ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇನಾಮಿ ವ್ಯಕ್ತಿಗಳ ಹೆಸರಿಗೆ ವೇತನ ವರ್ಗಾವಣೆ: ಶಾಸಕ ಕುಮಾರ್ ಬಂಗಾರಪ್ಪ ಗರಂ

ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ
Last Updated 26 ನವೆಂಬರ್ 2022, 4:48 IST
ಅಕ್ಷರ ಗಾತ್ರ

ಸೊರಬ: ‘ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅವರು ತಮ್ಮ ಪುತ್ರಿ ಸೇರಿದಂತೆ 5 ಜನರಿಗೆ ಕಾನೂನು ಬಾಹಿರವಾಗಿ ಅವರ ಬ್ಯಾಂಕ್ ಖಾತೆಗೆ ವೇತನ ಪಾವತಿ ಮಾಡಿದ್ದು, ಪ್ರಾಂಶುಪಾಲರ ವಿರುದ್ಧ ಸೂಕ್ತ ತನಿಖೆ ನಡೆಸಲು ಇಲಾಖೆಗೆಯಿಂದ ವರದಿ ಪಡೆಯಿರಿ’ ಎಂದು ಶಾಸಕ ಕುಮಾರ್ ಬಂಗಾರಪ್ಪ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಕುಮಾರ್ ಅವರಿಗೆ ಸೂಚಿಸಿದರು.

ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ, ‘ಕಾಲೇಜಿನಲ್ಲಿ ಕಾರ್ಯಭಾರ ಇಲ್ಲದಿದ್ದರೂ ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ಬೇನಾಮಿ ವ್ಯಕ್ತಿಗಳ ಖಾತೆಗೆ ವೇತನ ಪಾವತಿ ಮಾಡಿರುವುದು ಅಕ್ಷಮ್ಯ ಅಪರಾಧ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್ ಕಂಪ್ಯೂಟರ್ ಆಪರೇಟರ್ ಹುದ್ದೆ ಸೃಷ್ಟಿಸಿ ತಮ್ಮ ಪತ್ನಿ ಖಾತೆಗೆ ವೇತನ ವರ್ಗಾಯಿಸಿದ್ದಾರೆ. ಸರ್ಕಾರದ ಹಣವನ್ನು ಮನಸ್ಸಿಗೆ ಬಂದಂತೆ ಲೂಟಿ ಹೊಡೆಯುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ನೀಡಲು ನಿರ್ಣಯ ಕೈಗೊಳ್ಳಿ’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

‘ತಾಲ್ಲೂಕಿನಲ್ಲಿ ತಾಯಿ– ಮಗು ಆಸ್ಪತ್ರೆ ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಚಂದ್ರಗುತ್ತಿ ಆಸ್ಪತ್ರೆಯನ್ನು 30 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸಲಾಗಿದ್ದು, ಮೂಲ ಸೌಲಭ್ಯಗಳ ಕೊರತೆ ಎದುರಾಗದಂತೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಉತ್ತಮವಾಗಿ ದೊರೆಯುವಂತೆ ನೋಡಿಕೊಳ್ಳಿ’
ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಭು ಸಾಹುಕಾರ್ ಅವರಿಗೆ ತಿಳಿಸಿದರು.

‘ಮಾವಲಿ ಉಮಾಮಹೇಶ್ವರ ಪ್ರೌಢ ಶಾಲೆ ಸಹ ಶಿಕ್ಷಕ ಅರುಣಕುಮಾರ್ ಅವರು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಜೊತೆಗೂಡಿ ಶಾಲೆಗೆ ಸಂಸದರ ಅನುದಾನ ಕೇಳಲು ಹೋಗಿದ್ದಾರೆ’ ಎಂದು ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಕಿರಣಕುಮಾರ್ ಸಭೆ ಗಮನಕ್ಕೆ ತಂದಾಗ, ಸಿಡಿಮಿಡಿಗೊಂಡ ಕುಮಾರ್ ಬಂಗಾರಪ್ಪ, ‘ಸರ್ಕಾರಿ ವೇತನ ಪಡೆಯುತ್ತಿರುವ ಶಿಕ್ಷಕರು ಯಾರನ್ನು ಕೇಳಿ ಶಾಲೆಗೆ ರಜೆ ಹಾಕಿದ್ದಾರೆ. ಈ ಬಗ್ಗೆ ವಾರದೊಳಗೆ ವರದಿ ನೀಡಿ’ ಎಂದು ಬಿಇಒ ರಾಮಲಿಂಗಯ್ಯ ಅವರಿಗೆ ಸೂಚಿಸಿದರು.

‘ಜನಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿ ಬರುತ್ತಾರೆ ಎಂದು ತಿಂಗಳ ಮುಂಚೆ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡುವಂತೆ ತಿಳಿಸಿದ್ದರೂ ಎಚ್ಚೆತ್ತುಕೊಂಡು ಕೆಲಸ ಮಾಡಲಿಲ್ಲ. ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದೀರಿ’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಉಮಾ ನಾಯಕ್ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

‘ಆನವಟ್ಟಿ ಚಿಕ್ಕೇರಿ ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದಿವೆ. ಅಲ್ಲಿ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಹೇಳಿದರೂ ಗಮನ ನೀಡುತ್ತಿಲ್ಲ’ ಎಂದು ಹರಿಹಾಯ್ದರು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಉಮಾ ನಾಯಕ್, ಬಿಇಒ ರಾಮಲಿಂಗಯ್ಯ, ಕಾರ್ಮಿಕ ನಿರೀಕ್ಷಕ ಭೀಮೇಶ್,
ಎಂ.ಡಿ.ಉಮೇಶ್, ಯೂಸಫ್ ಸಾಬ್, ಪ್ರಭು ಮೇಸ್ತ್ರಿ, ಕಿರಣಕುಮಾರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT