ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ಭಕ್ತರು

ಈಶ್ವರನ ಸ್ಮರಣೆಯಲ್ಲಿ ರಕ್ತದಾನ, ಪ್ರಸಾದ, ಮಜ್ಜಿಗೆ ವಿತರಣೆ
Last Updated 2 ಮಾರ್ಚ್ 2022, 2:56 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಎಲ್ಲೆಡೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಶಿವಮೊಗ್ಗದ ಪ್ರಮುಖ ದೇವಾಲಯಗಳಿಗೆ ಭಕ್ತ ಸಾಗರ ಹರಿದುಬಂದಿತ್ತು. ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಶಿವನ ದರ್ಶನ ಪಡೆದ ಭಕ್ತರು ಭಕ್ತಿಯ ಭಾವದಲ್ಲಿ ಮಿಂದೆದ್ದರು.

ನಗರದ ಹೊರವಲಯ ಹರಕೆರೆ ರಾಮೇಶ್ವರ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ನಡೆಯಿತು. ಇಲ್ಲಿರುವ ಬೃಹದಾಕಾರದ ಶಿವಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಬಾರಿ ಸಾರ್ವಜನಿಕರಿಗೆ ಶಿವನ ದರ್ಶನಕ್ಕೆ ಅವಕಾಶ ಇರಲಿಲ್ಲ.

ಶಿವಮೊಗ್ಗ ಬಿ.ಎಚ್. ರಸ್ತೆಯ ಮೈಲಾರೇಶ್ವರ, ಕೋಟೆ ರಸ್ತೆಯ ಭೀಮೇಶ್ವರ, ರವೀಂದ್ರ ನಗರದ ಪಾರ್ಕ್‌ ಆವರಣದಲ್ಲಿರುವ ಶಿವಾಲಯ, ಮಲವಗೊಪ್ಪದ ಚನ್ನಬಸವೇಶ್ವರ, ಶರಾವತಿ ನಗರದ ಕಾಲ ಭೈರವೇಶ್ವರ ದೇವಾಲಯ, ಹೊಳೆಹೊನ್ನೂರು ರಸ್ತೆಯ ಅರಕೇಶ್ವರ ಸ್ವಾಮಿ ದೇವಾಲಯ, ಹೊಳೆಹೊನ್ನೂರು ರಸ್ತೆಯ ಅರಕೇಶ್ವರ ಸ್ವಾಮಿ ದೇವಾಲಯ, ಗಾಂಧಿ ಬಜಾರಿನ ಬಸವೇಶ್ವರಸ್ವಾಮಿ ದೇವಸ್ಥಾನ, ವಿನೋಬನಗರದ ಶಿವಾಲಯ, ನಗರದ ಸಮೀಪದ ಅಬ್ಬಲಗೆರೆ ಈಶ್ವರವನ,ಶಿವಮೊಗ್ಗ ತಾಲ್ಲೂಕು ಪುರದಾಳು ಗ್ರಾಮದ ಉದ್ಭವ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.

ರಕ್ತದಾನ ಶಿಬಿರ: ಮಹಾಶಿವರಾತ್ರಿ ನಿಮಿತ್ತ ಅಬ್ಬಲಗೆರೆಯ ನವ್ಯಶ್ರೀ ಈಶ್ವರ ವನ ಚಾರಿಟಬಲ್ ಟ್ರಸ್ಟ್‌ ವತಿಯಿಂದ ರೋಟರಿ ರಕ್ತ ನಿಧಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್ ಅವರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿದರು. ಕುಟುಂಬ ಸಮೇತರಾಗಿ ಅಬ್ಬಲಗೆರೆಯ ಈಶ್ವರನ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಅಭಿಷೇಕ ನೆರವೇರಿಸಿದರು. ಟ್ರಸ್ಟ್‌ನ ಪ್ರಮುಖರಾದ ನವ್ಯಶ್ರೀ ನಾಗೇಶ್, ದಿನೇಶ್ ಶೇಟ್, ವೆಂಕಟೇಶ, ಗಣೇಶ್, ಗಜೇಂದ್ರ ಇದ್ದರು.

ನಗರದ ವಿನೋಬನಗರ ಶಿವಾಲಯದ ಮುಂಭಾಗ ಬಾಲಗಂಗಾಧರ ತಿಲಕ್ ಯುವ ಪಡೆ ಹಾಗೂ ಸಿಹಿಮೊಗೆ ಕನ್ನಡ ಯುವ ವೇದಿಕೆ ವಿನೋಬನಗರ ವತಿಯಿಂದ ಶಿವಾಲಯಕ್ಕೆ ಬರುವ ಭಕ್ತರಿಗೆ ಮಜ್ಜಿಗೆಯನ್ನು
ವಿತರಿಸಲಾಯಿತು.

ಬಾಲಗಂಗಾಧರ ತಿಲಕ್ ಯುವ ವೇದಿಕೆಯ ಅಧ್ಯಕ್ಷ ಸಂದೀಪ್ ಸುಂದರ್ ರಾಜ್, ಬಡಾವಣೆಯ ಯುವ ಮುಖಂಡರಾದ ಎಚ್.ಪಿ. ಗಿರೀಶ್, ಗುರುಪ್ರಸಾದ್, ಯಶ್ವಂತ್, ಪ್ರತೀಕ್ ಕೆಪಿ, ಗಿರೀಶ್ ಶೆಟ್ಟಿ, ದರ್ಶನ್‌, ಅಭಿಷೇಕ್ ಗೌಡ, ಮನೋಜ್ ವಿಘ್ನೇಶ್ ಲೋಹಿತ್, ಆಕರ್ಷ್, ದೇವರಾಜ್, ಯಶ್ವಂತ್, ವಿಕಾಸ್ ಇದ್ದರು.

ಹಳೇ ಶಿವಮೊಗ್ಗದಲ್ಲಿ ಪಥಸಂಚಲನ

ಶಿವಮೊಗ್ಗ ನಗರದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಕೆಎಸ್ಆರ್‌ಪಿ ಹಾಗೂ ಆರ್.ಎ.ಎಫ್ ತಂಡದಿಂದ ಪಥ ಸಂಚಲನ ನಡೆಯಿತು.

ಶಿವಮೊಗ್ಗ ನಗರದ ಸಿದ್ದೇಶ್ವರ ವೃತ್ತದಿಂದ ಪ್ರಾರಂಭವಾದ ಪಥಸಂಚಲನ ವಿನಾಯಕ ಸರ್ಕಲ್‌, ಗೋಪಾಳ ಬಸ್‌ ನಿಲ್ದಾಣ, ರಂಗನಾಥ ಬಡಾವಣೆ, ಕುರುಬರ ಕೇರಿ ಕೊರಮರ ಕೇರಿ, ಟಿಪ್ಪೂನಗರ ಚಾನೆಲ್‌ ಏರಿಯಾ, ಬುದ್ಧ ನಗರ, ಆರ್‌ಎಂಎಲ್‌ ನಗರ, ಟೆಂಪೊ ಸ್ಟ್ಯಾಂಡ್, ಕ್ಲಾರ್ಕ್‌ ಪೇಟೆ, ರವಿವರ್ಮ ಬೀದಿ, ಮೆಹಬೂಬ್‌ ಗಲ್ಲಿ, ಗಾಂಧಿ ಬಜಾರ್‌ ಮುಖ್ಯ ರಸ್ತೆ, ತಿರುಪಳ್ಳಯ್ಯನಕೇರಿ, ಲಷ್ಕರ್ ಮೊಹಲ್ಲಾ‌,‌ ಓಲ್ಡ್‌ ಬಾರ್ ಲೈನ್‌ ರಸ್ತೆ, ಹೊಳೆ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಗಿಗುಡ್ಡ ಕ್ರಾಸ್‌, ನೇತಾಜಿ ಸರ್ಕಲ್‌ ರಾಗಿಗುಡ್ಡ ಮಾರ್ಗವಾಗಿ ಶನೇಶ್ವರ ಸ್ವಾಮಿ ದೇವಸ್ಥಾನ ರಾಗಿಗುಡ್ಡದಲ್ಲಿ ಮುಕ್ತಾಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT