ಸೋಮವಾರ, ಸೆಪ್ಟೆಂಬರ್ 20, 2021
24 °C
ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ ಬಾರಿಯೂ ಮೂರನೇ ಸ್ಥಾನ

ಎನ್‍ಐಆರ್‌ಎಫ್ ರ್‍ಯಾಂಕಿಂಗ್: 8 ಸ್ಥಾನ ಕುಸಿದ ಕುವೆಂಪು ವಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಂಕರಘಟ್ಟ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ 2021ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ್‍ಯಾಂಕಿಂಗ್‌ (ಎನ್‍ಐಆರ್‌ಎಫ್) ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯ 81ನೇ ರ್‍ಯಾಂಕ್ ಪಡೆದಿದೆ.

ಸತತ ನಾಲ್ಕನೆ ವರ್ಷವೂ 100ರ ಒಳಗೆ ಸ್ಥಾನ ಪಡೆದರೂ, ಹಿಂದಿನ ವರ್ಷಕ್ಕೆ ಹೋಲಿಸಿದರೆ 8 ಸ್ಥಾನಗಳ ಕುಸಿತ ಕಂಡಿದೆ. 2020ನೇ ಸಾಲಿನಲ್ಲಿ 73 ಸ್ಥಾನ ಪಡೆದಿತ್ತು. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ ಬಾರಿಯೂ ಮೂರನೇ ಸ್ಥಾನ ಪಡೆದಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕ್ರಮವಾಗಿ 91 ಹಾಗೂ 69ನೇ ರ‍್ಯಾಂಕ್ ಪಡೆದು ರಾಜ್ಯಮಟ್ಟದಲ್ಲಿ ಮೊದಲ ಎರಡು ಸ್ಥಾನದಲ್ಲಿವೆ.

ದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ರಾಜ್ಯಗಳ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ಮೂರನೇ ಸ್ಥಾನ ಪಡೆದಿದೆ.

ದೇಶದ 4,100ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಿದ್ದ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯ 40.40 ಅಂಕಗಳನ್ನು ಪಡೆದಿದೆ. 2017ರಲ್ಲಿ 150ರಿಂದ 200ರ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯ, 2018ರಲ್ಲಿ ಭಾರಿ ಜಿಗಿತ ಕಂಡಿದ್ದು 78ನೇ ಸ್ಥಾನಕ್ಕೇರಿತ್ತು. ಪ್ರಸಕ್ತ ಸಾಲಿನಲ್ಲಿ 81ನೇ ರ‍್ಯಾಂಕ್ ಪಡೆದಿದೆ ಕೋವಿಡ್-19 ಕಾರಣದಿಂದ ಉನ್ನತ ಶಿಕ್ಷಣದ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದರೂ 100ರೊಳಗೆ ಸ್ಥಾನ ಪಡೆದುಕೊಂಡಿದೆ ಎಂದು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದರು.

ಕೇಂದ್ರೀಯ ವಿಶ್ವವಿದ್ಯಾಲಯಗಳು, ಕೇಂದ್ರ ಸರ್ಕಾರದ ಉನ್ನತ ಶೈಕ್ಷಣಿಕ ಸಂಸ್ಥೆಗಳು, ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳನ್ನು ನಡೆಸುವ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶದ ಶಿಕ್ಷಣ ಸಂಸ್ಥೆಗಳು ಶ್ರೇಣೀಕರಣಕ್ಕೆ ಒಳಪಟ್ಟಿವೆ.

ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟ ಉತ್ತಮಪಡಿಸಲು, ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು  2015ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಪ್ರಾರಂಭಿಸಿದೆ. ಈಗ ಆರನೇ ಆವೃತ್ತಿ ಬಿಡುಗಡೆಗೊಳಿಸಿದೆ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವೈದ್ಯಕೀಯ, ವಾಸ್ತುಶಿಲ್ಪ, ಕಾನೂನು ವಿಷಯಗಳ ಶಿಕ್ಷಣ ಸಂಸ್ಥೆಗಳ ಜತೆಗೆ ವಿಶ್ವವಿದ್ಯಾಲಯಗಳ ಶ್ರೇಣೀಕರಣವನ್ನು ಎನ್‌ಐಆರ್‌ಎಫ್ ಅಡಿಯಲ್ಲಿ ಮಾನವ ಸಂಪನ್ಮೂಲ ಇಲಾಖೆ ಪ್ರತಿ ವರ್ಷ ಕೈಗೊಳ್ಳುತ್ತದೆ.

‘ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ, ಗ್ರಾಮೀಣ ಭಾಗದ ಸರ್ಕಾರಿ ಸಂಯೋಜಿತ ವಿಶ್ವವಿದ್ಯಾಲಯ ಸತತ ನಾಲ್ಕು ವರ್ಷಗಳಿಂದ ನೂರರ ಪಟ್ಟಿ ಒಳಗೆ ಸ್ಥಾನ ಪಡೆಯುತ್ತಾ ಬಂದಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಪ್ರತಿಬಿಂಬಿಸುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ನೀಡುತ್ತಿರುವುದಕ್ಕೆ ರಾಷ್ಟ್ರಮಟ್ಟದ ಮನ್ನಣೆ ಲಭಿಸಿದೆ’ ಎಂದು  ಕುಲಸಚಿವೆ ಜಿ.ಅನುರಾಧಾ ಪ್ರತಿಕ್ರಿಯಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.