ಶಿವಮೊಗ್ಗ: ‘ಕೈಗಾರಿಕೋದ್ಯಮ ಬೆಳೆಯುವ ಸಾಮರ್ಥ್ಯ ಶಿವಮೊಗ್ಗ ನಗರಕ್ಕೆ ಇದೆ. ಅದಕ್ಕೆ ಅಗತ್ಯ ಸಹಕಾರ ನೀಡಲು ಸಿದ್ದನಿದ್ದೇನೆ. ಬದಲಾವಣೆ ತರಲು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪರೋಕಾಸ್ಟ್ ಸಭಾಂಗಣದಲ್ಲಿ ಉದ್ದಿಮೆದಾರರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ಸಾಕಷ್ಟು ಬೆಳೆದಿದೆ. ಆದರೆ ಇಚ್ಚಾಶಕ್ತಿ ಅಥವಾ ಇನ್ನಾವುದೋ ಕೊರತೆಯಿಂದ ಕೈಗಾರಿಕೋದ್ಯಮ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಕೈಗಾರಿಕೆ ಬೆಳೆಯಲು ಅಗತ್ಯ ಮೂಲ ಸೌಕರ್ಯ, ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ರೀತಿಯ ಸೌಕರ್ಯ ಇದೆ. ಇದರ ಬಳಕೆ ಆಗಬೇಕು. ಕೈಗಾರಿಕೆ ಬೆಳೆದಷ್ಟು ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ದಿ ಆಗಲಿದೆ ಎಂದರು.
ಉತ್ತಮ ಶಾಲೆ-ಸಂಸ್ಥೆಗಳು ಇಲ್ಲಿಯೇ ಆದರೆ ಜನ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಅದೇ ರೀತಿಯಲ್ಲಿ ಕೈಗಾರಿಕೆ ಬೆಳೆಸೋಣ. ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು ಅಗತ್ಯ ಇನ್‍ಪುಟ್ ನೀಡಿದಲ್ಲಿ ಅನುಕೂಲವಾಗುತ್ತದೆ. ವಿದ್ಯುತ್ ಸಮಸ್ಯೆ ಈಗ ಸ್ವಲ್ಪ ಇದೆ. ರೈತರಿಗೆ ನಾವು ವಿದ್ಯುತ್ ಕೊಡಲೇಬೇಕು. ಇಲ್ಲವಾದಲ್ಲಿ ಕೃಷಿ ಉತ್ಪಾದನೆ ಕಮ್ಮಿ ಆಗುತ್ತದೆ. ಆರ್ಥಿಕವಾಗಿ ಹಿಂದುಳಿಯುತ್ತೇವೆ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂವಾದದ ವೇಳೆ ಉದ್ಯಮಿ ರಮೇಶ್ ಮಾತನಾಡಿ, ಟೌನ್‍ಶಿಪ್ ಅಭಿವೃದ್ದಿಗೆ ಕನಿಷ್ಟ 1250 ಎಕರೆ ಬೇಕಿದೆ ಎಂಬುದು ಕಾನೂನು ತೊಡಕಿಗೆ ಕಾರಣವಾಗಿದೆ. ಇಲ್ಲಿ ಅಷ್ಟು ಜಾಗ ಸಿಗುವುದು ಕಷ್ಟ. ನಿಯಮದಲ್ಲಿ ಬದಲಾವಣೆ ತಂದರೆ ಶಿವಮೊಗ್ಗದಲ್ಲಿ ಕೈಗಾರಿಕೆ ಬೆಳೆಯುವ ಜೊತೆಗೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು. ಈ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರೊಂದಿಗೆ ಮಾತನಾಡುವುದಾಗಿ ಮಧು ಬಂಗಾರಪ್ಪ ತಿಳಿಸಿದರು.
ಉದ್ಯಮಿ ಪ್ರದೀಪ್ ಮಾತನಾಡಿ, ಶಿವಮೊಗ್ಗದಲ್ಲಿ ಟ್ರಕ್ ಟರ್ಮಿನಲ್ ಇಲ್ಲದ ಕಾರಣ ತೊಂದರೆ ಆಗುತ್ತಿದೆ. ಟ್ರಕ್‍ಗಳನ್ನು ನಿಲ್ಲಿಸಲು ಜಾಗ ಇಲ್ಲದ ಕಾರಣ ಹೆಚ್ಚು ಬಾಡಿಗೆ ಕೇಳುತ್ತಾರೆ ಎಂದರು.
ಉದ್ಯಮಿ ಉದಯಕುಮಾರ್ ಮಾತನಾಡಿ, ಕೋಟೆಗಂಗೂರು ರೈಲ್ವೆ ಕೋಚ್ ಕಾಮಗಾರಿಯ ವೇಗ ಹೆಚ್ಚಿಸಬೇಕು. ಟ್ರೇಡ್ ಲೈಸೆನ್ಸ್ ಪ್ರಕ್ರಿಯೆ ತುಂಬಾ ವಿಳಂಬವಾಗುತ್ತಿದೆ. ಎಷ್ಟೋ ಜನರು ಲೈಸೆನ್ಸ್ ಪಡೆದಿರುವುದಿಲ್ಲ. ಸ್ಮಾರ್ಟ್‍ಸಿಟಿ ಕಾಮಗಾರಿ, ಫುಟ್‍ಪಾತ್ ನಲ್ಲಿ ಸಾಕಷ್ಟು ಅಂಗಡಿಗಳಿಂದ ತೊಂದರೆಯಾಗುತ್ತಿದೆ ಎಂದರು.
ಸಂತೋಷ್ ಮಾತನಾಡಿ, ಉದ್ಯಮಗಳಿಗೆ 440 ವೋಲ್ಟ್ ವಿದ್ಯುತ್ ಅವಶ್ಯಕತೆ ಇದೆ. ಆದರೆ ಈಗ 300 ವೋಲ್ಟ್ ನೀಡಲಾಗುತ್ತಿದೆ. ಅಷ್ಟು ವಿದ್ಯುತ್ ಪೂರೈಸಲು ಸರ್ಕಾರ ಮುಂದಾಗಲಿ ಎಂದು ಹೇಳಿದರು.
ಪ್ರಕಾಶ್ ಮಾತನಾಡಿ, ಗಾಂಧಿ ಬಜಾರ್ ಬಳಿ ಇರುವ ಅಂಡರ್ ಪಾಸ್ ಬಳಕೆಯಾಗುತ್ತಿಲ್ಲ. ಅದನ್ನು ಉಪಯೋಗಿಸುವುದರಿಂದ ಟಾಫಿಕ್ ಸಮಸ್ಯೆ ಬಗೆಹರಿಸಬಹುದು ಎಂದರು.
ವಿಶ್ವೇಶ್ವರಯ್ಯ ಮಾತನಾಡಿ, ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಉದ್ಯಮಿಗಳ ಸಭೆ ಕರೆದು ಸಚಿವರು, ಶಾಶ್ವತ ಕೈಗಾರಿಕಾ ಯೋಜನೆ ತರಬೇಕು. ಇದರಿಂದ ನಿರುದ್ಯೊಗ ಸಮಸ್ಯೆ ನಿವಾರಣೆ ಆಗಲಿದೆ ಎಂದರು.
ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವರು, ಕೈಗಾರಿಕೆಗಳು ಬೆಳೆಯಲು ಅಗತ್ಯ ಕ್ರಮಗಳ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ವಾಸುದೇವ, ಕಾರ್ಯದರ್ಶಿ ವಸಂತ ಹೋಬಳಿದಾರ್, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಅಶ್ವತ್ಥನಾರಾಯಣ ಇದ್ದರು.
ಬೀದಿಬದಿ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುವುದಿಲ್ಲ
ಉದ್ಯಮಿಯೊಬ್ಬರು ಪಾದಾಚಾರಿ ಮಾರ್ಗ (ಫುಟ್‍ಪಾತ್)ನಲ್ಲಿ ಬೀದಿಬದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ ಬೀದಿಬದಿ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುವುದಿಲ್ಲ. ಅಕ್ರಮವಾಗಿ ಕೆಲವರು ವ್ಯಾಪಾರ ನಡೆಸುತ್ತಿರಬಹುದು. ಆದರೆ ಇಲ್ಲಿಯವರೆಗೆ ಏಕೆ ಅವರ ವಿರುದ್ಧ ಕ್ರಮ ಜರುಗಿಸಿಲ್ಲ. ಈಗ ಅವರ ವಿರುದ್ಧ ಕ್ರಮ ಕೈಗೊಂಡರೆ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಾರೆ. ನಾನು ಪ್ರತಿಭಟನೆಗೆ ಹೆದರುವುದಿಲ್ಲ. ಆದರೆ ಅವರಿಗೂ ಜೀವನೋಪಾಯಕ್ಕೆ ಅವಕಾಶ ಮಾಡಿಕೊಡಬೇಕು ಎಂದರು. ಟಿ.ರಾಮಪ್ಪ ಕುಸ್ಕೂರು ಮಾತನಾಡಿ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಗಳ ಅಭಿವೃದ್ಧಿಗೆ ಮೂಲ ನೀರು. ಈಗಾಗಲೇ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಆದ್ದರಿಂದ ಜಲಮೂಲಗಳ ಅಭಿವೃದ್ಧಿ ಆಗಬೇಕು. ನಗರಕ್ಕೆ ನೀರುಣಿಸುವ ತುಂಗಾ ಜಲಾಶಯದಲ್ಲಿ ಅನೇಕ ವರ್ಷದಿಂದ ಹೂಳು ತುಂಬಿದೆ. ಅದನ್ನು ತೆಗೆಸಬೇಕು. ಇಲ್ಲವಾದರೆ ಯಾವುದೇ ಅಭಿವೃದ್ಧಿ ನಡೆಸಿದರು ವ್ಯರ್ಥ ಎಂದರು. ಅದಕ್ಕೆ ಪ್ರತಿಕ್ರಿಸಿದ ಸಚಿವರು ಇದಕ್ಕೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಿ ಜಲಾಶಯದ ಹೂಳು ತೆಗೆಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.