ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತ್ತಿವೆ ಗ್ರಂಥಾಲಯ ಕಟ್ಟಡಗಳು: ಪುಸ್ತಕ ಸಂರಕ್ಷಣೆ ಮಾಡುವುದೇ ದೊಡ್ಡ ಕೆಲಸ

39 ಗ್ರಾ.ಪಂ.ಗಳಲ್ಲಿ ಪುಸ್ತಕ ಸಂರಕ್ಷಣೆ ಮಾಡುವುದೇ ದೊಡ್ಡ ಕೆಲಸ
Last Updated 11 ನವೆಂಬರ್ 2021, 5:21 IST
ಅಕ್ಷರ ಗಾತ್ರ

ಸೊರಬ: ಗ್ರಾಮೀಣ ಪ್ರದೇಶದ ಜನರಲ್ಲಿ ಓದುವ ಸಂಸ್ಕೃತಿ ಹಾಗೂ ಅರಿವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದ್ದು, ಸೂಕ್ತ ಕಟ್ಟಡಗಳು ಇಲ್ಲದೇ ಸೊರಗುತ್ತಿವೆ.

ಹಳೆಯ ಕಟ್ಟಡಗಳಲ್ಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಬೆಲೆ ಬಾಳುವ ಪುಸ್ತಕಗಳು ಮಳೆಗೆ ತೊಯ್ದು ಹಾಳಾಗುತ್ತಿವೆ. ತಾಲ್ಲೂಕಿನ 39 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಬಹುತೇಕ ಕಟ್ಟಡವಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲವು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿದರೆ ಇನ್ನೂ ಕೆಲವು ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಕೃಷಿ ಗೋದಾಮುಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆಗೆ ಕಟ್ಟಡ ಸೋರುತ್ತಿವೆ.

‘ಈ ಸಮಸ್ಯೆಗಳ ನಡುವೆ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಪುಸ್ತಕಗಳನ್ನು ಸಂರಕ್ಷಣೆ ಮಾಡುವುದೇ ದೊಡ್ಡ ಕೆಲಸವಾಗಿದೆ. ಗ್ರಾಮೀಣ ಜನರು ಸಮಯವನ್ನು ಸಾರ್ಥಕವಾಗಿ ಸದುಪಯೋಗಪಡಿಸಿಕೊಳ್ಳಲು, ಜ್ಞಾನಾರ್ಜನೆ ಪಡೆದುಕೊಳ್ಳಲು ಗ್ರಂಥಾಲಯಗಳು ನೆರವಾಗುತ್ತಿವೆ. ಉತ್ತಮ ವಾತಾವರಣವಿಲ್ಲದ ಕಾರಣ ಓದುಗರಲ್ಲಿ ನಿರಾಸಕ್ತಿ ಮೂಡಿದೆ. ಗ್ರಂಥಾಲಯಗಳು ಜ್ಞಾನದ ಕೇಂದ್ರಗಳಾಗುವ ಕಾಣುವ ಬದಲು ಇಲಿ, ಹೆಗ್ಗಣಗಳ ಆವಾಸ ಸ್ಥಾನಗಳಾಗಿ ಬದಲಾಗಿದ್ದರಿಂದ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ’ ಎನ್ನುವ ಮಾತು ಕೇಳಿ ಬರುತ್ತಿದೆ.

ಗ್ರಾಮೀಣ ಮಹಿಳೆಯರು ಹಾಗೂ ಮಕ್ಕಳಲ್ಲಿ ಕಲಿಕೆ, ಓದು ಹಾಗೂ ಬರವಣಿಗೆ ಅಭಿರುಚಿಯನ್ನು ಪ್ರೇರಣೆಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಗಳು ವಿದ್ಯುತ್ ಸೇರಿ ಮೂಲ ಸೌಕರ್ಯಗಳ ಕೊರತೆ ಎದುರುಸುತ್ತಿವೆ. ಆಧುನಿಕ ವಿದ್ಯಮಾನಗಳ ಭರಾಟೆಯಲ್ಲಿ ಪುಸ್ತಕಗಳನ್ನು ಮರೆತ ಯುವ ಜನಾಂಗಕ್ಕೆ ಒಂದಿಷ್ಟು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಗ್ರಂಥಾಲಯಗಳು ಮಾಹಿತಿ ಕಣಜವಾಗಿ ಉಪಯುಕ್ತವಾಗುವಾಗ ಅವುಗಳ ನಿರ್ವಹಣೆಯೂ ಅಷ್ಟೆ ಮುಖ್ಯ. ತಲೆಮಾರಿನಿಂದ ತಲೆಮಾರಿಗೆ ಸಂಪ್ರದಾಯ ಹಾಗೂ ಕಾಲಘಟ್ಟವನ್ನು ಪರಿಚಯಿಸುವ ಪುಸ್ತಕಗಳನ್ನು ಸಂಗ್ರಹಿಸುವ ಜೊತೆಗೆ ಅವುಗಳ ರಕ್ಷಣೆಗೆ ಅಗತ್ಯ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎನ್ನುವುದು ಓದುಗರ ಅನಿಸಿಕೆಯಾಗಿದೆ.

5 ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಗ್ರಂಥಾಲಯ:

ತಾಲ್ಲೂಕಿನಲ್ಲಿ ಒಟ್ಟು 41 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಡಿಗೆ ಹಾಗೂ ದೂಗೂರು ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳು ಆರಂಭಗೊಂಡಿಲ್ಲ. ಈಗಿರುವ 39 ಗ್ರಂಥಾಲಯಗಳಲ್ಲಿ ಸದ್ಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ 33 ಗ್ರಂಥಾಲಯಗಳು ಒಳಪಟ್ಟಿವೆ. ಪುರಸಭೆ ವ್ಯಾಪ್ತಿಗೆ ಕೊಡಕಣಿ, ಹಳೇಸೊರಬ ಗ್ರಾಮ ಪಂಚಾಯಿತಿಗಳು, ಆನವಟ್ಟಿ, ಕುಬಟೂರು, ತಲ್ಲೂರು, ಸಮನವಳ್ಳಿ ಗ್ರಂಥಾಲಯಗಳು ಆನವಟ್ಟಿ ಪಟ್ಟಣ ಪಂಚಾಯಿತಿಗೆ ಒಳಪಟ್ಟಿವೆ.

‘ತಾಲ್ಲೂಕಿನ ದುಗೂರು, ದ್ಯಾವನಹಳ್ಳಿ, ಬೆನ್ನೂರು, ಗುಡವಿ, ಹರೀಶಿ ಗ್ರಾಮ ಪಂಚಾಯಿತಿಗಳು ಅಮೃತ ಗ್ರಾಮ ಪಂಚಾಯಿತಿಗಾಳಗಿ ಆಯ್ಕೆಯಾಗಿದ್ದು, ಈ ಸವಿ ನನೆಪಿಗಾಗಿ 5 ಗ್ರಾಮ ಪಂಚಾಯಿತಿಗಳಲ್ಲೂ ಡಿಜಿಟೆಲ್ ಗ್ರಂಥಾಲಯಗಳನ್ನಾಗಿ ಮಾಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಕೆ.ಜಿ.ಕುಮಾರ್ ‘ಪ್ರಜಾವಾಣಿ’ ಗೆ ತಿಳಿಸಿದರು.

‘15ನೇ ಹಣಕಾಸು ಯೋಜನೆಯಡಿ ಪುಸ್ತಕಗಳನ್ನು ಖರೀದಿಸಲು ಅವಕಾಶವಿದ್ದು, ವರ್ಗ 1ರ ಅಡಿಯಲ್ಲಿ ಕಂಪ್ಯೂಟರ್ ಖರೀದಿಸಲು ಅವಕಾಶವಿದೆ. ಪೂರ್ಣ ಪ್ರಮಾಣದಲ್ಲಿ ವೈಫೈ ಒಳಗೊಂಡ ಹೈಟೆಕ್ ಗ್ರಂಥಾಲಯವನ್ನಾಗಿ ಮಾಡುವ ಬಗ್ಗೆ ಚಿಂತಿಸಲಾಗಿದೆ. ರೈತರಿಗೆ ಕೃಷಿ, ಮೀನುಗಾರಿಕೆ ಸೇರಿ ಬೆಳೆ ಬೆಳೆಯಲು ಉಪಯುಕ್ತ ಮಾಹಿತಿವುಳ್ಳ ಕೈಪಿಡಿ ಹಾಗೂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂವಾಗುವ ಮಾಹಿತಿ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡುವಂತೆ ಸೂಚಿಸಲಾಗಿದೆ’ ಎಂದು ಕೆ.ಜಿ.ಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT