ಭಾನುವಾರ, ಸೆಪ್ಟೆಂಬರ್ 19, 2021
23 °C
ಲೋಪ– ದೋಷ ಸರಿಪಡಿಸದೆ ಜಾರಿ ಸಲ್ಲದು: ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ

ಖಾಸಗೀಕರಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ನಾಂದಿ: ಕಿಮ್ಮನೆ ರತ್ನಾಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಚರ್ಚೆಗಳಿಗೆ ಅವಕಾಶ ಕಲ್ಪಿಸದೇ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಕ್ಷೇತ್ರದ ಖಾಸಗೀಕರಣಕ್ಕೆ ನಾಂದಿ ಹಾಡಲಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.

ತಾರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದ್ದಾರೆ. ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಸಚಿವರು ಇದರ ಅಧಿಕೃತ ಉದ್ಘಾಟನೆ ಸಹ ಮಾಡಿದ್ದಾರೆ. ಶಿಕ್ಷಣ ನೀತಿಯಲ್ಲಿನ ಲೋಪದೋಷಗಳನ್ನು ಬಚ್ಚಿಟ್ಟು ಮುಚ್ಚಿದ ಲಕೋಟೆಯಲ್ಲಿ ಜಾರಿಗೆ ತರಲು ಹೊರಟಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಶಿಕ್ಷಣದಿಂದ ವಂಚಿತರಾದ ಮಕ್ಕಳು ಮತ್ತೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಯಾವ ಕ್ಷೇತ್ರ ಖಾಸಗೀಕರಣವಾದರೂ ಶಿಕ್ಷಣ ಆಗಬಾರದು ಎಂದು ಬಹುಜನರ ಆಪೇಕ್ಷೆಯಾಗಿತ್ತು. ಅಂತಹ ಶಿಕ್ಷಣ ಕ್ಷೇತ್ರ ಈ ಹೊಸ ಕಾಯ್ದೆಯಿಂದ ಮತ್ತಷ್ಟು ಪಾತಾಳಕ್ಕೆ ಇಳಿಯಲಿದೆ’ ಎಂದು ಆರೋಪಿಸಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು. ಆದರೆ, ಹೊಸ ಶಿಕ್ಷಣ ನೀತಿ ಜಾರಿಗೂ ಮೊದಲು ಸುದೀರ್ಘ ಚರ್ಚೆಯಾಗಬೇಕು. ಜನಾಭಿಪ್ರಾಯ ಕೇಳಬೇಕು. ಲೋಕಸಭೆ, ರಾಜ್ಯಸಭೆ, ವಿಧಾನಸಭೆಗಳಲ್ಲಿ ಚರ್ಚೆಯಾಗಬೇಕು. ಆದರೆ, ಈ ಹೊಸ ನೀತಿ ಎಲ್ಲಿಯೂ ಚರ್ಚೆ ಆಗಲಿಲ್ಲ.  ಏಕಾಏಕಿ ಜಾರಿಗೊಳಿಸಿ, ಅನುಷ್ಠಾನಕ್ಕೆ ತರಲು ಹೊರಟಿರುವುದು ಖಂಡನೀಯ. ಸರ್ಕಾರದ ಇಂತಹ ನಡೆಯನ್ನು ಕಾಂಗ್ರೆಸ್‌ ವಿರೋಧಿಸುತ್ತದೆ’ ಎಂದು ಹೇಳಿದರು.

‘ಅಷ್ಟಕ್ಕೂ ಈ ಶಿಕ್ಷಣ ನೀತಿ ಜಾರಿಗೆ ತರಲು ಕಸ್ತೂರಿ ರಂಗನ್‌ನಂತಹ ವಿಜ್ಞಾನಿಗಳನ್ನು ನೇಮಿಸಲಾಗಿತ್ತು. ಈ ಸಮಿತಿಯಲ್ಲಿ ಇದ್ದವರು ಸಂಘ ಪರಿವಾರದ ಸದಸ್ಯರು. ಎಲ್ಲ ಬಿಜೆಪಿ ಮುಖಂಡರು, ಅನುಯಾಯಿಗಳೇ ತುಂಬಿಕೊಂಡಿದ್ದರು. ಪೂರ್ವ ಸಿದ್ಧತೆ ಇಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ ಇದು. ನೀತಿಯ ಲೋಪದೋಷಗಳನ್ನು ಸರಿಪಡಿಸದ ಹೊರತು ಜಾರಿಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

‘ಈಗಿರುವ ಶಿಕ್ಷಣ ನೀತಿಯ ಅನ್ವಯ 3ರಿಂದ 18 ವರ್ಷದವರೆಗಿನ ಮಕ್ಕಳ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಆದರೆ, ಈ ಹೊಸ ನೀತಿಯಿಂದ ಖಾಸಗಿ ಕ್ಷೇತ್ರಗಳು ಹೆಚ್ಚಾಗಿ ಬಡ ಮಕ್ಕಳು ಓದುವುದೇ ಕಷ್ಟವಾಗುತ್ತದೆ. ಬರಿ ಶ್ರೀಮಂತರಿಗಾಗಿ ಶಾಲೆಗಳು ತೆರೆಯುತ್ತವೆ. ಇಡೀ ಶಿಕ್ಷಣ ಕ್ಷೇತ್ರ ಖಾಸಗಿ ವ್ಯಕ್ತಿಗಳ ವಶವಾಗುತ್ತದೆ’ ಎಂದು ಟೀಕಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ. ನೀತಿಯ ವಿರುದ್ಧ ಸದನದಲ್ಲೂ ಧ್ವನಿ ಎತ್ತಲಿದೆ. ಯಾವುದೆ ಕಾರಣಕ್ಕೂ ಬದಲಾವಣೆ ಮಾಡದೆ ಜಾರಿಯಾಗಲು ಕಾಂಗ್ರೆಸ್ ಬಿಡುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡ ರಾದ ಎನ್.ರಮೇಶ್, ದೇವಿಕುಮಾರ್, ಯಮುನಾ ರಂಗೇಗೌಡ, ರಂಗೇಗೌಡ, ರಾಘವೇಂದ್ರ ಇದ್ದರು.

‘ಏಕವಚನ ಆರೋಪ ಕೆಲವರ ಸೃಷ್ಟಿ’

‘ಪಕ್ಷದ ವರಿಷ್ಠರಾದ ಡಿ.ಕೆ.ಶಿವಕುಮಾರ್ ನನ್ನನ್ನು ಏಕವಚನದಲ್ಲಿ ಕರೆದಿಲ್ಲ. ಇದೆಲ್ಲ ಕೆಲವರ ಸೃಷ್ಟಿ’ ಎಂದು ಕಿಮ್ಮನೆ ರತ್ನಾಕರ ಪ್ರತಿಕ್ರಿಯಿಸಿದರು.

‘ಕೆಲವರು ದುಡ್ಡಿನ ಚೀಲ ಹಿಡಿದುಕೊಂಡು ಪಕ್ಷ ಸೇರಿದವರು ಇಂತಹ ಕಿತಾಪತಿ ಮಾಡುತ್ತಾರೆ. ಇದರಿಂದ ತಮಗೆ ಲಾಭವಾಗಬಹುದು ಎಂಬ ಭ್ರಮೆಯಲ್ಲಿದ್ದಾರೆ. ನಾನು ಸರಳ ರಾಜಕಾರಣಿ. ಅಧಿಕಾರ ಸೇರಿ ಯಾವ ಲಾಭದ ಆಸೆಯಿಂದ ಈ ಪಕ್ಷಕ್ಕೆ ಬಂದವನಲ್ಲ. ನಮ್ಮ ತಾತನ ಕಾಲದಿಂದಲೂ ಕಾಂಗ್ರೆಸ್‌ನಲ್ಲಿದ್ದೇವೆ. ಮುಂದೆಯೂ ಇರುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು