ಶನಿವಾರ, ಜೂನ್ 19, 2021
22 °C
ನಿರ್ವಹಣೆಗೆ ಇಲ್ಲ ಅಗತ್ಯ ಸಿಬ್ಬಂದಿ; ಅನೈತಿಕ ಚಟುವಟಿಕೆಯ ತಾಣವಾದ ಯಾತ್ರಿನಿವಾಸ

ನಿರ್ವಹಣೆ ಕೊರತೆ: ಹಾಳುಬಿದ್ದ ಪ್ರವಾಸಿ ಗೃಹ

ಎಚ್.ಎಸ್. ರಘು Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಸಮರ್ಪಕ ನಿರ್ವಹಣೆ ಇಲ್ಲದೆ ಪಟ್ಟಣದ ಹುಚ್ಚರಾಯಸ್ವಾಮಿ ಕೆರೆ ಹಾಗೂ ಭ್ರಾಂತೇಶ್ ಉದ್ಯಾನ ಪಕ್ಕದಲ್ಲಿರುವ ಪ್ರವಾಸಿ ವಸತಿ ಗೃಹ (ಯಾತ್ರಿ ನಿವಾಸ) ಅನೈತಿಕ ಚಟುವಟಿಕೆಯ ತಾಣವಾಗಿದೆ.

ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ 2011ರಲ್ಲಿ ಸುಮಾರು ₹ 80 ಲಕ್ಷ ವೆಚ್ಚದಲ್ಲಿ ಸುಂದರ ಪರಿಸರದಲ್ಲಿ ಪ್ರವಾಸಿ ವಸತಿ ಗೃಹ ನಿರ್ಮಾಣವಾಗಿದೆ. 2011ರಲ್ಲಿ ಕ್ಷೇತ್ರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರವನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಉದ್ದೇಶದಿಂದ ಹುಚ್ಚರಾಯಸ್ವಾಮಿ ದೇವಸ್ಥಾನ, ಹುಚ್ಚರಾಯನಕೆರೆ ಅಭಿವೃದ್ಧಿ, ಭ್ರಾಂತೇಶ್ ಉದ್ಯಾನ ನಿರ್ಮಾಣದ ಜತೆ ವಸತಿ ಗೃಹ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು.

ಭ್ರಾಂತೇಶ್ ಉದ್ಯಾನದ ಪಕ್ಕದಲ್ಲಿಯೇ ಸುಂದರವಾಗಿ ನಿರ್ಮಾಣವಾಗಿರುವ ಈ ವಸತಿ ಗೃಹದಲ್ಲಿ 50ಕ್ಕೂ ಅಧಿಕ ಪ್ರವಾಸಿಗರು ಉಳಿಯಲು ಅಗತ್ಯವಾದ ಕೊಠಡಿಗಳಿವೆ. ಆದರೆ, ಈ ವಸತಿ ಗೃಹದಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಮಾತ್ರ ಅವಕಾಶ ದೊರೆಯುತ್ತಿಲ್ಲ. ವಸತಿ ಗೃಹವನ್ನು ನಿರ್ವಹಣೆ ಮಾಡಲು ಅಗತ್ಯವಾದ ಸಿಬ್ಬಂದಿ ಇಲ್ಲ. ಕೊಠಡಿಗಳ ಕಿಟಕಿ ಗಾಜುಗಳು ಒಡೆದಿದ್ದು, ಕಟ್ಟಡದ ಸುತ್ತಲೂ ಅನವಶ್ಯಕವಾದ ಗಿಡ ಗಂಟಿಗಳು ಬೆಳೆದಿವೆ. ಸ್ವಚ್ಛತೆ ಇಲ್ಲದಂತಾಗಿದೆ.

ಈ ವಸತಿ ಗೃಹಕ್ಕೆ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ವಸತಿ ಗೃಹದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಕೆಲವು ಕೊಠಡಿಗಳ ಬೀಗ ಒಡೆದಿವೆ. ವಸತಿ ಗೃಹ ಆವರಣ ಪ್ರವೇಶಿಸುತ್ತಿದ್ದಂತೆ ಮದ್ಯದ ಬಾಟಲಿಗಳು ಹಾಗೂ ಸಿಗರೇಟ್ ಪ್ಯಾಕ್‌ಗಳು ಕಾಣಸಿಗುತ್ತವೆ. 

ವಸತಿ ಗೃಹದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಕೆಲವು ವರ್ಷಗಳ ಹಿಂದೆಯೇ ಈ ವಸತಿ ಗೃಹದಲ್ಲಿ ಹಾಕಿದ್ದ ಲೈಟ್ ಹಾಗೂ ಫ್ಯಾನ್‌ಗಳನ್ನು ಕೆಲವು ಕಿಡಿಗೇಡಿಗಳು ಕದ್ದೊಯ್ದ ಘಟನೆಗಳು ನಡೆದಿವೆ. ನಂತರ ಮುಜರಾಯಿ ಇಲಾಖೆ ವಸತಿ ಗೃಹದ ದುರಸ್ತಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿತ್ತು. ಕೆಲವೇ ತಿಂಗಳ ಕಾಲ ಮಾತ್ರ ಈ ವಸತಿ ಗೃಹವನ್ನು ನಿರ್ವಹಣೆ ಮಾಡಲಾಗಿತ್ತು. ಆದರೆ, ಪ್ರಸ್ತುತ ಕೆಲವು ತಿಂಗಳುಗಳಿಂದ ಸಮರ್ಪಕ ನಿರ್ವಹಣೆ ಇಲ್ಲದೆ ವಸತಿ ಗೃಹ ನಲುಗಿದೆ.

‘ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಸತಿ ಗೃಹ ಪ್ರವಾಸಿಗರಿಗೆ ಸದ್ಬಳಕೆಯಾಗಬೇಕು. ವಸತಿ ಗೃಹ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ನೇಮಿಸುವ ಮೂಲಕ ಅನೈತಿಕ ಚಟುವಟಿಕೆ ತಡೆಗಟ್ಟಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು’ ಎಂದು ಪಟ್ಟಣದ ನಿವಾಸಿ ಸುಬ್ರಮಣ್ಯ ಒತ್ತಾಯಿಸುತ್ತಾರೆ.

‘ಅಭಿವೃದ್ಧಿ ಹೆಸರಿನಲ್ಲಿ ಕಟ್ಟಡಗಳನ್ನು ಹಾಗೂ ಪ್ರವಾಸಿ ಗೃಹಗಳನ್ನು ನಿರ್ಮಾಣ ಮಾಡುವುದು ಮಾತ್ರ ಸಂಬಂಧಿಸಿದ ಇಲಾಖೆ ಜವಾಬ್ದಾರಿಯಲ್ಲ. ಸಮರ್ಪಕ
ವಾಗಿ ಈ ಕಟ್ಟಡಗಳ ನಿರ್ವಹಣೆ ಮಾಡುವ ನಿಟ್ಟಿನಲ್ಲಿ‍ ಗಮನ ನೀಡಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಈ ವಸತಿ ಗೃಹ ನಿರ್ವಹಣೆ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕು’ ಎಂಬುದು ಸಾರ್ವಜನಿಕರ ಒತ್ತಾಯ.

‘ಶೀಘ್ರ ಸಿಬ್ಬಂದಿ ನೇಮಕ’

ವಸತಿ ಗೃಹವನ್ನು ಪ್ರವಾಸೋದ್ಯಮ ಇಲಾಖೆ ನಿರ್ವಹಣೆ ಮಾಡಬೇಕು. ಆದರೆ ನಿರ್ವಹಣೆಯನ್ನು ಮುಜರಾಯಿ ಇಲಾಖೆಯ ಹಚ್ಚರಾಯಸ್ವಾಮಿ ದೇವಸ್ಥಾನಕ್ಕೆ ನೀಡಿದ್ದಾರೆ. ವಸತಿ ಗೃಹದ ದುರಸ್ತಿ ಕಾಮಗಾರಿ ಹಲವು ಬಾರಿ ಮಾಡಿಸಿದರೂ ಕಿಡಿಗೇಡಿಗಳು ವಸತಿ ಗೃಹ ಹಾಳು ಮಾಡಿದ್ದಾರೆ. ಶೀಘ್ರದಲ್ಲಿ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ನಂತರ ವಸತಿ ಗೃಹಕ್ಕೆ ಸಿಬ್ಬಂದಿ ನೇಮಿಸುವ ಮೂಲಕ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು ಎಂದು ತಹಶೀಲ್ದಾರ್‌  ಎಂ.ಪಿ. ಕವಿರಾಜ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.