ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಕಿತ್ತೂರು ಚನ್ನಮ್ಮ ಸ್ಫೂರ್ತಿ: ಉಪನ್ಯಾಸಕಿ ಡಿ.ಪಿ. ಪ್ರತಿಭಾ

ಕಿತ್ತೂರು ರಾಣಿ ಚನ್ನಮ್ಮ ಜಯಂತಿ
Last Updated 24 ಅಕ್ಟೋಬರ್ 2021, 4:19 IST
ಅಕ್ಷರ ಗಾತ್ರ

ಶಿವಮೊಗ್ಗ:ಕಿತ್ತೂರು ರಾಣಿ ಚನ್ನಮ್ಮ ಸ್ತ್ರೀ ಸಮುದಾಯಕ್ಕೆ ಒಂದು ಪ್ರೇರಣಾ ಶಕ್ತಿ. ಪ್ರಚಲಿತ ಮತ್ತು ಆಧುನಿಕ ಯುಗದ ಸ್ತ್ರೀ ತಲ್ಲಣದ ಒಂದು ಸಂವೇದನೆಯಾಗಿ ರಾಣಿ ಚನ್ನಮ್ಮ ನಿಂತಿದ್ದು, ಅವರ ಜಯಂತಿಯ ಸಂಭ್ರಮ ಕೇವಲ ಸಾಂಕೇತಿಕವಾಗಿರದೆ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಚನ್ನಮ್ಮನ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದುಬಸವೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಿ.ಪಿ. ಪ್ರತಿಭಾ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ದಕ್ಷಿಣ ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸದಲ್ಲಿ ವೀರ ಮಹಿಳೆ ಕಿತ್ತೂರು ಚನ್ನಮ್ಮ ಅಗ್ರಗಣ್ಯರು. ವೀರತನ, ಧೈರ್ಯ, ಶೌರ್ಯ ಹಾಗೂ ಹೋರಾಟವನ್ನು ಮೈಗೂಡಿಸಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ರಾಜ್ಯಭಾರ ಮಾಡಿದಂತಹ ಕೆಚ್ಚೆದೆಯ ಮಹಿಳೆ ಚನ್ನಮ್ಮ ಎಂದು ಬಣ್ಣಿಸಿದರು.

1824ರಲ್ಲಿ ಬ್ರಿಟಿಷರ ವಿರುದ್ಧದ ದಂಗೆಯಿಂದ ಚನ್ನಮ್ಮ ಪ್ರಚಾರಕ್ಕೆ ಬಂದಿರಬಹುದು. ಆದರೆ, ಕಿತ್ತೂರಿನ ಇತಿಹಾಸ ಅದಕ್ಕಿಂತ ಮುಂಚಿನಿಂದಲೂ ಪ್ರಾರಂಭವಾಗಿ 12 ಜನ ರಾಜರು ಯಶಸ್ವಿಯಾಗಿ ಆಳಿದ್ದಾರೆ. ದತ್ತು ಮಗನನ್ನು ಸ್ವೀಕಾರ ಮಾಡಿ, ಆತನನ್ನು ಪಟ್ಟದಲ್ಲಿ ಕೂರಿಸಿ ಚನ್ನಮ್ಮ ಆಳ್ವಿಕೆ ನಡೆಸುತ್ತಿರುವಾಗ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಬೇಕೆಂಬ ದುರಾಸೆಯಿಂದ ಬ್ರಿಟಿಷರು ದತ್ತು ಮಕ್ಕಳಿಗೆ ಅಧಿಕಾರದ ಹಕ್ಕಿಲ್ಲ ಎಂಬ ಕರಾಳ ಶಾಸನವನ್ನು ಜಾರಿಗೆ ತರುತ್ತಾರೆ. ಇದನ್ನುವಿರೋಧಿಸಿ ಹೋರಾಟ ನಡೆಸಿದ ಚನ್ನಮ್ಮ ಯಾವ ಆಮಿಷಕ್ಕೂ ಬಲಿಯಾಗದೇ ತನ್ನ ಸಂಸ್ಥಾನವನ್ನು ಉಳಿಸಿಕೊಳ್ಳುತ್ತಾಳೆ. ಚನ್ನಮ್ಮಳ ಇತಿಹಾಸ ದೇಶದಾದ್ಯಂತ ಸಾರಬೇಕು. ಕೇವಲ ಬ್ರಿಟಿಷರ ವಿರುದ್ಧವಲ್ಲ, ತನ್ನ ಸುತ್ತ ಇದ್ದವರ ಪಿತೂರಿಯ ವಿರುದ್ಧವೂ ಚನ್ನಮ್ಮ ಹೋರಾಡಿದ್ದರು. ವರ್ತಮಾನದಲ್ಲಿ ಸತ್ತು ಭವಿಷ್ಯದಲ್ಲಿ ಬದುಕಿದವರು ಚನ್ನಮ್ಮ ಎಂದರು.

ಕೊನೆಯವರೆಗೂ ಬ್ರಿಟಿಷರಿಗೆ ಬಗ್ಗದ, ಅವರ ಯಾವುದೇ ಷರತ್ತಿಗೂ ಮಣಿಯದ ಚನ್ನಮ್ಮ 52ನೇ ವಯಸ್ಸಿನಲ್ಲಿ ವೀರಮರಣ ಹೊಂದುತ್ತಾರೆ. ಆದರೆ, ಆಕೆಯ ಆಡಳಿತಾವಧಿಯಲ್ಲಿ ಕೈಗೊಂಡ ಸುಧಾರಣೆ ಮತ್ತು ಜನಪ್ರಿಯ ಆಡಳಿತ ಇಂದಿಗೂ ನೆನಪಿಸುವಂತಹುದು. ಆಕೆಯ ಸಾಧನೆ ಸ್ತ್ರೀ ಸಮಾಜಕ್ಕೆ ಪ್ರೇರಣೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಸರ್ಕಾರ ಕಿತ್ತೂರು ಚನ್ನಮ್ಮನ ಶೌರ್ಯ ಮತ್ತು ಧೈರ್ಯ ಎಲ್ಲ ಮಹಿಳೆಯರಿಗೆ ಆದರ್ಶವಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಜೆ. ರಾಜಶೇಖರ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಮುಖರಾದ ಎಚ್.ವಿ. ಮಹೇಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್, ಜಗದೀಶ್, ಮಂಡೇನಕೊಪ್ಪ ದೇವರಾಜ್, ಚೆನ್ನಪ್ಪ, ಮಮತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT