ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಮಂಜೂರಾದ ಕಾಮಗಾರಿಗಳ ಅನುಷ್ಠಾನವೇ ಗುರಿ

ಬಜೆಟ್‌: ಪ್ರವಾಸೋದ್ಯಮ ಗರಿಗೆದರಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ
Last Updated 18 ಫೆಬ್ರುವರಿ 2022, 1:39 IST
ಅಕ್ಷರ ಗಾತ್ರ

ಸಾಗರ: ಹಿಂದಿನ ವರ್ಷ ಮಂಜೂರಾಗಿರುವ ಕಾಮಗಾರಿಗಳ ಅನುಷ್ಠಾನದತ್ತ ಈ ತಾಲ್ಲೂಕು ಮುಖ ಮಾಡಿದೆಯೇ ಹೊರತು ಇಲ್ಲಿನ ಶಾಸಕರೇ ಹೇಳುವಂತೆ ಈ ವರ್ಷದ ಬಜೆಟ್‌ನಲ್ಲಿ ತಾಲ್ಲೂಕಿನ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ.

₹ 165 ಕೋಟಿ ವೆಚ್ಚದಲ್ಲಿ ಜಗತ್‌ ಪ್ರಸಿದ್ಧ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧವಾಗಿದ್ದು, ಈ ಮೂಲಕ ಪ್ರವಾಸೋದ್ಯಮ ಗರಿಗೆದರಿ ಹಲವು ರೀತಿಯಲ್ಲಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹುಟ್ಟಿಸಿದೆ.

ಜೋಗ ಜಲಪಾತದ ಸುತ್ತಮುತ್ತಲಿನ ಪ್ರದೇಶಕ್ಕೆ ಮೂಲ ಸೌಕರ್ಯ ಒದಗಿಸಿ ಅದನ್ನು ಸರ್ವಋತು ಜಲಪಾತವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆ. ರೋಪ್ ವೇ, ಕೇಬಲ್ ಕಾರ್ ಮೂಲಕ ಹಲವು ಕೋನಗಳಿಂದ ಹಾಗೂ ಸಮೀಪದಿಂದ ಜಲಪಾತ ವೀಕ್ಷಣೆ, ಮೈಸೂರಿನ ಕೆಆರ್‌ಎಸ್‌ ಮಾದರಿಯಲ್ಲಿ ಸಂಗೀತ ಕಾರಂಜಿ, ಈಜುಕೊಳ ಅಭಿವೃದ್ಧಿ, ಜಲಪಾತ ಪ್ರದೇಶದಿಂದ ತಲಕಳಲೆಯಲ್ಲಿರುವ ಜಂಗಲ್ ಲಾಡ್ಜ್ ರೆಸಾರ್ಟ್‌ವರೆಗೆ ಚತುಷ್ಪಥ ರಸ್ತೆ, ಪಂಚತಾರಾ ಹೋಟೆಲ್ ನಿರ್ಮಾಣ ಹೀಗೆ ಹತ್ತು ಹಲವು ಯೋಜನೆಗಳು ಕಾರ್ಯರೂಪಕ್ಕೆ ಬರುವ ನಿಟ್ಟಿನಲ್ಲಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಾಗಿದೆ.

ಹಲವು ವರ್ಷಗಳಿಂದ ಜೋಗದ ಅಭಿವೃದ್ಧಿ ನನೆಗುದಿಗೆ ಬಿದ್ದಿದ್ದು, ಕಳೆದ ವರ್ಷ ಬಜೆಟ್‌ನಲ್ಲಿ ಮಂಜೂರು ಮಾಡಿರುವ ಹಣದಿಂದ ಈಗಲಾದರೂ ಈ ಕೆಲಸವಾದೀತೇ ಎಂಬ ಆಶಾವಾದ ಮೂಡಿದೆ. ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಶರಾವತಿ ಕಣಿವೆ ಪ್ರದೇಶದಲ್ಲಿರುವ ಹಲವು ಗ್ರಾಮಗಳು ರಸ್ತೆಯಂತಹ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ಜೋಗದ ಅಭಿವೃದ್ಧಿ ಈ ಗ್ರಾಮಗಳಿಗೆ ಸೌಲಭ್ಯ ಒದಗಿಸುವುದನ್ನು ಒಳಗೊಳ್ಳಬೇಕು ಎಂಬ ಒತ್ತಾಯವಿದೆ.

ಪ್ರವಾಸೋದ್ಯಮದ ಅಭಿವೃದ್ಧಿಯ ಭಾಗವಾಗಿ ಶರಾವತಿ ಹಿನ್ನೀರಿನ ಪ್ರದೇಶವಾದ ಕೊಳಚಗಾರು-ಕವಲಗೋಡು ನಡುವೆ ಬೆಳ್ಳೆಣ್ಣೆ ಮಾರ್ಗವಾಗಿ ಸೇತುವೆ ನಿರ್ಮಾಣದ ಪ್ರಸ್ತಾಪವಿದ್ದು, ಈ ವರ್ಷದ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮಂಜೂರಾಗುವ ನಿರೀಕ್ಷೆ ಇದೆ.

ಕಾರ್ಗಲ್ ಸಮೀಪದ ಅರಳಗೋಡು ಹಾಗೂ ಸುತ್ತಮುತ್ತಲಿನ ಗ್ರಾಮ ಮಂಗನ ಕಾಯಿಲೆಯ ‘ಹಾಟ್ ಸ್ಪಾಟ್’ ಆಗಿದೆ. ಮೂರು ವರ್ಷಗಳ ಹಿಂದೆ ಮಂಗನ ಕಾಯಿಲೆಯಿಂದ 30ಕ್ಕೂ ಹೆಚ್ಚು ಜನ ಮೂರು ತಿಂಗಳ ಅವಧಿಯಲ್ಲಿ ಮೃತಪಟ್ಟ ಕರಾಳ ನೆನಪು ಇನ್ನೂ ಮಾಸಿಲ್ಲ. ಆದಕಾರಣ ಸಾಗರ ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂಬ ಬೇಡಿಕೆ ಬಲವಾಗಿದೆ. ಈ ಕೇಂದ್ರಕ್ಕೆ ಬಜೆಟ್‌ನಲ್ಲಿ ಅನುದಾನ ಸಿಗುವುದೇ ಎಂದು ಕಾದು ನೋಡಬೇಕಿದೆ.

ಸಾಗರ ನಗರದ ಹೃದಯ ಭಾಗದಲ್ಲಿ ಎಲ್ಲಾ ರೀತಿಯ ಸಾಂಸ್ಕೃತಿಕ ಚಟುವಟಿಕೆಯನ್ನು ವ್ಯವಸ್ಥಿತವಾಗಿ ಸಂಘಟಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ₹ 50 ಕೋಟಿ ವೆಚ್ಚದಲ್ಲಿ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಿಸಲು ಶಾಸಕ ಎಚ್. ಹಾಲಪ್ಪ ಹರತಾಳು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ತನ್ನ ಪಾಲಿನ ₹ 12 ಕೋಟಿ ಬಿಡುಗಡೆ ಮಾಡಬೇಕಿದ್ದು, ಈ ಸಾಲಿನ ಬಜೆಟ್‌ನಲ್ಲಿ ಅದಕ್ಕೆ ಮನ್ನಣೆ ಸಿಗಬೇಕಿದೆ.

ನ್ಯಾಯಾಲಯದ ಆವರಣದಲ್ಲಿ ₹ 4.75 ಕೋಟಿ ವೆಚ್ಚದಲ್ಲಿ ವಕೀಲರ ಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕೂ ಬಜೆಟ್‌ನಲ್ಲಿ ಅನುದಾನ ಮಂಜೂರಾಗಬೇಕಿದೆ. ಸೊರಬ ರಸ್ತೆ ವಿಸ್ತರಣೆ, ಶಿವಮೊಗ್ಗ ರಸ್ತೆಯ ತ್ಯಾಗರ್ತಿ ವೃತ್ತದಿಂದ ಎಲ್.ಬಿ. ಕಾಲೇಜುವರೆಗಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಆವಿನಹಳ್ಳಿ, ಆನಂದಪುರಂ ಹೋಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿ ಹಲವು ಕಾಮಗಾರಿಗಳು ಅನುಷ್ಠಾನಕ್ಕೆ ಕಾದಿವೆ.

ಬಜೆಟ್‌ನಲ್ಲಿ ಮಲೆನಾಡಿನ ರಸ್ತೆಗಳಿಗೆ ಹೆಚ್ಚಿನ ಅನುದಾನ ಸಿಗಬೇಕು. ರೈತರಿಗೆ ಕೃಷಿ ಉಪಕರಣ ಕಡಿಮೆ ಬೆಲೆಯಲ್ಲಿ ಸಿಗುವಂತಾಗಬೇಕು. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಸಬ್ಸಿಡಿ ನೀಡಬೇಕು, ಮಲೆನಾಡಿನಲ್ಲಿ ಕೆರೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎನ್ನುತ್ತಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್.

ಕೃಷಿಭೂಮಿಯನ್ನು ಖರೀದಿಸಿ ಅದನ್ನು ವಾಣಿಜ್ಯ ಭೂಮಿಯಾಗಿ ಪರಿವರ್ತಿಸಿ ಮಾರಾಟ ಮಾಡಿ ಹೇರಳ ಲಾಭ ಗಳಿಸುವ ರಿಯಲ್ ಎಸ್ಟೇಟ್ ಉದ್ಯಮ ಮಲೆನಾಡಿನಲ್ಲಿ ವ್ಯಾಪಕಗೊಳ್ಳುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ನಿವೇಶನ, ಮನೆ ಖರೀದಿಸುವುದೇ ಕಷ್ಟವಾಗಿದೆ. ಈ ಕಾರಣ ವಾಣಿಜ್ಯ ಭೂಮಿಯಾಗಿ ಪರಿವರ್ತನೆಗೊಳ್ಳಲು ಸಾಧ್ಯತೆ ಇರುವ ಭೂ ಪ್ರದೇಶವನ್ನು ಸರ್ಕಾರವೇ ಖರೀದಿಸಿ ಅರ್ಹರಿಗೆ ಹಂಚಲು ಮುಂದಾಗಬೇಕು ಎಂಬ ಅಭಿಪ್ರಾಯ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಎಂ. ಶಿವಕುಮಾರ್ ಅವರದ್ದಾಗಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಮಂಜೂರಾಗಿರುವ ಅನುದಾನದ ನೆರವಿನಿಂದ ಕಾಮಗಾರಿಗಳನ್ನು ಚುರುಕುಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಬಹಳ ವರ್ಷಗಳಿಂದ ಸಾಧ್ಯವಾಗದೆ ಇರುವ ಜೋಗ ಜಲಪಾತದ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

- ಎಚ್. ಹಾಲಪ್ಪ ಹರತಾಳು, ಶಾಸಕ

ಸರ್ಕಾರ ಯಾವುದೇ ಯೋಜನೆ ರೂಪಿಸಿದರೂ 18ರಿಂದ 45 ವರ್ಷದ ವಯೋಮಾನದವರಿಗೆ ಉದ್ಯೋಗ ದೊರಕಲು ಅದು ಪರೋಕ್ಷವಾಗಿಯಾದರೂ ನೆರವು ನೀಡಬೇಕು. ಸಾಗರ ಭಾಗದಲ್ಲಿ ಬಿಎಸ್‌ಸಿ ನರ್ಸಿಂಗ್ ಕಾಲೇಜಿನ ಅವಶ್ಯಕತೆ ಇದ್ದು, ಇದಕ್ಕೆ ಹಣ ಮೀಸಲಿಡಬೇಕು.

- ಎಚ್.ಎಂ. ಶಿವಕುಮಾರ್, ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹ 1,500 ಕೋಟಿ ನೀಡಲಾಗುತ್ತಿದೆ. ಆದರೆ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಕೇವಲ ₹ 52 ಕೋಟಿ ಅನುದಾನ ನೀಡಲಾಗುತ್ತಿದೆ. ಈ ತಾರತಮ್ಯವನ್ನು ನಿವಾರಿಸಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು.

- ಬಿ.ಆರ್. ಜಯಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT