ಭಾನುವಾರ, ನವೆಂಬರ್ 28, 2021
21 °C
ಹೊಲದಲ್ಲಿ ಚರಗ ಬೀರಿ ಭೂತಾಯಿಗೆ ಸೀಮಂತ ನೆರವೇರಿಸಿದ ರೈತ ಕುಟುಂಬಗಳು

ಜಿಲ್ಲೆಯಲ್ಲಿ ಭೂಮಿ ಹುಣ್ಣಿಮೆಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ರೈತರು ಸಂಭ್ರಮ, ಸಡಗರದಿಂದ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿದರು.

ಭೂಮಿ ಹುಣ್ಣಿಮೆ ಮಲೆನಾಡಿನ ಹಳ್ಳಿಗರಿಗೆ ವಿಶೇಷ ಹಬ್ಬ. ಅದರಲ್ಲೂ ಗದ್ದೆ, ತೋಟ ಹೊಂದಿರುವವರಿಗೆ ಈ ದಿನ ಹೊಸ ಸಡಗರ. ಭೂಮಿ ಹುಣ್ಣಿಮೆ ರೈತರ ಪಾಲಿಗೆ ಪವಿತ್ರ ಪೂಜೆಯಾಗಿದೆ. ಹೊಲ, ಗದ್ದೆ, ತೋಟಗಳಲ್ಲಿ ಬೆಳೆದು ನಿಂತ ಫಸಲಿಗೆ ವಿಶೇಷವಾಗಿ ಸೀರೆ. ಕುಪ್ಪಸ ತೊಡಿಸುತ್ತಾರೆ.

ವಿಶೇಷ ಆಭರಣಗಳ, ಹೂವುಗಳಿಂದ ಅಲಂಕರಿಸಿ ಚಪ್ಪರಕಟ್ಟಿ ಭೂರಮೆಯನ್ನು ಸಿಂಗರಿದ್ದರು. ವಿವಿಧ ಬಗೆಯ ಅಡುಗೆಗಳನ್ನು ಸಿದ್ಧಪಡಿಸಿ ಚರಗ ಚೆಲ್ಲಿ ಸಂಭ್ರಮಿಸಿದರು. ಇಡೀ ಕುಟುಂಬದವರಲ್ಲದೇ ಗೆಳೆಯರು, ನೆರೆ ಹೊರೆಯ ಆಪ್ತರು ಅಕ್ಕಪಕ್ಕದ ಹೊಲದವರನ್ನು ಕರೆದು ಒಟ್ಟಾಗಿ ಊಟ ಮಾಡಿ ಖುಷಿ ಪಟ್ಟರು.

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ ಮನೆ ಮಾಡಿದೆ. ಸೀಗೆಹುಣ್ಣಿಮೆಯ ದಿನದಂದು ಮಲೆನಾಡಿಗರಿಂದ ಭೂಮಿ ತಾಯಿಗೆ ವಿಶೇಷ ನಮನ ಸಲ್ಲಿಸಲಾಗುತ್ತದೆ. ಹೆಣ್ಣುಮಕ್ಕಳ ಸೀಮಂತದಂತೆ ಭೂಮಿ ತಾಯಿಗೆ ರೈತ ಕುಟುಂಬಗಳು ಪೂಜೆ ಸಲ್ಲಿಸುತ್ತಾರೆ. 

ಭೂಮಿ ಹುಣ್ಣಿಮೆ ಹಬ್ಬವನ್ನು ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ, ಸಿದ್ದಾಪುರ ಭಾಗದಲ್ಲಿ ಭೂಮಣ್ಣಿ ಹಬ್ಬ ಎಂದೇ ಕರೆಯುತ್ತಾರೆ. ಹಿಂದಿನ ರಾತ್ರಿ ಶುರುವಾದ ಹಬ್ಬ ಮಾರನೆಯ ದಿನ ಪೂಜೆಯೊಂದಿಗೆ ಮುಗಿಯುತ್ತದೆ. ಮಂಗಳವಾರ ರಾತ್ರಿ ಬಗೆ ಬಗೆಯ ಆಹಾರ ಖಾದ್ಯಗಳನ್ನು ಹಾಗೂ ಚರಗ ಸಿದ್ಧಪಡಿಸಿ, ಬುಧವಾರ ನಸುಕಿನ ಜಾವ ಭೂಮಿ ಹುಣ್ಣಿಮೆ ಬುಟ್ಟಿಯಲ್ಲಿ ಚರಗ ತೆಗೆದುಕೊಂಡು ಹೋಗಿ ಹೊಲಗಳಿಗೆ ಚೆಲ್ಲಲಾಯಿತು.

ಭೂಮಿ ಹುಣ್ಣಿಮೆಯ ದಿನ ಭೂಮಿಯನ್ನು ನೋಯಿಸಬಾರದು. ನೆಲಕ್ಕೆ ಕತ್ತಿಯನ್ನು ಊರಬಾರದು ಎಂಬ ನಂಬಿಕೆ ಇರುವುದರಿಂದ ಕೃಷಿ ಕಾಯಕಕ್ಕೆ ಬಿಡುವು
ಕೊಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.