ಶುಕ್ರವಾರ, ಡಿಸೆಂಬರ್ 2, 2022
19 °C
ಕುವೆಂಪು ವಿವಿ: 14ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮಾವೇಶ ಆರಂಭ

ಡಿಜಿಟಲ್ ಅಪಸವ್ಯ ತೆರೆದಿಟ್ಟ ಕೋವಿಡ್ ಕಾಲಘಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೋವಿಡ್ ಸಂಕಷ್ಟವು ಜನರಿಗೆ ಡಿಜಿಟಲ್ ಜಗತ್ತನ್ನು ತೆರೆದಿಟ್ಟರೂ, ಅದರ ಕೆಡುಕುಗಳಾದ ಸುಳ್ಳುಸುದ್ದಿ, ಕಳಂಕ– ಆರೋಪ, ಡಿಜಿಟಲ್ ಅಪಸವ್ಯಗಳು ಬೆಳೆಯಲು ಕಾರಣವಾಯಿತು. ಸಾಮಾಜಿಕ ಬದುಕು ದೂರವಾಗಿದ್ದರಿಂದ ಭಯ, ಕಾಣದ ಉದ್ವೇಗಗಳು ಹೆಚ್ಚಾದವು ಎಂದು ಅಮೆರಿಕದ ಹೂಸ್ಟನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ವಿಘ್ನೇಶ್ ಎನ್. ಭಟ್ ಅಭಿಪ್ರಾಯಪಟ್ಟರು.

ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಮಾಜಶಾಸ್ತ್ರ ಸಂಘ ಮತ್ತು ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘಗಳು ಎರಡು ದಿನಗಳು ಕಾಲ ಆಯೋಜಿಸಿರುವ ‘ಕೋವಿಡ್– 19 ನಂತರದ ಭಾರತೀಯ ಸಮಾಜದ ಪುನರ್‌ರಚನೆ: ಸಮಾಜಶಾಸ್ತ್ರಕ್ಕಿರುವ ಸವಾಲುಗಳು ಮತ್ತು ಅವಕಾಶಗಳು’ ವಿಷಯ ಕುರಿತು 14ನೇ ಆವೃತ್ತಿಯ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೊರಾನಾವನ್ನು ಚೀನಾ ವೈರಸ್ ಎನ್ನಲಾಯಿತು. ಧರ್ಮವೊಂದನ್ನು ಕೋವಿಡ್ ಹರಡುವಿಕೆಗೆ ಕಾರಣವೆಂದು ಆರೋಪಿಸಲಾಯಿತು. ಕ್ರೋಢಿಕೃತವಾಗಿ ಬದುಕುವ ಮಾದರಿಗಳು ದೂರವಾದವು. ಸಮಾಜಶಾಸ್ತ್ರಜ್ಞರು ಜನರೊಂದಿಗೆ ನೇರವಾಗಿ ಬೆರೆತು ನೋಡಿದಲ್ಲಿ ಸಂಶೋಧನಾತ್ಮಕ ಒಳನೋಟಗಳು ಅಪಾರವಾಗಿ ದೊರೆಯಬಲ್ಲವು ಎಂದು ತಿಳಿಸಿದರು.

‘ಕೋವಿಡ್ ಸಂದರ್ಭವು ಜನರಿಗೆ ಸಾಮಾಜಿಕ ಬದುಕಿನಿಂದ ದೂರವುಳಿದು ಆನ್‌ಲೈನ್ ಜೀವನವನ್ನು ಕಲಿಸಿದ್ದರ ಫಲವಾಗಿ ಜಗತ್ತಿನಾದ್ಯಂತ ಕಾರ್ಪೋರೇಟ್‌ಗಳ ಆದಾಯವು ಅಪಾರವಾಗಿ ಹೆಚ್ಚಾಯಿತು. ಇದರಿಂದ ತಳವರ್ಗಗಳು ಅನುಭವಿಸಿದ ನಷ್ಟಗಳನ್ನು ಸಮಾಜಶಾಸ್ತ್ರಜ್ಞರು ಸಂಶೋಧಿಸಿ ನ್ಯಾಯ ಒದಗಿಸಬೇಕು’ ಎಂದು ಪಾಂಡಿಚೇರಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಮೊಹಾಂತಿ ಹೇಳಿದರು.

‘ಹೊಸ ಆನ್‌ಲೈನ್ ಜಗತ್ತಿನ ಸವಾಲುಗಳಿಗೆ ಸ್ಪಂದಿಸುವ ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ನಿರ್ಮಿಸುವಲ್ಲಿ ಶ್ರಮಿಸುತ್ತಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿಯೇ ವರ್ಚುಯಲ್ ವಿವಿಗಳನ್ನು ಆರಂಭಿಸ ಲಾಗುತ್ತಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಇಂದಿರಾ, ಪ್ರೊ.ಎ.ರಾಮೇಗೌಡ, ಡಾ.ಶೇಖರ್ ಹಾಜರಿದ್ದರು. ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷ ಪ್ರೊ. ಗುರುಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.

***

ಕೋವಿಡ್ ಕಾಲ..ಸ್ವಿಗ್ಗಿ ಅಮ್ಮ..

ಕೋವಿಡ್ ಸಾಮಾಜಿಕ ಬದುಕಿನ ಚಹರೆಗಳನ್ನು ಪ್ರತಿ ಹಂತದಲ್ಲಿಯೂ ಬದಲಿಸಿರುವುದು ಸಮಾಜಶಾಸ್ತ್ರ ಸಂಶೋಧಕರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಡಾ.ಮೊಹಾಂತಿ ಕಿವಿಮಾತು ಹೇಳಿದರು. 

ಲಾಕ್‌ಡೌನ್‌ಗಳಿಂದಾಗಿ ಆನ್‌ಲೈನ್ ಶಿಕ್ಷಣ ಸಾಮಾನ್ಯವಾಗಿದೆ. ಗೂಗಲ್ ಗುರುವಾಗಿದೆ. ಮೊಬೈಲ್ ಎಲ್ಲರ ಗೆಳೆಯನಾಗಿದೆ. ಸ್ವಿಗ್ಗಿ ಆಹಾರ ನೀಡುವ ಅಮ್ಮನ ರೂಪ ತಾಳಿದ ವಿಲಕ್ಷಣ ಸಂದರ್ಭಗಳು ಸೃಷ್ಟಿಯಾದವು. ಮಧ್ಯಮ ವರ್ಗ ಮತ್ತು ಉಳ್ಳವರ ಬದುಕು ಪ್ರತೀ ಹಂತಗಳಲ್ಲಿಯೂ ಆನ್‌ಲೈನ್ ಮೇಲೆ ಅವಲಂಬಿತವಾದ ಕಾರಣ ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಆದಾಯ ಮತ್ತು ಲಾಭ ದ್ವಿಗುಣಗೊಂಡವು. ಜಗತ್ತಿನಾದ್ಯಂತ ಮಿಲಿಯನೇರ್‌ಗಳ ಸಂಖ್ಯೆ ಹೆಚ್ಚಾದರೆ, 97 ಮಿಲಿಯನ್ ಜನರು ಬಡತನ ರೇಖೆಗೆ ಜಾರಿದ್ದಾರೆ. ಇದು ವಿಷಾದನೀಯ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು