ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದಿಂದ ಮಾತ್ರ ಮೀಸಲಾತಿ ಸಾಧ್ಯ: ಕಾಗಿನೆಲೆಶ್ರೀ

ಎಸ್‌ಟಿ ಮೀಸಲಾತಿಗಾಗಿ ಕುರುಬ ಸಮುದಾಯದ ಶಿವಮೊಗ್ಗ-ಚಿಕ್ಕಮಗಳೂರು ವಿಭಾಗ ಮಟ್ಟದ ಬೃಹತ್ ಜಾಗೃತಿ ಸಮಾವೇಶ
Last Updated 7 ಜನವರಿ 2021, 15:31 IST
ಅಕ್ಷರ ಗಾತ್ರ

ಶಿಕಾರಿಪುರ: ಕುರುಬ ಸಮುದಾಯ ಜನರು ಜಾಗೃತರಾಗಿ ಹೋರಾಟ ನಡೆಸಿದಾಗ ಮಾತ್ರ ಎಸ್‌ಟಿ ಮೀಸಲಾತಿ ಕುರುಬ ಜನಾಂಗಕ್ಕೆ ದೊರೆಯುತ್ತದೆ ಎಂದು ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಹೊಸಸಂತೆ ಮೈದಾನದಲ್ಲಿ ಗುರುವಾರ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ, ಕುರುಬರ ಎಸ್‌ಟಿ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ಕುರುಬ ಸಮುದಾಯದ ಎಸ್‌ಟಿ ಮೀಸಲಾತಿಗೆ ಒತ್ತಾಯಿಸಿ ಆಯೋಜಿಸಿದ್ದ ಶಿವಮೊಗ್ಗ-ಚಿಕ್ಕಮಗಳೂರು ವಿಭಾಗ ಮಟ್ಟದ ಬೃಹತ್ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕುರುಬ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಕಟ್ಟ ಕಡೆಯ ಕುರುಬನ ಭವಿಷ್ಯಕ್ಕಾಗಿ ಎಸ್‌ಟಿ ಮೀಸಲಾತಿ ಹೋರಾಟ ಆರಂಭಿಸಿದ್ದೇವೆ. ಹೋರಾಟದಿಂದ ಮಾತ್ರ ಹಕ್ಕು ಪಡೆಯಲು ಸಾಧ್ಯವಾಗುತ್ತದೆ. ಜನವರಿ 15ರಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಪಾದಯಾತ್ರೆಗೆ ಮಾತ್ರ ಹೋರಾಟ ನಿಲ್ಲುವುದಿಲ್ಲ. ಮೀಸಲಾತಿ ಪಡೆಯಲು ಸಂಸತ್ತಿನ ಮುಂದೆ ಉಪವಾಸ ಕೂರುತ್ತೇನೆ’ ಎಂದರು.

ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ನಮ್ಮ ಸಮುದಾಯ ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿದ್ದು, ಉತ್ತರ ಕರ್ನಾಟಕದಲ್ಲಿ ಜನರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ರಾಜಕೀಯ ಪಕ್ಷಗಳು ಕೇವಲ ಓಟು ಪಡೆಯಲು ಮಾತ್ರ ಕುರುಬರನ್ನು ಬಳಸಿಕೊಳ್ಳತ್ತಿವೆ. ಆದರೆ, ನಮ್ಮ ಸಮುದಾಯಕ್ಕೆ ಅನ್ಯಾಯವಾದಾಗ ನಮ್ಮ ಪರ ಓಟು ಪಡೆದುಕೊಳ್ಳುವ ನಾಯಕರು ನಿಲ್ಲಬೇಕು. ಈ ಸಮಾವೇಶ ಯಾವ ಪಕ್ಷದ ಹಾಗೂ ವ್ಯಕ್ತಿಯ ಪರವಾದ ಸಮಾವೇಶ ಅಲ್ಲ. ಕುರುಬರಿಗೆ ಅನ್ಯಾಯವಾಗಿರುವುದನ್ನು ಹೇಳುವ ಸಮಾವೇಶವಾಗಿದೆ’ ಎಂದರು.

ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ‘ಕುರುಬ ಸಮುದಾಯ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಕಾಗಿನೆಲೆಶ್ರೀಗಳು ಹಾಗೂ ಹೊಸದುರ್ಗ ಶಾಖಾಶ್ರೀಗಳು ಆರಂಭಿಸಿರುವ ಹೋರಾಟಕ್ಕೆ ನಾನು ಬೆಂಬಲ ನೀಡುತ್ತಿದ್ದೇನೆ. ಕುರುಬ ಸಮುದಾಯ ಬೆಂಬಲ ನೀಡಬೇಕು. ಹೋರಾಟಕ್ಕೆ ಬೆಂಬಲ ನೀಡುವಂತೆ ಸ್ವಾಮೀಜಿ ಅವರು ನಮ್ಮ ಮನೆಗೆ ಬರುವ ಮುಂಚೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ತೆರಳಿ ಬೆಂಬಲ ಕೋರಿದ್ದರು. ಈ ಬಗ್ಗೆ ಯಾರಿಗೂ ಗೊಂದಲ ಬೇಡ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುರುಬರ ಎಸ್‌ಟಿ ಹೋರಾಟ ಸಮಿತಿ ಖಜಾಂಚಿ ಕೆ.ಇ. ಕಾಂತೇಶ್, ‘ಎಸ್‌ಟಿ ಮೀಸಲಾತಿಗಾಗಿ ಅನೇಕ ವರ್ಷಗಳ ಹಿಂದೆ ನಮ್ಮ ಸಮಾಜದ ಮುಖಂಡರು ಹೋರಾಟ ಮಾಡಿದ್ದಾರೆ. ಪ್ರಸ್ತುತ ಕಾಗಿನೆಲೆಶ್ರೀಗಳು ಹೋರಾಟದ ನೇತೃತ್ವ ವಹಿಸಿದ್ದು, ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿಗೆ ಆಯೋಜಿಸಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೊಳಿಸಬೇಕು. ರಾಜ್ಯದ ಪವರ್ ಸೆಂಟರ್ ಶಿಕಾರಿಪುರ. ನಮ್ಮ ಕೂಗು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೇಳಬೇಕು. ಎಸ್‌ಟಿ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಚ್.ಎಂ. ರೇವಣ್ಣ, ‘ನಮ್ಮ ಹಕ್ಕನ್ನು ಪಡೆಯಲು ಹಕ್ಕೊತ್ತಾಯದ ಕಾರ್ಯಕ್ರಮ ಇದಾಗಿದೆ. ಪಕ್ಷಾತೀತವಾಗಿ ಎಲ್ಲಾ ಮುಖಂಡರು ಒಂದಾಗಿದ್ದೇವೆ. ಕುರುಬರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷಾತೀತವಾಗಿ ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು’ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ‘ಕುರುಬ ಸಮುದಾಯ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಮುಕುಡಪ್ಪ, ಪ್ರಧಾನ ಕಾರ್ಯದರ್ಶಿ ಆನೇಕಲ್ ದೊಡ್ಡಯ್ಯ, ಶಿವಮೊಗ್ಗ ಜಿಲ್ಲಾ ಕುರುಬ ಸಮಾಜ ಅಧ್ಯಕ್ಷ ಮೈಲಾರಪ್ಪ, ಶಿಕಾರಿಪುರ ಕುರುಬ ಸಮಾಜ ಅಧ್ಯಕ್ಷ ಕಬಾಡಿ ರಾಜಣ್ಣ, ಮುಖಂಡರಾದ ನಗರದ ಮಹದೇವಪ್ಪ, ಭದ್ರಾಪುರ ಹಾಲಪ್ಪ, ಶ್ರೀಕಾಂತ್, ಗೋಣಿ ಮಾಲತೇಶ್, ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷೆ ಡಾ.ಸೌಮ್ಯ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಸಂಘಟನಾ ಕಾರ್ಯದರ್ಶಿ ಎಸ್.ಎಂ. ಶರತ್, ನಿರ್ದೇಶಕ ಚಿಕ್ಕಮಗಳೂರು ಶ್ರೀನಿವಾಸ್, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT