ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಹುಡುಕಾಟದ ಕೃಷಿಕ

Last Updated 4 ಆಗಸ್ಟ್ 2021, 5:21 IST
ಅಕ್ಷರ ಗಾತ್ರ

ಸಾಗರ: ಕೃಷಿಯಲ್ಲಿ ಅನೇಕ ಬಾರಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ರೈತರು ಪರದಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚಿನವರು ಹತಾಶರಾಗಿ ಬೆಳೆಯನ್ನು ರಸ್ತೆಗೆ ಚೆಲ್ಲಲು ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ರೈತರ ಕೈಹಿಡಿಯುತ್ತದೆ. ಇದಕ್ಕೆ ಮಾದರಿಯಾಗಿ ನಿಲ್ಲುತ್ತಾರೆ ಸಾಗರ ತಾಲ್ಲೂಕಿನ ಚಿಪ್ಪಳಿ–ಲಿಂಗದಹಳ್ಳಿ ಗ್ರಾಮದ ನಾಗೇಂದ್ರ ಸಾಗರ್.

ಬಿ.ಕಾಂ ಪದವೀಧರರಾಗಿರುವ ನಾಗೇಂದ್ರ ಸಾಗರ್ ಕೆಲಕಾಲ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಪತ್ರಕರ್ತರಾಗಿದ್ದರು. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಕೃಷಿಯತ್ತ ಆಸಕ್ತಿ ಬೆಳೆಯಲು ಹೆಚ್ಚು ಕಾಲ ಬೇಕಾಗಿರಲಿಲ್ಲ. ಸಾಗರ ತಾಲ್ಲೂಕಿನ ಆನಂದಪುರ ಸಮೀಪ ತಮ್ಮ ತಂದೆಯ ಹೆಸರಿನಲ್ಲಿದ್ದ ಬೀಳು ಬಿದ್ದಿದ್ದ 9 ಎಕರೆ ಕೃಷಿಭೂಮಿಯನ್ನು ಅಭಿವೃದ್ಧಿ ಪಡಿಸಲು ಬೆಂಗಳೂರು ಬಿಟ್ಟು 1992ರಲ್ಲಿ ಬಂದರು.

ಅಡಿಕೆ, ತೆಂಗು, ರಬ್ಬರ್, ವಿವಿಧ ಜಾತಿಯ ಮಾವಿನ ತಳಿಗಳು ಸೇರಿ ಪಶು ಸಂಗೋಪನೆಯನ್ನೂ ಕೈಗೊಂಡು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡ ನಾಗೇಂದ್ರ ಸಾಗರ್, 1998ರಲ್ಲಿ ಚಿಪ್ಪಳಿ–ಲಿಂಗದಹಳ್ಳಿ ಗ್ರಾಮದಲ್ಲಿ ಮೂರು ಎಕರೆ ಭೂಮಿಯನ್ನು ಖರೀದಿಸಿ ಕೃಷಿಗೆ ಮುಂದಾದರು.

ಕೃಷಿಗೆ ಕಾಡುಪ್ರಾಣಿಗಳ ಕಾಟ ಹೆಚ್ಚಾದಾಗ ಅವುಗಳಿಂದ ಪಾರಾಗಲು ಸುಗಂಧ ದ್ರವ್ಯಗಳ ಬೆಳೆ ಬೆಳೆದು ಅದರ ದ್ರವ್ಯ ಉತ್ಪಾದನಾ ಘಟಕ ಆರಂಭಿಸಿದ್ದು ನಾಗೇಂದ್ರ ಸಾಗರ್ ಅವರ ಹೆಗ್ಗಳಿಕೆಯಾಗಿದೆ. ಹೈನುಗಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಂಡ ಅವರು ಸಾವಯವ ಗೊಬ್ಬರ ತಯಾರಿಸಿ ಪ್ರತಿವರ್ಷ ನೂರಕ್ಕೂ ಹೆಚ್ಚು ಟನ್ ಗೊಬ್ಬರ ಮಾರಾಟ ಮಾಡುತ್ತಾರೆ.

ದನ, ಕರುಗಳಿಗೆ ಬೇಕಾದ ಸಮತೋಲಿತ ಪಶು ಆಹಾರವನ್ನೂ ತಯಾರಿಸಿ ಅದನ್ನೇ ಒಂದು ಉದ್ಯಮವಾಗಿ ಮಾರ್ಪಡಿಸಿರುವ ಅವರು ತಿಂಗಳಿಗೆ 400 ಚೀಲ ಪಶು ಆಹಾರವನ್ನು ರೈತರಿಗೆ ಮಾರಾಟ ಮಾಡುತ್ತಾರೆ.

ಹವ್ಯಾಸಕ್ಕೆ ಎಂದು ಆರಂಭವಾದ ನಾಗೇಂದ್ರ ಸಾಗರ್ ಅವರ ಜೇನು ಕೃಷಿ 15 ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜೇನು ಕುಟುಂಬದ ತಳಿಯನ್ನು ಅಭಿವೃದ್ಧಿಗೊಳಿಸುವವರೆಗೆ ಬಂದು ನಿಂತಿದೆ. ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಜೇನು ಕುಟುಂಬದ ಸಂವರ್ಧನ ಕಾರ್ಯದಲ್ಲಿ ಅವರು ತೊಡಗಿದ್ದು, ಜೇನು ಕೃಷಿಯನ್ನು ಕೈಗೊಳ್ಳುವವರಿಗೆ ಮಾರ್ಗದರ್ಶಕರೂ ಆಗಿದ್ದಾರೆ.

ಕೋವಿಡ್ ಕಾರಣಕ್ಕೆ ರಾಜ್ಯದಾದ್ಯಂತ ಎರಡನೇ ಬಾರಿ ಲಾಕ್‌ಡೌನ್ ಹೇರಿಕೆಯಾದ ಸಂದರ್ಭದಲ್ಲಿ ನಾಗೇಂದ್ರ ಸಾಗರ್ ಅವರ ತೋಟದಲ್ಲಿನ ಬಾಳೆಗೊನೆಗಳು ಕಟಾವಿಗೆ ಬಂದಿದ್ದವು. ಲಾಕ್‌ಡೌನ್ ಆಗಿದ್ದರಿಂದ ಬಾಳೆಗೊನೆಗಳನ್ನು ಕೇಳುವವರೇ ಇರಲಿಲ್ಲ. ಹಾಗೆಂದು ನಾಗೇಂದ್ರ ಸಾಗರ್ ಕೈಚೆಲ್ಲಿ ಕೂರಲಿಲ್ಲ.

ವ್ಯರ್ಥವಾಗುವ ಬಾಳೆಹಣ್ಣನ್ನು ಒಣಗಿಸಿ ಸುಕೇಳಿ ಮಾಡಬಾರದೇಕೆ ಎಂದು ಆಲೋಚಿಸಿದ ಅವರು, ಸೋಲಾರ್ ಡ್ರೈಯರ್ ಮೂಲಕ ಬಾಳೆಹಣ್ಣನ್ನು ಒಣಗಿಸಿ ಸುಕೇಳಿ ತಯಾರಿಸಿ ಆರಂಭದಲ್ಲಿ ಬಂಧುಗಳಿಗೆ, ಸ್ನೇಹಿತರಿಗೆ ಕೊಟ್ಟು ಅಭಿಪ್ರಾಯ ಪಡೆದರು. ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಾಗ ಸುಕೇಳಿಗೆ ಹೆಚ್ಚಿನ ಬೇಡಿಕೆ ಬಂದಿತು. ‘ಕಳೆದ ಮೂರು ತಿಂಗಳಲ್ಲಿ ಎರಡು ಕ್ವಿಂಟಲ್‌ನಷ್ಟು ಸುಕೇಳಿ ಮಾರಾಟ ಮಾಡಿದ್ದೇವೆ’ ಎಂದು ನಾಗೇಂದ್ರ ಸಾಗರ್ ಹೆಮ್ಮೆಯಿಂದ ಹೇಳುತ್ತಾರೆ.

ಸುಕೇಳಿ ತಯಾರಿಕೆ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ಅವರು, ಸುಸಜ್ಜಿತವಾದ ಹಣ್ಣು ಸಂಸ್ಕರಣ ಘಟಕವನ್ನು ಆಧುನಿಕವಾಗಿ ತಯಾರಿಸುವ ಯೋಚನೆ ಮಾಡಿದ್ದಾರೆ. ಈ ಮೂಲಕ ಅನಾನಸ್ ಸೇರಿ ಈ ಭಾಗದ ಬೆಳೆಗಳ ಮೌಲ್ಯವರ್ಧನೆ ಮಾಡುವ ಜೊತೆಗೆ ಒಂದಿಷ್ಟು ಉದ್ಯೋಗ ಸೃಷ್ಟಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ನಾಗೇಂದ್ರ ಸಾಗರ್ ಅವರ ಈ ಎಲ್ಲ ಕಾಯಕಕ್ಕೆ ಸ್ನಾತಕೋತ್ತರ ಪದವೀಧರೆಯಾಗಿರುವ ಅವರ ಪತ್ನಿ ವಾಣಿಶ್ರೀ ಜೊತೆಯಾಗಿದ್ದಾರೆ.

ಡ್ರೈಯರ್ ರೈತರಿಗೆ ಪ್ರಯೋಜನಕಾರಿ

ಒಂದು ಡ್ರೈಯರ್ ಅನ್ನು ಹೊಂದುವ ಮೂಲಕ ಆಹಾರ ಸಂಸ್ಕರಣೆ ಮಾಡಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದು ಬಹಳ ದಿನಗಳ ಕನಸಾಗಿತ್ತು. ಈ ವರ್ಷ ತೋಟಗಾರಿಕೆ ಇಲಾಖೆ ನೀಡಿದ ಸಬ್ಸಿಡಿಯಿಂದ ಸೋಲಾರ್ ಡ್ರೈಯರ್ ಕೊಂಡುಕೊಂಡೆ. ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ವಿನ್ಯಾಸಪಡಿಸಿರುವ ಈ ಡ್ರೈಯರ್ ರೈತರಿಗೆ ಪ್ರಯೋಜನಕಾರಿಯಾಗಿದೆ.

–ನಾಗೇಂದ್ರ ಸಾಗರ್, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT