ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ‘ಕಸ್ತೂರಿ ರಂಗನ್‌ ವರದಿ: ಆರಗ ಹೇಳಿಕೆ ಸುಳ್ಳು’

ಕೆಪಿಸಿಸಿ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಆರೋಪ
Last Updated 19 ಮಾರ್ಚ್ 2023, 7:57 IST
ಅಕ್ಷರ ಗಾತ್ರ

ಶಿವಮೊಗ್ಗ: ಡಾ.ಕಸ್ತೂರಿ ರಂಗನ್ ವರದಿ ಜಾರಿಯಾಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸುಳ್ಳು ಹೇಳಿಕೆ ನೀಡಿ ಮಲೆನಾಡಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಆರೋಪಿಸಿದರು.

ವಿಧಾನಸಭೆಯಲ್ಲಿ ತಾವು ಮಂಡಿಸಿದ ವಾದದ ಪರಿಣಾಮ ಕಸ್ತೂರಿ ರಂಗನ್ ವರದಿ ತಡೆ ಹಿಡಿಯಲಾಗಿದೆ ಎಂದು ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ನಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಸಮಾವೇಶದಲ್ಲಿ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇದು ಸುಳ್ಳಿನ ಪರಮಾವಧಿ. ಚುನಾವಣಾ ಸಂದರ್ಭದಲ್ಲಿ ಮಾತ್ರ ಕಸ್ತೂರಿ ರಂಗನ್ ವರದಿ ಹಾಗೂ ಅಡಿಕೆ ಬಗ್ಗೆ ಇವರಿಗೆ ಎಚ್ಚರವಾಗುತ್ತದೆ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಜಿಲ್ಲೆಯ 475 ಹಳ್ಳಿಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗಲಿದೆ. ಆದರೂ ಆರಗ ತಮ್ಮ ವಾದದಿಂದಾಗಿ ಈ ವರದಿ ತಡೆ ಹಿಡಿಯಲಾಗಿದೆ ಎಂದು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕ್ಷೇತ್ರದ ಜನರ ಅನುಕಂಪ ಪಡೆಯುವ ಸಲುವಾಗಿ ಹೇಳಿಕೆ ನೀಡಿದ್ದಾರೆ. 10 ಜಿಲ್ಲೆಯ 1,572 ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಾಗಲಿದೆ. ಇದು ಅರಣ್ಯ ಭಾಗದಲ್ಲಿ ವಾಸ ಇರುವವರಿಗೆ ಕಂಟಕವಾಗಲಿದೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಾಗಿ ನರೇಂದ್ರ ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಇದು ಗೊತ್ತಿಲ್ಲದವರಂತೆ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಈ ವರದಿ ಜಾರಿಗಾಗಿ ನಾಲ್ಕು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದು ಕೇಂದ್ರದ ಬಿಜೆಪಿ ಸರ್ಕಾರ. ಇದರಲ್ಲಿ ಸಂಸತ್ ಸದಸ್ಯರಾಗಿದ್ದ ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಪಾಲು ಕೂಡ ಇದೆ. ಇವರು ಪ್ರಬಲವಾಗಿ ಸಂಸತ್ತಿನಲ್ಲಿ ವಿರೋಧ ಮಾಡಿಲ್ಲ. ಅವರ ನಿರ್ಲಕ್ಷ್ಯದಿಂದಾಗಿ ಈ ವರದಿ ಜಾರಿಯಾಗುತ್ತಿದೆ ಎಂದರು.

ಡಬಲ್ ಎಂಜಿನ್ ಸರ್ಕಾರ ಮಲೆನಾಡಿನ ನಿವಾಸಿಗಳಿಗೆ ಮೋಸ ಮಾಡಲು ಹೊರಟಿದೆ. ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದರೂ ಕಾನೂನು ಜ್ಞಾನ ಇಲ್ಲದವರಂತೆ ಮಾತನಾಡುತ್ತಿದ್ದಾರೆ. ವರದಿ ಅನುಷ್ಠಾನ ಅಂತಿಮ ಹಂತದಲ್ಲಿದೆ. ಈ ವರದಿ ಜಾರಿಯಾಗುವುದಿಲ್ಲ ಎಂದು ರಾಜ್ಯಕ್ಕೆ ಭೇಟಿ ನೀಡುವ ಮೋದಿಯವರಿಂದಲೇ ಹೇಳಿಕೆ ಕೊಡಿಸಲಿ ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ರಮೇಶ್ ಇಕ್ಕೇರಿ, ಧರ್ಮರಾಜ್, ಜಿ.ಡಿ. ಮಂಜುನಾಥ, ದೀಪಕ್ ಸಿಂಗ್, ಖಲೀಂ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT