ಸೋಮವಾರ, ಸೆಪ್ಟೆಂಬರ್ 20, 2021
29 °C
ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಾಣಲು ಮುಂದಾದ ಯುವ ರೈತ

ಬಿಬಿಎಂ ಪದವೀಧರನ ಕೃಷಿ ಪ್ರೀತಿ

ಎಚ್.ಎಸ್. ರಘು Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಕೃಷಿ ಪ್ರೀತಿ ಹಚ್ಚಿಕೊಂಡಿರುವ ಬಿಬಿಎಂ ಪದವೀಧರ ಸಂದೇಶ್ ಕೃಷಿ ಕ್ಷೇತ್ರದಲ್ಲಿ ಹಲವು ಪ್ರಯೋಗಗಳ ಮೂಲಕ ಪ್ರಗತಿ ಕಾಣುತ್ತಿದ್ದಾರೆ.

ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ರೈತ ಸಂದೇಶ್ ಪದವಿ ಪಡೆದರೂ, ವಿದ್ಯಾಭ್ಯಾಸ ಮುಂದುವರಿಸಿ ಕಂಪನಿ ಕೆಲಸಕ್ಕೆ ಹೋಗದೆ ಗ್ರಾಮದಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಗ್ರಾಮ ತೊರೆದು ಪಟ್ಟಣ ಸೇರಿ ವೃತ್ತಿ ನಿರ್ವಹಿಸುವವರ ಮಧ್ಯೆ ಸಂದೇಶ್ ಕೃಷಿ ಚಟುವಟಿಕೆಯಲ್ಲಿ ತೃಪ್ತಿ ಕಾಣುತ್ತಿದ್ದಾರೆ.

ಸುಮಾರು 9 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಂದೇಶ್‌ ಸಾವಯವ ಕೃಷಿ ಪದ್ಧತಿ ಜತೆ ಮಿತವಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

ಅಡಿಕೆ, ತೆಂಗು, ಬಾಳೆ, ಶುಂಠಿ, ಕಾಳುಮೆಣಸು, ಕರ್ಬೂಜ, ಕಲ್ಲಂಗಡಿ, ಮಾವು, ಶ್ರೀಗಂಧ, ಸಾಗುವನಿ ಸೇರಿ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಕೃಷಿ ಭೂಮಿಯಲ್ಲಿ ದೀರ್ಘಾವಧಿಯ ಹಣ್ಣುಗಳನ್ನು ಬೆಳೆಯಲು ತಯಾರಿ ನಡೆಸಿದ್ದಾರೆ. ಪ್ರಸ್ತುತ ತಮ್ಮ ಕೃಷಿ ಭೂಮಿಯಲ್ಲಿ ವಿವಿಧ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಶುಂಠಿ ಬೆಳೆಗೆ ಉತ್ತಮ ಬೆಲೆ ದೊರೆಯದ ಕಾರಣ ಸ್ವಲ್ಪ ಪ್ರಮಾಣದ ನಷ್ಟ ಅನುಭವಿಸಿದ್ದಾರೆ.

‘ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ಮಣ್ಣಿನ ಫಲವತ್ತತೆ ಪ್ರಮುಖ ಪಾತ್ರ ವಹಿಸುತ್ತದೆ. ರೈತರು ಮಣ್ಣು ಪರೀಕ್ಷೆ ನಡೆಸುವ ಮೂಲಕ ಮಣ್ಣಿನ ಫಲವತ್ತತೆಗೆ ತಕ್ಕಂತೆ ಬೆಳೆ ಬೆಳೆದಾಗ ಕೃಷಿ ಚಟುವಟಿಕೆಯಲ್ಲಿ ಲಾಭ ಗಳಿಸಲು ಸಾಧ್ಯವಾಗುತ್ತದೆ. ಜೀವನದಲ್ಲಿ ಯಾವುದೇ ವೃತ್ತಿಯನ್ನು ನಿರ್ವಹಿಸಲು ಸಾಧ್ಯವಾಗುವಂತಹ ಅನುಭವವನ್ನು ಕೃಷಿ ಚಟುವಟಿಕೆ ನೀಡುತ್ತದೆ’ ಎನ್ನುತ್ತಾರೆ ರೈತ ಸಂದೇಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು