ಭಾನುವಾರ, ಏಪ್ರಿಲ್ 18, 2021
31 °C
ವಿನೋಬನಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಿಟ್‌ ವಿತರಿಸಿದ ಸಚಿವ ಈಶ್ವರಪ್ಪ ಅಭಿಮತ

ಸಂಘಟಿತ ಪ್ರಯತ್ನ ಶಾಲೆಯ ಅಭಿವೃದ್ಧಿಗೆ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಸಂಘಟಿತ ಪ್ರಯತ್ನ ಮಾಡಿದರೆ ಶಾಲೆಯ ಅಭಿವೃದ್ಧಿ, ವಿದ್ಯಾರ್ಥಿಗಳಿಂದ ಒಳ್ಳೆಯ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ವಿನೋಬನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್‌ ವಿತರಿಸಿ ಅವರು ಮಾತನಾಡಿದರು.

ಶಾಲೆಗೆ ಎಲ್ಲ ರೀತಿಯ ಸೌಲಭ್ಯ ನೀಡಲಾಗುವುದು. ಮಾದರಿ ಶಾಲೆಯಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಬಡವರ ಮಕ್ಕಳು ಓದುವ ಶಾಲೆಯಲ್ಲಿ ಶೌಚಾಲಯಗಳು ಇಲ್ಲ. ಆಟದ ಮೈದಾನವಿಲ್ಲ. ಪಾರ್ಕ್ ಜಾಗದಲ್ಲಿ ಆಟದ ಮೈದಾನಕ್ಕೆ ಅವಕಾಶ ನೀಡಲಾಗುವುದು. ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಬಾರಿ ಶಾಲೆ ಶೇ 100 ಫಲಿತಾಂಶ ಪಡೆದರೆ ₹ 1 ಕೋಟಿ ಅನುದಾನ ನೀಡಲಾಗುವುದು. ಎಸ್ಸೆಸ್ಸೆಲ್ಸಿ ಮಕ್ಕಳು ಶೇ 60ಕ್ಕಿಂತ ಹೆಚ್ಷು ಅಂಕ‌ ಪಡೆದರೆ ತಲಾ ₹ 5 ಸಾವಿರ ಬಹುಮಾನ ಕೊಡಲಾಗುವುದು. ಶಾಲೆಯನ್ನು ನಗರದಲ್ಲೇ ಮಾದರಿಯಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಮೇಯರ್‌ ಸುನೀತಾ ಅಣ್ಣಪ್ಪ, ಉಪ ಮೇಯರ್ ಗನ್ನಿ ಶಂಕರ್, ಪಾಲಿಕೆ ಸದಸ್ಯರಾದ ಎಸ್‌.ಎನ್‌.ಚನ್ನಬಸಪ್ಪ, ಅನಿತಾ ರವಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನಾಗರಾಜ್, ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಿ.ಬಾಲು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಮುಖ್ಯಶಿಕ್ಷಕ ಟಿ.ಜೆ.ಜಗದೀಶ್, ರಂಗೇಶಪ್ಪ, ಮಂಜುಳಾ ಪಾಂಡೆ, ರವಿ, ದಾನಿಗಳಾದ ಚಂದ್ರಹಾಸ ಶೆಟ್ಟರ್, ಉದಯ್‌ ಕಡಂಬ ಉಪಸ್ಥಿತರಿದ್ದರು.

ನಂತರ ನಗರದ ಹಲವೆಡೆ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. 17ನೇ ವಾರ್ಡಿನಲ್ಲಿ ಗೋಪಾಲಗೌಡ ಬಡಾವಣೆಯ ಕೃಷ್ಣ ಮಠ ರಸ್ತೆಯಲ್ಲಿ ನೀರಾವರಿ ಇಲಾಖೆ ಕೈಗೊಂಡಿರುವ ಸುಮಾರು ₹ 20 ಲಕ್ಷ ವೆಚ್ಚದ ನೂತನ ಯೋಗ ಮಂದಿರ ಕಟ್ಟಡ, 22ನೇ ವಾರ್ಡಿನ ಕುಂಬಾರ ಗುಂಡಿಯಲ್ಲಿ ₹ 15 ಲಕ್ಷ ವೆಚ್ಚದ ಸಮುದಾಯ ಭವನ, 6ನೇ ವಾರ್ಡಿನ ಪೊಲೀಸ್ ಲೇಔಟ್‌ನಲ್ಲಿ ₹ 25 ಲಕ್ಷ ವೆಚ್ಚದ ಸಮುದಾಯ ಭವನ, ನಾಗರ ದೇವಾಲಯದ ಆವರಣದಲ್ಲಿ ನೂತನ ಸಮುದಾಯ ಭವನ, ಶಿವಪ್ಪ ನಾಯಕ ಬಡಾವಣೆಯಲ್ಲಿ ₹ 20 ಲಕ್ಷ ವೆಚ್ಚದ ಸಮುದಾಯ ಭವನ, ಚಿಕ್ಕಲ್‌ನಲ್ಲಿ ಸಭಾ ಭವನ, ₹ 25 ಲಕ್ಷ ವೆಚ್ಚದ ವೈದ್ಯಕೀಯ ಸಂಘದ ಸಮುದಾಯ ಭವನದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.