ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿಯಿಂದ ಜೀವ ಹಾನಿ: ಪರಿಹಾರ

ಉಸ್ತುವಾರಿ ಸಚಿವ ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ಕೆಡಿ‍ಪಿ ಸಭೆ; ಬೆಳೆ ನಷ್ಟ, ಮನೆಹಾನಿಗೆ ಪರಿಹಾರದ ಭರವಸೆ
Last Updated 31 ಜುಲೈ 2022, 5:29 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಅತಿವೃಷ್ಟಿಯಿಂದ ಸಂಭವಿಸಿದ ಎಲ್ಲಾ ಪ್ರಾಣಹಾನಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ. ನೆರೆ ನೀರು ಮನೆಗೆ ನುಗ್ಗಿ ನಷ್ಟ ಸಂಭವಿಸಿದವರಿಗೆ ₹10 ಸಾವಿರ ಪರಿಹಾರ ಒದಗಿಸಲಾಗಿದೆ. ಬೆಳೆಹಾನಿ ಹಾಗೂ ಮನೆಹಾನಿ ಪ್ರಕರಣಗಳಲ್ಲಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸಭೆಗೆ ತಿಳಿಸಿದರು.

ಅಧಿಕಾರಿ ವಿರುದ್ಧ ಕ್ರಮ:

ಮರ ಕಡಿದ ರೈತನನ್ನು ಕ್ರಿಮಿನಲ್ ರೀತಿ ನಡೆಸಿಕೊಂಡು ಕೇಸು ದಾಖಲಿಸಿದ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಸಿಸಿಎಫ್ ಅವರಿಗೆ ಸಚಿವನಾರಾಯಣ ಗೌಡ ಸೂಚಿಸಿದರು. ಸಾಗರ ತಾಲ್ಲೂಕಿನ ಉರುಳಗಲ್ಲು ಬಳಿ ನಡೆದ ಪ್ರಕರಣದ ಬಗ್ಗೆ ಶಾಸಕ ಎಚ್‌. ಹಾಲಪ್ಪ ಹರತಾಳು ಅವರು ಸಭೆಯ ಗಮನ ಸೆಳೆದು ಕ್ರಮಕ್ಕೆ ಒತ್ತಾಯಿಸಿದ್ದರು.

ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ 262 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಕ್ಕೆ ಅನುದಾನ ಮಂಜೂರು ಮಾಡಲಾಗಿದೆ. ₹127 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ 179 ಘಟಕಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ತಿಳಿಸಿದರು.

ಶಾಸಕರಾದ ಅಶೋಕ ನಾಯ್ಕ್, ರುದ್ರೇಗೌಡ, ಡಿ.ಎಸ್. ಅರುಣ್, ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಇದ್ದರು.

ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿ: ಆರಗ

ಜಿಲ್ಲೆಯಲ್ಲಿ ಕಳೆದ ಬಾರಿ ಅಡಿಕೆಗೆ ಕೊಳೆರೋಗ ಬಂದಾಗ ರೈತರಿಗೆ ಪರಿಹಾರ ನೀಡಲಾಗಿತ್ತು. ಈ ಬಾರಿಯೂ ಅದೇ ರೀತಿ ಪರಿಹಾರ ಒದಗಿಸಲು ಪ್ರಸ್ತಾವ‌ ಸಲ್ಲಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಫೈಬರ್ ದೋಟಿಗೆ ಹೆಚ್ಚಿನ ಬೇಡಿಕೆ ಇದ್ದು, ಆದ್ಯತೆ ಮೇರೆಗೆ ಸಹಾಯಧನದ ಒದಗಿಸಬೇಕು ಎಂದರು.

ಶಿವಮೊಗ್ಗ–ಭದ್ರಾವತಿ ರಸ್ತೆ ದುರಸ್ತಿಗೆ ಬಿವೈಆರ್ ಸೂಚನೆ

ಮಳೆಯಿಂದ ಶಿವಮೊಗ್ಗ-ಭದ್ರಾವತಿ ರಸ್ತೆ ಹಲವೆಡೆ ಹಾನಿಗೀಡಾಗಿದೆ. ದುರಸ್ತಿ ಕಾರ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಬೇಕು. ತುಮಕೂರು-ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿ ತ್ವರಿತಗೊಳಿಸಲು ಇರುವ ಎಲ್ಲಾ ಅಡೆತಡೆ ನಿವಾರಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಕಾಮಗಾರಿ ಗುಣಮಟ್ಟದ ಬಗ್ಗೆ ದೂರು ಬಂದಿದ್ದು, ನಿರ್ಮಿಸಲಾಗಿರುವ ರಸ್ತೆಗಳ ನಿರ್ವಹಣೆ ಸರಿಯಾಗಿ ಮಾಡಬೇಕು. ರಸ್ತೆಗಳ ಗುಣಮಟ್ಟ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಹಂಪ್ಸ್ ತೆಗೆಯಿರಿ; ಕುಮಾರ್‌ ಬಂಗಾರಪ್ಪ

ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ, ಶಿವಮೊಗ್ಗ ಮತ್ತು ಭದ್ರಾವತಿ ರಸ್ತೆಯಲ್ಲಿ 12 ಹಂಪ್ಸ್ ಇವೆ. ಮೊದಲು ಅವುಗಳನ್ನು ತೆರವುಗೊಳಿಸಿ. ಹೆದ್ದಾರಿಯಲ್ಲಿ ಹಂಪ್ಸ್ ಹಾಕಬಾರದು ಎಂದು ಸುಪ್ರೀಂ‌ಕೋರ್ಟ್ ಆದೇಶವಿದೆ. ತೆಗೆಯಲಿಲ್ಲ ಎಂದರೆ ಎಂಜಿನಿಯರ್‌ ವಿರುದ್ಧ ನ್ಯಾಯಾಲಯಕ್ಕೆ ಹೋಗಬಹುದು ಎಂದು ಎಚ್ಚರಿಸಿದರು.

ಅದಕ್ಕೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು. ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT