ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ವಿಐಎಎಸ್‍ಎಲ್ ಉಳಿಸಲಿ

ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ವಿನಯ್‌ ಗುರೂಜಿ
Last Updated 28 ಜನವರಿ 2023, 6:35 IST
ಅಕ್ಷರ ಗಾತ್ರ

ಭದ್ರಾವತಿ: ‘ಎಲ್ಲ ಸವಾಲುಗಳನ್ನು ಮೆಟ್ಟಿ ಕೇಂದ್ರ ಸರ್ಕಾರ ಹೇಗೆ ಅಯೋಧ್ಯೆಯ ರಾಮ ಮಂದಿರ ನಿರ್ಮಿಸಿತೋ ಅದೇ ರೀತಿ ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಲೇಬೇಕು‘ ಎಂದು ಗೌರಿ ಗದ್ದೆಯ ಅವಧೂತ ವಿನಯ್ ಗುರೂಜಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ವಿಐಎಸ್‍ಎಲ್ ಕಾರ್ಖಾನೆ ಮುಖ್ಯದ್ವಾರದ ಎದುರು ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ 9ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿ ಅವರು ಮಾತನಾಡಿದರು.

ವಿಐಎಸ್‌ಎಲ್‌ ಅಸಂಖ್ಯಾತ ಕಾರ್ಮಿಕರಿಗೆ ಉದ್ಯೋಗ ಹಾಗೂ ಲಕ್ಷಾಂತರ ಮಂದಿಗೆ ಅನ್ನಕೊಟ್ಟ ಸಂಸ್ಥೆ. ಇದನ್ನು ಯಾವ ಕಾರಣಕ್ಕೂ ಮುಚ್ಚಬಾರದು ಎಂದು ಒತ್ತಾಯಿಸಿದರು.

‘ಸಂವಿಧಾನದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ನಾನೂ ಭಾರತದ ಪ್ರಜೆ. ಕನ್ನಡಿಗನಾಗಿ ದೇಶಕ್ಕೆ ಕಬ್ಬಿಣ, ಉಕ್ಕು, ಸಿಮೆಂಟ್, ಸಕ್ಕರೆ, ಕಾಗದ ನೀಡಿದ ಭದ್ರಾವತಿ ಆರ್ಥಿಕ ಆರೋಗ್ಯ ಕಾಪಾಡಬೇಕಿದೆ. ಈ ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಸಂಸದರು, ಶಾಸಕರು ಸಂಘಟಿತರಾಗಿ ಈ ಕಾರ್ಖಾನೆಯನ್ನು ಉಳಿಸಲೇಬೇಕು. ಜನರು ಅಧಿಕಾರ ನೀಡಿರುವುದು ಜನರ ಹಿತಕಾಯಲು ಎಂಬುದನ್ನು ಯಾರೂ ಮರೆಯಬಾರದು’ ಎಂದರು.

‘ವಿದೇಶಿ ಕಂಪೆನಿಗಳು ದೇಶದಲ್ಲಿ ಉಳಿದು ಬೆಳೆಯುತ್ತಿರಬೇಕಾದರೆ ನಮ್ಮವರೇ ಸ್ಥಾಪಿಸಿದ ದೇಶೀಯ ಕಂಪೆನಿಯನ್ನು ಏಕೆ ಸರ್ಕಾರ ಉಳಿಸಬಾರದು’ ಎಂದು ಪ್ರಶ್ನಿಸಿದ ಅವರು, ‘ತಾಲ್ಲೂಕಿನ ಸಮಸ್ತರು ಸಂಘಟಿತವಾಗಿ ಹೋರಾಡಿದರೆ ವಿಐಎಸ್‌ಎಲ್ ಕಾರ್ಖಾನೆ ಖಂಡಿತ ಉಳಿಯುತ್ತದೆ. ಅದನ್ನು ಉಳಿಸಬೇಕಾದದ್ದು ರಾಜ್ಯ ಮತ್ತು ಕೆಂದ್ರ ಸರ್ಕಾರದ ಆದ್ಯ ಕರ್ತವ್ಯ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ಕಾಂಗ್ರೆಸ್ ಯುವ ಮುಖಂಡ ಬಿ.ಎಸ್.ಗಣೇಶ್, ಕಾರ್ಮಿಕ ಮುಖಂಡ ಎಸ್.ಎಸ್.ಭೈರಪ್ಪ ಸೇರಿದಂತೆ ಅಪಾರ ಸಂಖ್ಯೆಯ ಮಹಿಳೆಯರು, ಕಾರ್ಮಿಕರು ಭಾಗವಹಿಸಿದ್ದರು.

‘ಪ್ರಧಾನಿಯೊಂದಿಗೆ ಮಾತನಾಡುವೆ’

‘ವಿಐಎಸ್‌ಎಲ್‌ ಉಳಿವಿಗೆ ಸಂಬಂಧಿಸಿದಂತೆ ಶೀಘ್ರ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತನಾಡುತ್ತೇನೆ. ಕಂಪನಿ ಉಳಿಸಲು ಈ ನಾಡಿನ ಜಲ, ನೆಲ, ಭಾಷೆ, ಅನ್ನ, ಗಾಳಿ ಸೇವಿಸುವ ಎಲ್ಲರೂ ಬಾಧ್ಯಸ್ಥರು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಹೋರಾಟಕ್ಕೆ ಅನೇಕ ವಿಧಗಳಿವೆ. ಪತ್ರ ಚಳವಳಿ ಮಾಡಿ, ಎಲ್ಲದಕ್ಕೂ ಮಿಗಿಲಾದ ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕದ ನ್ಯಾಯಾಧೀಶರು, ವಕೀಲರಿದ್ದಾರೆ. ಅವರ ಮೂಲಕ ಕಾರ್ಖಾನೆ ಮುಚ್ಚದಂತೆ ಅರ್ಜಿ ಸಲ್ಲಿಸಬೇಕು’ ಎಂದು ವಿನಯ್ ಗುರೂಜಿ ಹೇಳಿದರು.

ಸರ್ವ ಸಮಾಜದ ಸಭೆ ಇಂದು

‘ಕಾರ್ಖಾನೆ ಉಳಿಸುವಂತೆ ನಗರದಲ್ಲಿ ಜನವರಿ 28ರಂದು ಬೆಳಿಗ್ಗೆ 11ಕ್ಕೆ ಹಳೇನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ತಾಲ್ಲೂಕಿನ ಸರ್ವ ಸಮಾಜಗಳ ಬೃಹತ್ ಸಭೆ ಕರೆದಿದ್ದೇನೆ. ಎಲ್ಲರೂ ಭಾಗವಹಿಸಿ’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ಮನವಿ ಮಾಡಿದರು.

‘ವಿನಯ್ ಗುರೂಜಿ ಬಂದಿರುವುದರಿಂದ ಹೋರಾಟಕ್ಕೆ ಕಳೆ ಬಂದಿದೆ. ಅಲ್ಲದೇ ಅವರ ಬೆಂಬಲದಿಂದ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ’ ಎಂದು ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT