ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯಕದಲ್ಲೇ ‘ಕೈಲಾಸ’ ಕಾಣುತ್ತಿರುವ ಮಹಾಬಲೇಶ್ವರ್

Last Updated 8 ಜೂನ್ 2022, 3:01 IST
ಅಕ್ಷರ ಗಾತ್ರ

ಸಾಗರ: ಕೃಷಿ ಲಾಭದಾಯಕವಲ್ಲ, ಕೃಷಿಗೆ ಕಾರ್ಮಿಕರ ಕೊರತೆ ಇದೆ, ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲ... ಎಂದೆಲ್ಲ ದೂರು ಹೇಳುವವರು ಒಮ್ಮೆ ಸಾಗರ ತಾಲ್ಲೂಕಿನ ಕಲಸಿಪೇಟೆ ಗ್ರಾಮದ ಕೆ.ವಿ.ಮಹಾಬಲೇಶ್ವರ್ ಅವರ ಕೃಷಿ ಭೂಮಿಗೆ ಬರಬೇಕು.

ಶ್ರದ್ಧೆ, ಪ್ರಾಮಾಣಿಕತೆಯನ್ನು ಪಣಕ್ಕಿಟ್ಟಂತೆ ಭೂಮಿಯಲ್ಲಿ ಬೆವರು ಹರಿಸಿದರೆ ದೊಡ್ಡಮಟ್ಟದ ಯಶಸ್ಸು ನಮ್ಮದಾಗುತ್ತದೆ ಎಂಬ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ.

30 ವರ್ಷಗಳ ಹಿಂದೆ ಮಹಾಬಲೇಶ್ವರ್ ಬಳಿ ಇದ್ದದ್ದು ಕೇವಲ 30 ಗುಂಟೆ ಬಾಗಾಯ್ತು. ಅದರ ಮೇಲೆ ₹ 80,000 ಮೊತ್ತದ ಸರ್ಕಾರಿ ಸಾಲವೂ ಇತ್ತು. ಈಗ ಅವರು
50 ಎಕರೆ ವಿಸ್ತೀರ್ಣದ ಕೃಷಿ ಭೂಮಿಯ ಒಡೆಯ. ಅಡಿಕೆ, ಬಾಳೆ, ರಬ್ಬರ್, ಕಾಳುಮೆಣಸು, ದಾಲ್ಚಿನ್ನಿ, ಅಗರ್‌ವುಡ್, ಅನಾನಸ್ ಹೀಗೆ ತರಹೇವಾರಿ ಬೆಳೆಗಳನ್ನು ಬೆಳೆಯುವ ಮೂಲಕ ಮಹಾಬಲೇಶ್ವರ್ ಕೃಷಿಯಲ್ಲಿ ಗಮನ ಸೆಳೆಯುವಂತಹ ಸಾಧನೆ ಮಾಡುತ್ತಿದ್ದಾರೆ.

ಕೃಷಿಯಲ್ಲಿ ಸಾಂಪ್ರದಾಯಿಕ ಜ್ಞಾನದ ಜೊತೆಗೆ ಆಯಾ ಕಾಲದ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ನಂಬಿದ್ದಾರೆ.

ಬೆಳೆಗಳಿಗೆ ಗೊಬ್ಬರ ಮತ್ತು ನೀರನ್ನು ಪ್ರತ್ಯೇಕವಾಗಿ ನೀಡುವ ಬದಲು ಒಟ್ಟೊಟ್ಟಿಗೆ ಉಣಿಸುವ ವಿಧಾನವನ್ನು ಅವರು ಅನುಸರಿಸುತ್ತಿದ್ದಾರೆ. ಇದರಿಂದಾಗಿ ಗೊಬ್ಬರ ಒಣಗದೆ ತೇವಾಂಶ ಕಾಯ್ದುಕೊಳ್ಳುತ್ತದೆ. ಅಲ್ಲದೇ ನೀರು ಹಾಗೂ ಗೊಬ್ಬರವು ಎಲೆ ಮತ್ತು ಬೇರಿಗೆ ಚೆನ್ನಾಗಿ ದಕ್ಕುತ್ತದೆ. ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂಬುದನ್ನು ಅವರು ತಮ್ಮ ಅನುಭವದಿಂದ ಕಂಡುಕೊಂಡಿದ್ದಾರೆ.

‘ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೃಷಿ ಕೈಗೊಳ್ಳುತ್ತಿರುವ ನಿಮಗೆ ಕೃಷಿ ಕಾರ್ಮಿಕರ ಕೊರತೆಯ ಸಮಸ್ಯೆ ಕಾಡಿಲ್ಲವೆ’ ಎಂದು ಪ್ರಶ್ನಿಸಿದರೆ, ‘ಕಾರ್ಮಿಕರನ್ನು ನಮ್ಮ ಜೊತೆಗಾರರು ಎಂದು ನಾವು ಪರಿಗಣಿಸಿದರೆ ಅವರ ಕೊರತೆ ಕಾಡುವುದಿಲ್ಲ. ನಿರಂತರವಾಗಿ ಅವರ ಏಳುಬೀಳುಗಳಿಗೆ ನಾವು ಸ್ಪಂದಿಸಬೇಕು. ನಮ್ಮ ಉತ್ಪನ್ನದ ಒಂದು ಭಾಗವನ್ನು ಕಾರ್ಮಿಕರಿಗೆ ನೀಡುವುದು ನ್ಯಾಯಯುತ ಎಂಬ ಭಾವನೆ ನಮ್ಮಲ್ಲಿರುವುದರಿಂದ ಕಾರ್ಮಿಕರ ಕೊರತೆ ಕಾಡಿಲ್ಲ’ ಎಂದು ಅವರು ಉತ್ತರಿಸುತ್ತಾರೆ.

ಉದ್ಯೋಗಖಾತ್ರಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ
ಗೊಳಿಸಲು ಮಹಾಬಲೇಶ್ವರ್ ಅವರ ಬಳಿ ಉಪಾಯವೊಂದಿದೆ. ಪ್ರತಿಯೊಂದು ಊರಿನಲ್ಲಿ ಕೃಷಿಕರು ನಮಗೆ ಇಷ್ಟು ಕಾರ್ಮಿಕರು ಇಷ್ಟು ದಿನದ ಮಟ್ಟಿಗೆ ಬೇಕು ಎಂದು ಪಂಚಾಯಿತಿಗೆ ಅರ್ಜಿ ನೀಡಬೇಕು. ಪಂಚಾಯಿತಿ ಕಾರ್ಮಿಕರನ್ನು ಪೂರೈಸಬೇಕು. ಶೇ 50ರಷ್ಟು ಕೂಲಿ ಹಣವನ್ನು ಸರ್ಕಾರ, ಉಳಿದ ಶೇ 50ರಷ್ಟನ್ನು ಕೃಷಿಭೂಮಿ ಮಾಲೀಕರು ಪಾವತಿಸಬೇಕು. ಆಗ ವರ್ಷಪೂರ್ತಿ ಕಾರ್ಮಿಕರಿಗೆ ಕೆಲಸ ದೊರಕುತ್ತದೆ. ಕೃಷಿಗೂ ಕಾರ್ಮಿಕರ ಕೊರತೆ ಕಾಡುವುದಿಲ್ಲ ಎಂಬ ಯೋಚನೆ ಅವರದ್ದಾಗಿದೆ.

ಬೆಳೆಗಳ ಬಗ್ಗೆ ನಿರಂತರ ನಿಗಾ ವಹಿಸಿದರೆ ಮಾತ್ರ ರೋಗಗಳನ್ನು ಹತೋಟಿಗೆ ತರಬಹುದು ಎಂಬ ನಂಬಿಕೆಯಿಂದ ಅವರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಅವರ ಕೃಷಿ ಉತ್ಪನ್ನಗಳಿಗೆ ರೋಗಗಳ ಕಾಟ ಅಷ್ಟಾಗಿ ತಟ್ಟಿಲ್ಲ. ಆದರೆ, ಬೆಳೆದ ಬೆಳೆಗಳ
ಪೈಕಿ ಶೇ 25ರಷ್ಟು ಬೆಳೆ ಮಂಗಗಳ ಪಾಲಾಗುತ್ತಿದೆ. ‘ಸರ್ಕಾರ ಮಂಕಿ ಪಾರ್ಕ್ ನಿರ್ಮಿಸುವುದೊಂದೇ ಮಂಗಗಳ ಹಾವಳಿ ತಡೆಯಲು ಇರುವ ಮಾರ್ಗ’ ಎಂದು ಅವರು ಹೇಳುತ್ತಾರೆ.

‘ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈಗಿರುವ ವ್ಯವಸ್ಥೆಯಲ್ಲಿ ವರ್ತಕರು ಕೃಷಿ ಉತ್ಪನ್ನಗಳ ಬೆಲೆಯನ್ನು ನಿರ್ಧರಿಸುತ್ತಾರೆ. ಆದರೆ, ಒಂದು ನಿಗದಿತ ದರಕ್ಕಿಂತ ಕಡಿಮೆ ಮೊತ್ತಕ್ಕೆ ನನ್ನ ಕೃಷಿ ಉತ್ಪನ್ನವನ್ನು ಮಾರಾಟ ಮಾಡುವುದಿಲ್ಲ ಎಂದು ನಿರ್ಧರಿಸುವ ಅಧಿಕಾರವನ್ನು
ರೈತರಿಗೆ ನೀಡಬೇಕು’ ಎಂಬುದು ಅವರ ಒತ್ತಾಯವಾಗಿದೆ.

ಕೃಷಿಕರಾದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಹಾಗೆಂದು ಉನ್ನತ ಶಿಕ್ಷಣ ಪಡೆದ ಮಾತ್ರಕ್ಕೆ ಸರ್ಕಾರಿ ಅಥವಾ ಖಾಸಗಿ ಉದ್ಯೋಗಕ್ಕೆ ತೆರಳಲೇಬೇಕು ಎಂದೇನೂ ಇಲ್ಲ. ಕೃಷಿಯಲ್ಲೇ ತೊಡಗಿಕೊಳ್ಳುವ ಮುಕ್ತ ಅವಕಾಶ ಕೃಷಿಕರ ಮಕ್ಕಳಿಗೆ ಇದ್ದೇ ಇರುತ್ತದೆ. ಆದರೆ, ಕೃಷಿಯ ಕಾರಣಕ್ಕೆ ಕೃಷಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಲುವನ್ನು ಅವರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT