ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಕಕ್ಕೇರಿದ ಕರ್ನಾಟಕ ಸಂಘದ ಸಂಘರ್ಷ!

ಹಸ್ತಕ್ಷೇಪದಿಂದ ಬೇಸತ್ತು ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ
Last Updated 28 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಶಿವಮೊಗ್ಗ:ಜಿಲ್ಲೆಯಸಾಹಿತ್ಯ ಕ್ಷೇತ್ರದ ಐಕಾನ್ ಎಂದೇ ಪ್ರಸಿದ್ಧಿ ಪಡೆದಿರುವ ಕರ್ನಾಟಕ ಸಂಘದ ಆಂತರಿಕ ಸಂಘರ್ಷ ತಾರಕಕ್ಕೇರಿದ್ದು, ಅಧ್ಯಕ್ಷ ಕೆ. ಓಂಕಾರಪ್ಪ, ಕಾರ್ಯದರ್ಶಿ ಎಚ್‌.ಎಸ್. ನಾಗಭೂಷಣ್, ಖಜಾಂಚಿ ಡಾ.ಕೆ.ಜಿ. ವೆಂಕಟೇಶ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಕನ್ನಡ ಸಾಹಿತ್ಯ ಚಟುವಟಿಕೆಯನ್ನು ನಿರಂತರವಾಗಿ ಹಮ್ಮಿಕೊಳ್ಳಲುಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕ ಸಂಘ ಕಟ್ಟಲಾಗಿತ್ತು. ನಗರದ ದಾನಿಗಳು, ಸಮಾನಮನಸ್ಕ ಸಾಹಿತ್ಯಾಸಕ್ತರು ಸೇರಿ1930ರಲ್ಲಿ ಸಂಘ ಅಸ್ತಿತ್ವಕ್ಕೆತಂದಿದ್ದರು. ಅಂದಿನ ನಗರಾಡಳಿತ ಸಂಘಕ್ಕೆ ಜಾಗ ಮಂಜೂರು ಮಾಡಿತ್ತು. ಭವನ ನಿರ್ಮಾಣಕ್ಕೆ ಹಸೂಡಿ ವೆಂಕಟಶಾಸ್ತ್ರಿಗಳು ₹ 30 ಸಾವಿರ ನೆರವು ನೀಡಿದ್ದರು.

90 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಇಂದಿಗೂ ನಿರಂತರ ಸಾಹಿತ್ಯ ಚಟುವಟಿಕೆಯನ್ನು ನಡೆಸುತ್ತಾ ಬರುತ್ತಿದೆ. ಪುಸ್ತಕ ಬಹುಮಾನಗಳ ಮೂಲಕ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ತಿಂಗಳ ಅತಿಥಿ, ಸಾಹಿತ್ಯ ಸಮಾವೇಶಗಳು, ವಿಶೇಷ ಉಪನ್ಯಾಸಗಳು, ಗೌರವ ಸದಸ್ಯತ್ವ, ಜೀವಮಾನ ಸಾಧನೆಯ ಪ್ರಶಸ್ತಿಗಳ ಮೂಲಕ ಸಾಹಿತ್ಯ ಬೆಳವಣಿಗೆಗೆ ನಿರಂತರ ಕೊಡುಗೆ ನೀಡಿದೆ. ಈಗ ಆಂತರಿಕ ಕಿತ್ತಾಟದ ಫಲವಾಗಿ ಗಮನ ಸೆಳೆದಿದೆ.

ಒಂದು ಕುಟುಂಬದ ಹಿಡಿತದಲ್ಲಿ ಸಂಘ:ಒಂದು ಕಾಲದಲ್ಲಿ ಜಿಲ್ಲೆಯ ಒಂದು ಪ್ರಬಲ ಜಾತಿಗೆ ಸೀಮಿತವಾಗಿದೆ ಎಂಬ ಆಪಾದನೆಗೆ ಒಳಗಾಗಿದ್ದ ಸಂಘ ನಂತರದ ದಿನಗಳಲ್ಲಿ ಸ್ವಲ್ಪ ಉದಾರವಾದದ ಮಾರ್ಗದಲ್ಲಿ ಸಾಗಿದಂತೆ ಕಂಡುಬಂದಿತ್ತು. ಎಲ್ಲ ಸಿದ್ಧಾಂತ, ಪ್ರಕಾರಗಳಸಾಹಿತಿಗಳನ್ನೂ ಕರೆದು ವೈವಿಧ್ಯಮಯ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಹೊಸ ಪರಂಪರೆಗೆ ನಾಂದಿ ಹಾಡಲಾಗಿತ್ತು. ಈಗ ಮತ್ತೆ ಹಳೆಯ ಹಳಿಗೆ ಮರಳುತ್ತಿದೆ. ಒಂದು ಜಾತಿಗೆ ಸೀಮಿತವಾಗಿದ್ದ ಸಂಘ ಈಗ ಒಂದು ಕುಟುಂಬದ ಹಿಡಿತಕ್ಕೆ ಜಾರುತ್ತಿದೆಎನ್ನುವುದು ಸಂಘದ ಹಲವು ಸದಸ್ಯರ ಆರೋಪ.

₹ 30 ಲಕ್ಷ ವಾರ್ಷಿಕ ಆದಾಯ: ಕರ್ನಾಟಕ ಸಂಘ ಸಾಹಿತ್ಯ ಬೆಳವಣಿಗೆಗಾಗಿ ಕಟ್ಟಿದ ಸಂಸ್ಥೆಯಾದರೂ ದಾನವಾಗಿ ಪಡೆದಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಇದರಿಂದಲೇ ವಾರ್ಷಿಕ ₹ 25 ಲಕ್ಷ ಬಾಡಿಗೆ ಬರುತ್ತದೆ. ಸಭಾಂಗಣದ ಬಾಡಿಗೆ ಸೇರಿದರೆ ವಾರ್ಷಿಕ ₹ 30 ಲಕ್ಷಕ್ಕೂ ಅಧಿಕ ಆದಾಯವಿದೆ. ಎರಡು ವರ್ಷಗಳ ಹಿಂದೆಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಹೊಸ ಆಡಳಿತ ಮಂಡಳಿ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದನ್ನು ಸಹಿಸದ ಕೆಲವು ಪಟ್ಟಭದ್ರರು ಆಂತರಿಕ ಹಸ್ತಕ್ಷೇಪ ಮಾಡುತ್ತಿದ್ದುದ್ದೇ ರಾಜೀನಾಮೆಗೆ ಕಾರಣ ಎಂದು ಸಂಘದ ಮೂಲಗಳು ತಿಳಿಸಿವೆ.

90 ವರ್ಷಕ್ಕೆ 240 ಸದಸ್ಯರು!: ಸಂಘ ಹುಟ್ಟಿ 9 ದಶಕಗಳು ಕಳೆದರೂ ಸದಸ್ಯರ ಸಂಖ್ಯೆ 240 ದಾಟಿಲ್ಲ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡಲು ಸ್ಥಾಪಿಸಿದ ಸಂಘದಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರಿಗಿಂತ ಒಂದು ಸಮುದಾಯದ ಜನರಿಗೇ ಮನ್ನಣೆ ನೀಡಲಾಗಿದೆ. ಅದರಲ್ಲೂ ಕೆಲವೇ ಕುಟುಂಬಗಳಿಗೆ ಆದ್ಯತೆ ದೊರೆತಿದೆ.

ಹಣಕಾಸು ಬಿಗಿ ನಿರ್ವಹಣೆಗೆ ಬೆಲೆ ತೆತ್ತರು:‘ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ 8 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದ ಎಚ್‌.ಎಸ್. ನಾಗಭೂಷಣ್‌ ಅವರ ರಾಜೀನಾಮೆ ಪಡೆಯಲು ಸಂಘದ ಒಳಗೆ ಷಡ್ಯಂತ್ರ ನಡೆದಿದೆ. ಜಾತ್ಯತೀತವಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಮೇಲೆ ಸಂಘದ ಸಿಬ್ಬಂದಿಯಿಂದಲೇ ಜಾತಿ ನಿಂದನೆ ದೂರು ದಾಖಲಿಸುವ ಬೆದರಿಕೆ ಒಡ್ಡಲಾಗಿತ್ತು.
ಹಣಕಾಸಿನ ವಿಚಾರದಲ್ಲಿ ಬಿಗಿ ನಿಲುವು ತಳೆದ ಖಜಾಂಚಿ ವೆಂಕಟೇಶ್ ವಿರುದ್ಧ ಸುಳ್ಳು ಆರೋಪ
ಹೊರಿಸಲಾಗಿತ್ತು. ಇಂತಹ ನಡೆಗಳಿಂದ ಮನನೊಂದು ಅವರು ರಾಜೀನಾಮೆ ನೀಡಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸಂಘದ ಮಾಜಿ ನಿರ್ದೇಶಕರೊಬ್ಬರು ಅಳಲು ತೋಡಿಕೊಂಡರು.

ಮೂವರು ಪ್ರಮುಖ ಪದಾಧಿಕಾರಿಗಳು ರಾಜೀನಾಮೆ ನೀಡಿದ ಬೆನ್ನಲ್ಲೇ ಸಂಘದ ಆಡಳಿತ ಕಚೇರಿಯ ಮೂವರು ಸಿಬ್ಬಂದಿಯೂ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT