ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಫಲಿತಾಂಶ: ಬಿಜೆಪಿಯ ಅರುಣ್‌ ಜಯಭೇರಿ

344 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಪ್ರಸನ್ನಕುಮಾರ್ ವಿರುದ್ಧ ಗೆಲುವು
Last Updated 15 ಡಿಸೆಂಬರ್ 2021, 2:44 IST
ಅಕ್ಷರ ಗಾತ್ರ

ಶಿವಮೊಗ್ಗ: ದಾವಣಗೆರೆ ಜಿಲ್ಲೆಯ ಮೂರು, ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಒಳಗೊಂಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್‌.ಅರುಣ್‌ ಜಯ ಸಾಧಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್ ಅವರನ್ನು 344 ಮತಗಳ ಅಂತರದಿಂದ ಮಣಿಸಿ, ಮೇಲ್ಮನೆ ಪ್ರವೇಶಿಸಿದರು. ಅರುಣ್‌ 2192 ಮತಗಳನ್ನು ಪಡೆದರೆ, ಪ್ರಸನ್ನಕುಮಾರ್ 1848 ಮತಗಳನ್ನು ಪಡೆದರು.

ವಿಧಾನ ಪರಿಷತ್‌ ಪ್ರವೇಶ ಬಯಸಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಜೆಡಿಯು ಅಭ್ಯರ್ಥಿ ಬಿ.ಕೆ. ಶಶಿಕುಮಾರ್ 3 ಹಾಗೂ ಪಕ್ಷೇತರ ಅಭ್ಯರ್ಥಿ ಪಿ.ವೈ. ರವಿ 4 ಮತಗಳನ್ನು ಗಳಿಸಿದರು. ಕ್ಷೇತ್ರದಲ್ಲಿ 4,164 ಅರ್ಹ ಮತದಾರರು ಇದ್ದರು. 4,156 ಮತದಾರರು ಮತ ಚಲಾಯಸಿದ್ದರು.109 ಮತಗಳು ತಿರಸ್ಕೃತವಾಗಿ, 4047 ಮತಗಳು ಸಿಂಧುವಾಗಿದವು.

ಎರಡು ಗಂಟೆ ತಡವಾಗಿ ಎಣಿಕೆ ಆರಂಭ: ಮತ ಎಣಿಕೆಗಾಗಿ ಎರಡು ಕೊಠಡಿಗಳನ್ನು ಸಜ್ಜುಗೊಳಿಸಲಾಗಿತ್ತು. ತಲಾ 7 ಟೇಬಲ್‌ಗಳಂತೆ ಎರಡು ಕೊಠಡಿಗಳಿಂದ 14 ಟೇಬಲ್‌ಗಳನ್ನು ಜೋಡಿಸಲಾಗಿತ್ತು. ಪ್ರತಿ ಟೇಬಲ್‌ಗೂ ಮೂವರು ಸಿಬ್ಬಂದಿ ನಿಯೋಜಿಸಲಾಗಿತ್ತು. ಎಲ್ಲ 365 ಮತಪೆಟ್ಟಿಗೆಗಳ ಬ್ಯಾಲೆಟ್‌ ಮಿಶ್ರಣ ಮಾಡಿ, 50ಕ್ಕೆ ಒಂದು ಬಂಡಲ್‌ನಂತೆ ಹಂಚಿಕೆ ಮಾಡಲಾಗಿತ್ತು. ಈ ಎಲ್ಲ ಪ್ರಕ್ರಿಯೆ ಮುಗಿಸಲು ಎರಡು ತಾಸು ಆಯಿತು. ಹಾಗಾಗಿ, ಬೆಳಿಗ್ಗೆ 8ಕ್ಕೆ ಆರಂಭವಾಗಬೇಕಿದ್ದ ಎಣಿಕೆ ಕಾರ್ಯ 10ಕ್ಕೆ ಆರಂಭವಾಯಿತು. ನಂತರ ಮಧ್ಯಾಹ್ನದ ಒಳಗೆ ಫಲಿತಾಂಶ ಘೋಷಿಸಲಾಯಿತು.

ಮೊದಲ ಪ್ರಾಶಸ್ತ್ಯ ಮತದಲ್ಲೇ ಅರುಣ್‌ ಗೆಲುವು: ಚಲಾವಣೆಯಾದ 4,156 ಮತಗಳಲ್ಲಿ ಶೇ 50ರಷ್ಟು ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದವರು ಗೆಲ್ಲವುದು ನಿಗದಿಯಾದ ಗುರಿ. ಬಿಜೆಪಿ ಅಭ್ಯರ್ಥಿ ಅರುಣ್‌ ಅವರು ಮೊದಲ ಪ್ರಾಶಸ್ತ್ಯದಲ್ಲೇ ಶೇ 50ಕ್ಕಿಂತ ಹೆಚ್ಚು ಮತ ಪಡೆದರು. ಪ್ರತಿ ಬೂತ್‌ನಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಕಂಡುಬಂತು. ಜೆಡಿಯು ಅಬ್ಯರ್ಥಿ ಅತ್ಯಂತ ಕಳಪೆ ಪ್ರರ್ಶನ ನೀಡುವ ಮೂಲಕ ಠೇವಣಿ ಕಳೆದುಕೊಂಡರು.

ವಿಜಯೋತ್ಸವ: ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಅರುಣ್‌ ಅಭಿಮಾನಿಗಳು ಮತ ಎಣಿಕೆ ಕೇಂದ್ರದ ಹೊರಗೆ ಪಟಾಕಿ ಸಿಡಿಸಿ, ಸಹಿ ಹಂಚಿ ವಿಜಯೋತ್ಸವ ಆಚರಿಸಿದರು. ಬಿಜೆಪಿ ಕಚೇರಿ ಮುಂದೆಯೂ ಕಾರ್ಯಕರ್ತರು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.

ಸದ್ದುಗದ್ದಲವಿಲ್ಲದೇ ಎಣಿಕೆ: ಈ ಬಾರಿ ಮತ ಎಣಿಕೆ ಕೇಂದ್ರದಲ್ಲಿ ಸುಸಜ್ಜಿತ ವ್ಯವಸ್ಥೆ ಮಾಡಲಾಗಿತ್ತು. ಅಭ್ಯರ್ಥಿಗಳು, ಎಣಿಕೆ ಏಜೆಂಟರ ಹೊರತಾಗಿ ಹೊರಗಿನ ಯಾರಿಗೂ ಪ್ರವೇಶ ಇರಲಿಲ್ಲ. ಗುರುತು ಪತ್ರ ಇಲ್ಲದ ಯಾರನ್ನೂ ಪೊಲೀಸರು ಒಳಗೆ ಬಿಡಲಿಲ್ಲ. ಇದರಿಂದ ಎಣಿಕೆ ಕೇಂದ್ರ ಪ್ರಶಾಂತವಾಗಿತ್ತು. ಸದ್ದುಗದ್ದಲವಿಲ್ಲದೆ ಎಣಿಕೆ ಕಾರ್ಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT