ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಪರಿಶ್ರಮ, ಛಲದಿಂದ ಯಶಸ್ಸು ಸಾಧ್ಯ: ಕೆ.ಎ. ದಯಾನಂದ ಅವರೊಂದಿಗೆ ಸಂವಾದ

ಬಿಬಿಎಂಪಿ ಆಡಳಿತ ವಿಶೇಷ ಅಧಿಕಾರಿ ಕೆ.ಎ. ದಯಾನಂದ ಅವರೊಂದಿಗೆ ಸಂವಾದ
Last Updated 23 ನವೆಂಬರ್ 2021, 7:27 IST
ಅಕ್ಷರ ಗಾತ್ರ

ಶಿವಮೊಗ್ಗ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಗುರಿ ಇದ್ದರೆ ಸಾಲದು, ಗುರಿ ಮುಟ್ಟಲು ಸತತ ಪ್ರಯತ್ನವಿದ್ದಾಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಬಿಬಿಎಂಪಿ ಆಡಳಿತ ವಿಶೇಷ ಅಧಿಕಾರಿ ಕೆ.ಎ. ದಯಾನಂದ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಭಾಂಗಣದಲ್ಲಿ ಸಮನ್ವಯ ಟ್ರಸ್ಟ್ ಮತ್ತು ವಿ ಆರ್‌ ಒನ್‍ ಟೀಮ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿರುವ ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಸಾಧನೆಗೆ ಶ್ರೀಮಂತರು, ಬಡವರು ಎಂಬ ಭೇದವಿಲ್ಲ. ಆತ್ಮವಿಶ್ವಾಸ, ಛಲ ಮತ್ತು ನಿರಂತರ ಪರಿಶ್ರಮ ಇದ್ದರೆ ಸಾಧನೆ ನಿಮ್ಮನ್ನು ಹುಡುಕಿ ಬರುತ್ತದೆ’ ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬರಲ್ಲಿಯೂ ವೈಶಿಷ್ಟ್ಯ ಇದ್ದೇ ಇರುತ್ತದೆ. ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು, ಅನುಸರಿಸುವುದು ಸರಿಯಲ್ಲ. ನಿಮ್ಮದೇ ಆದ ವ್ಯಕ್ತಿತ್ವದೊಂದಿಗೆ, ಕ್ರಿಯಾತ್ಮಕ ಆಲೋಚನೆಗಳೊಂದಿಗೆ ಅಧ್ಯಯನ ನಡೆಸುವ ಪರಿಪಾಠ ಬೆಳೆಸಿಕೊಳ್ಳಬೇಕು. ನಿಮ್ಮ ಸ್ವಂತ ಆಲೋಚನಾ ಕ್ರಮಗಳಿಂದ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಬೇಕು. ಎಲ್ಲರಿಗೂ ಸ್ಫೂರ್ತಿ ಆಗುವಂತೆ ಬದುಕು ರೂಪಿಸಿಕೊಳ್ಳಬೇಕು’ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನದಲ್ಲಿ ಎಲ್ಲ ವಿಷಯಗಳನ್ನು ಗ್ರಹಿಸುವುದು ಮುಖ್ಯವಾಗುತ್ತದೆ. ಆಯ್ದ ವಿಷಯಗಳನ್ನಷ್ಟೇ ಓದಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಎಲ್ಲ ವಿಷಯಗಳನ್ನು ಓದುವ ಹವ್ಯಾಸದ ಜತೆ ಓದಿನ ಪರಿಕ್ರಮವನ್ನು ಉತ್ತಮಗೊಳಿಸುವ ಬಗ್ಗೆ ಸೂಕ್ತ ರೂಪುರೇಷೆ ಹಾಕಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಆಯಾ ಪಠ್ಯಕ್ರಮಗಳನ್ನು ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡು ಸಂಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ‘ಕೆ.ಎ. ದಯಾನಂದ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಸಹ್ಯಾದ್ರಿ ಉತ್ಸವ ನಡೆಸಿದ್ದರು. ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ದಯಾನಂದ ಅವರ ಜೀವನವೇ ಎಲ್ಲರಿಗೂ ಸ್ಫೂರ್ತಿ. ಸಾಧಕರ ಜೀವನದಿಂದ ಪ್ರೇರಿತರಾಗಿ ಸಮಾಜದಲ್ಲಿ ಉನ್ನತ ಸ್ಥಾನ ತಲುಪುವ ಮುಖಾಂತರ ಸಮಾಜಕ್ಕೆ ಸೇವೆ ಸಲ್ಲಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ್‍ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಗೋಪಿನಾಥ್, ಬಿ.ಆರ್. ಸಂತೋಷ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ವಿ ಆರ್‍ ಒನ್‍ ಟೀಮ್‍ನ ಜಗದೀಶ್‍, ಮಥುರಾ ಗೋಪಿನಾಥ್ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT