ. ಮಹಿಳೆಯರು ಪ್ರತಿ ತಿಂಗಳು ಹಣ ಉಳಿಸಿ ವರ್ಷಕ್ಕೊಮ್ಮೆ ಯಾತ್ರೆ ಮಾಡುತ್ತಾರೆ. ಅವರಿಗೆ ಕಡಿಮೆ ಬಿದ್ದ ಹಣವನ್ನು ನಾನು ಭರಿಸುತ್ತೇನೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಧರ್ಮ ಜಾಗೃತಿ ಕಾರ್ಯಕ್ಕೆ ಈ ಕೆಲಸ ಮಾಡುತ್ತಿದ್ದೇನೆ. ತಮಿಳರು ಮಾತ್ರವಲ್ಲ; ಎಲ್ಲಾ ಜಾತಿಯವರೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT