ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದಪುರ: ಬಗೆಹರಿಯದ ಗಡಿ ವಿವಾದ, ಬೆಳೆ ಹಾಳು

ಸರ್ವೆ ಮಾಡಿ ಗುರುತಿಸಿಲ್ಲ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿ.ವಿ ಜಾಗ
Last Updated 29 ಜುಲೈ 2022, 4:15 IST
ಅಕ್ಷರ ಗಾತ್ರ

ಆನಂದಪುರ: ಸಮೀಪದ ಇರುವಕ್ಕಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ವರ್ಷಗಳೇ ಕಳೆದಿವೆ. ಈ ವಿಶ್ವವಿದ್ಯಾಲಯಕ್ಕೆ ವಿಸ್ತಾರವಾದ ಜಾಗ ಅವಶ್ಯ ಇರುವುದರಿಂದ ಸರ್ಕಾರ 777 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಆದರೆ, ಅದು ಕೇವಲ ದಾಖಲೆಯಲ್ಲಿ ಮಾತ್ರ ನಮೂದಾಗಿದ್ದು, ಜಾರಿಗೆ ಆಗುವ ಲಕ್ಷಣಗಳು
ಕಾಣುತ್ತಿಲ್ಲ.

ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಟ್ಟಡಗಳ ಕಾಮಾಗಾರಿ, ಕೃಷಿಗೆ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತಿದ್ದರೂ ಗಡಿ ಗುರುತಿಸುವ ಕಾರ್ಯ ಮಾತ್ರ ಮುಗಿದಿಲ್ಲ. ಇದು ಸುತ್ತಮುತ್ತಲಿನ ರೈತರಿಗೆ ನುಂಗಲಾರದ ತುತ್ತಾಗಿದೆ. ‘ನಾವು ಯಾವುದಾದರೂ ಬೆಳೆ ಬೆಳೆದರೆ ಕೃಷಿ ವಿಶ್ವವಿದ್ಯಾಲಯದವರು ಇದು ನಮ್ಮ ಜಾಗವೆಂದು ಹೇಳಿ ಬೆಳೆ ನಾಶಮಾಡಿ ಬೇಲಿ ಮಾಡುತ್ತಾರೆ’ ಎನ್ನುವ ಆತಂಕದಲ್ಲೇ ಅನೇಕ ರೈತರು ಕೃಷಿ ಮಾಡುತ್ತಿದ್ದಾರೆ.

ಕಂದಾಯ ಇಲಾಖೆಯ ಮಾಹಿತಿ ಪ್ರಕಾರ ಈವರೆಗೆ 777 ಎಕರೆಯಲ್ಲಿ ಕೇವಲ 350 ಎಕರೆ ಪೋಡಿ ಕಾರ್ಯ ಮುಗಿದಿದೆ. ಇದರಿಂದ ಕೆಲ ರೈತರಿಂದ ಒತ್ತುವರಿ ಕಾರ್ಯವು ಸಹ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಜನಪ್ರತಿನಿಧಿಗಳ ಬೆಂಬಲವೂ ಇದೆ. ಅಧಿಕಾರಿಗಳು ಬಿಡಿಸಲು ಹೋದರೆ ಜನಪ್ರತಿನಿಧಿಗಳು ಮಧ್ಯಪ್ರವೇಶ ಮಾಡುತ್ತಿದ್ದಾರೆ. ಹೀಗಾಗಿ ಪ್ರಮಾಣಿಕ ರೈತರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಗಡಿ ಗುರುತಿಸುವ ಕಾರ್ಯ ತ್ವರಿತವಾಗಿ ಮಾಡಬೇಕು ಎಂಬುದು ಈ ಭಾಗದ ರೈತರ ಮನವಿಯಾಗಿದೆ.

ಇರುವಕ್ಕಿಯ ರೈತರೊಬ್ಬರು ಸರ್ವೆ ನಂ. 27, 28ರಲ್ಲಿ ಕೃಷಿ ಮಾಡುತ್ತಿದ್ದಾರೆ. ಈ ಬಾರಿ ಅತಿಯಾದ ಮಳೆಯಿಂದಾಗಿ ಜಮೀನಿನ ಪಕ್ಕದಲ್ಲೇ ಹಾದು ಹೋದ ಹಳ್ಳ ಕೊಚ್ಚಿ ಹೋಗಿದ್ದು, ಹಳ್ಳದಲ್ಲಿ ಹರಿಯಬೇಕಾದ ನೀರು ರೈತರ ತೋಟಗಳ ಮೇಲೆ ಹರಿಯುತ್ತಿದೆ. ಇದರಿಂದ ಅಡಿಕೆ ಗಿಡಗಳಿಗೆ ಹಾನಿಯಾಗುತ್ತಿದೆ. ಅಲ್ಲದೆ ಯಥೇಚ್ಚವಾದ ಮರಳು ನೀರಿನ ಜೊತೆ ತೋಟಕ್ಕೆ ಬರುತ್ತಿದೆ. ಇದರಿಂದ ತೋಟದ ಬೆಳವಣಿಗೆ ಕುಂಠಿತವಾಗುತ್ತಿದೆ. ಸರಿಪಡಿಸಲು ಅಧಿಕಾರಿಗಳು ಬಿಡುತ್ತಿಲ್ಲ ಎಂಬುದು ರೈತರ ಅಳಲು.

‘ಕೃಷಿ ಅಧಿಕಾರಿಗಳ ಕಿರುಕುಳ’
‘ಇರುವಕ್ಕಿಯ ಸರ್ವೆ ನಂ. 27 ಹಾಗೂ 28ರಲ್ಲಿ ನಮ್ಮ ಕೃಷಿ ಭೂಮಿ ಇದೆ. ಪಕ್ಕದಲ್ಲಿ ಕೃಷಿ ವಿಶ್ವವಿದ್ಯಾಲಯದ ಜಾಗವಿದ್ದು, ಯಾವುದೇ ಸರ್ವೆ ಕಾರ್ಯ ನಡೆದಿಲ್ಲ. ಒಂದೆಡೆ ಜಮೀನಿನ ಮೇಲೆ ಗುಡ್ಡ ಕುಸಿದರೆ, ಮತ್ತೊಂದೆಡೆ ಇದರಿಂದ ನೀರು ನುಗ್ಗಿ ಬೆಳೆ ಹಾಳಾಗುತ್ತಿದೆ. ಕುಸಿದ ಮಣ್ಣು ತೆಗೆಯಲು ವಿಶ್ವವಿದ್ಯಾಲಯದ ಅಧಿಕಾರಿಗಳು ಅಡ್ಡಿ ಮಾಡುತ್ತಿದ್ದಾರೆ. ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ರೈತ ಮಂಜುನಾಥ್ ಆಗ್ರಹಿಸಿದರು.

‘ಸ್ಥಳ ಪರಿಶೀಲನೆ ನಡೆಸಲಾಗುವುದು’
‘ರೈತರಿಗೆ ತೊಂದರೆ ಆಗಿರುವುದರ ಬಗ್ಗೆ ಮಾಹಿತಿ ಇಲ್ಲ. ಪ್ರವಾಸದಲ್ಲಿದ್ದು, ಹಿಂದಿರುಗಿದ ನಂತರ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಕಲೆಹಾಕಲಾಗುವುದು. ಇನ್ನಷ್ಟು ಗಡಿ ಗುರುತಿಸುವ ಕಾರ್ಯ ಆಗಬೇಕಾಗಿದೆ. ಎಲ್ಲರ ಹಿತ ಕಾಯಲಾಗುವುದು’ ಎಂದು ಕುಲಪತಿ ಜಗದೀಶ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT