ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಸಂಜೆ 5ರವರೆಗೆ ಎಲ್ಲ ರೀತಿಯ ವಹಿವಾಟಿಗೆ ಅವಕಾಶ

ಸಂಜೆ 7ರಿಂದ ಬೆಳಿಗ್ಗೆ 5ರವರೆಗೆ ಪ್ರತಿ ದಿನ ರಾತ್ರಿ ಕರ್ಫ್ಯೂ, ವಾರಾಂತ್ಯ ಲಾಕ್‌ಡೌನ್
Last Updated 21 ಜೂನ್ 2021, 14:33 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲೂ ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಎಲ್ಲ ರೀತಿಯ ವ್ಯಾಪಾರ, ವಹಿವಾಟಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ವ್ಯಾಪಾರಿಗಳು, ನಾಗರಿಕರು ಹರ್ಷ ವ್ಯಕ್ತಪಡಿಸಿದರು.

ಜಿಲ್ಲೆಯ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆಯಾಗದ ಕಾರಣ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರ ಭಾನುವಾರ ನಡೆದ ಸಭೆಯಲ್ಲಿ ಹಸಿರು ನಿಶಾನೆ ತೋರಿರಲಿಲ್ಲ. ಒಂದೇ ದಿನದಲ್ಲಿ ತನ್ನ ನಿರ್ಧಾರ ಬದಲಿಸಿ, ಸಂಜೆ 5ರವರೆಗೆ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ. ಶೇ 50ರಷ್ಟು ಸಾಮರ್ಥ್ಯದೊಂದಿಗೆ ಹೋಟೆಲ್‌ಗಳು, ಕ್ಲಬ್‌ಗಳು, ಜಿಮ್‌, ವಸತಿಗೃಹಗಳು, ರೆಸಾರ್ಟ್‌ಗಳನ್ನು ತೆರೆಯಬಹುದು.ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಸ್ಥಳದಲ್ಲೇ ಮದ್ಯ ಸೇವಿಸಲು ಅವಕಾಶ ಇಲ್ಲ. ಹವಾನಿಯಂತ್ರಿತ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್‍ಗಳಿಗೆ ಅವಕಾಶ ಇಲ್ಲ. ಆದರೆ, ಹವಾನಿಯಂತ್ರಿತ ವ್ಯವಸ್ಥೆ ಇಲ್ಲದೇ ಕಾರ್ಯ ನಿರ್ವಹಿಸಬೇಕು.

ಮದುವೆ, ಶವಸಂಸ್ಕಾರ ಕಾರ್ಯಗಳಿಗೆ ಹಿಂದೆ ವಿಧಿಸಿದ್ದ ನಿರ್ಬಂಧಗಳನ್ನೇ ಮುಂದುವರಿಸಲಾಗಿದೆ. ಸೀಮಿತ ಜನರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಸಬಹುದು. ವಾರಾಂತ್ಯದ ಕರ್ಫ್ಯೂ ಮುಂದುವರಿಯಲಿದೆ. ಪ್ರತಿ ಶುಕ್ರವಾರ ಸಂಜೆ 7ರಿಂದ ಆರಂಭವಾಗುವ ಕರ್ಫ್ಯೂ ಸೋಮವಾರ ಬೆಳಿಗ್ಗೆ 5ಕ್ಕೆ ಕೊನೆಗೊಳ್ಳಲಿದೆ. ಪ್ರತಿದಿನವೂ ರಾತ್ರಿ ನಿರ್ಬಂಧಗಳು ಮುಂದುವರಿಯಲಿವೆ. ಪ್ರತಿ ದಿನ ರಾತ್ರಿ 7ರಿಂದ ಮರುದಿನ ಬೆಳಿಗ್ಗೆ 5ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಈ ಸಮಯದಲ್ಲಿ ಆವಶ್ಯಕ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

‘ಈ ಆದೇಶ ಜುಲೈ 5ರ ಬೆಳಿಗ್ಗೆ 5ರವರೆಗೆ ಜಾರಿಯಲ್ಲಿರಲಿದೆ. ಕಂಟೈನ್‍ಮೆಂಟ್ ವಲಯದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಎಲ್ಲ ವಸ್ತುಗಳ ಹೋಂ ಡೆಲಿವರಿಗೆ ಸಂಪೂರ್ಣ ಅವಕಾಶ ನೀಡಲಾಗಿದೆ. ಶೇ 50ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯ ನಿರ್ವಹಿಸಲು ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಗಾರ್ಮೆಂಟ್ಸ್‌ಗಳಲ್ಲಿ ಶೇ 30ರಷ್ಟು ಸಿಬ್ಬಂದಿಗೆ ಅವಕಾಶ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.

ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ, ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಕಡ್ಡಾಯ. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ: ಕೋವಿಡ್ ಲಾಕ್‌ಡೌನ್ ಸಡಿಲಗೊಳಿಸಿದ ಪರಿಣಾಮ ಸೋಮವಾರ ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡುಬಂತು. ಜನರು ಸ್ವಾತಂತ್ರ್ಯ ಸಿಕ್ಕವರಂತೆ ಓಡಾಡಿದರು. ಜಿಲ್ಲಾಡಳಿತ 12ರವರೆಗೆ ಅವಕಾಶ ನಿಡಿದ್ದರೂ ಬಹುತೇಕ ಅಂಗಡಿಗಳು ಸಮಯ ಮೀರಿದ ನಂತರವೂ ವಹಿವಾಟು ನಡೆಸಿದವು. ಮಧ್ಯಾಹ್ನದ ವೇಳೆಗೆ ಸರ್ಕಾರ ಲಾಕ್‌ಡೌನ್ ಮತ್ತಷ್ಟು ಸಡಿಲಿಸಿದ ಕಾರಣ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಹಾರ್ಡ್‌ವೇರ್, ಸಿಮೆಂಟ್, ಫೋಟೊ ಸ್ಟುಡಿಯೊ, ಕಟ್ಟಡ ಸಾಮಗ್ರಿಗಳ ಅಂಗಡಿಗಳಿಗೆ ಎರಡು ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಬಟ್ಟೆ ಮತ್ತು ಚಿನ್ನಾಭರಣ ಹೊರತಾಗಿ ಅಗತ್ಯ ವಸ್ತು ಸೇರಿದಂತೆ ಉಳಿದೆಲ್ಲ ಅಂಗಡಿಗಳಿಗೆ 12 ಗಂಟೆವರೆಗೆ ತೆರೆಯಲು ಅನುಮತಿ ನೀಡಲಾಗಿತ್ತು.

ಕೆಎಸ್ಆರ್‌ಟಿಸಿ ಸಂಚಾರ ಆರಂಭ: ಜಿಲ್ಲೆಯಲ್ಲಿಕೆಎಸ್ಆರ್‌ಟಿಸಿ ಸಂಚಾರ ಆರಂಭವಾಗಿದೆ. ಶಿವಮೊಗ್ಗ ಡಿಪೋದಿಂದ 50 ಬಸ್‌ಗಳು ಸಂಚಾರ ಆರಂಭಿಸಿದವು. ಬೆಂಗಳೂರಿಗೆ 9 ಬಸ್‌ಗಳು, ಭದ್ರಾವತಿ –ಶಿವಮೊಗ್ಗ 10, ಹರಿಹರ, ದಾವಣಗೆರೆ 11, ಚಿತ್ರದುರ್ಗ 3 ಸೇರಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಬಸ್‌ಗಳು ತೆರಳಿದವು. ಟ್ಯಾಕ್ಸಿ ಹಾಗೂ ಆಟೊಗಳೂ ಸಂಚರಿಸಿದವು.

ಪ್ರಯಾಣಿಕರ ಸಂಖ್ಯೆ ಅತ್ಯಂತ ವಿರಳವಾಗಿತ್ತು. ಎಲ್ಲ ಬಸ್‌ಗಳನ್ನೂ ಸ್ಯಾನಿಟೈಸ್‌ ಮಾಡಲಾಗಿದೆ. ಶೇ 90ರಷ್ಟು ಚಾಲಕರು, ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದೆ. ಅಂತಹವರಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ ಎಂದು ಡಿಪೋ ವ್ಯವಸ್ಥಾಪಕ ಸಿದ್ದೇಶ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT