ಶಿವಮೊಗ್ಗ: ಜಗತ್ತಿನ 84 ದೇಶಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ನಿರ್ಮಾಣವಾಗಿವೆ. ಎಲ್ಲರೂ ಅವರ ಚಿಂತನೆಗೆ ಮಾರು ಹೋಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮಗೆ ಸ್ವಾತಂತ್ರ ಸುಲಭವಾಗಿ ಬಂದಿಲ್ಲ. ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದಿಂದ ಲಭಿಸಿದ್ದು. ಗಾಂಧೀಜಿಯವರು ತಮ್ಮ ಜೀವನಪೂರ್ತಿ ಶಾಂತಿ, ಸಮಾನತೆ, ಸೌಹಾರ್ದ ಸ್ಥಾಪನೆಗೆ ಹೋರಾಡಿದರು. ಅದನ್ನು ನಾವು ಉಳಿಸಿಕೊಂಡು ಹೋಗುವ ಜೊತೆಗೆ ಪ್ರೀತಿ-ವಿಶ್ವಾಸದಿಂದ ಬಾಳಬೇಕು ಎಂದರು.
‘ವಿಶ್ವದಲ್ಲೇ ಶಾಂತಿ ನೆಲೆಸಲು ಗಾಂಧೀಜಿಯವರು ಶಾಂತಿ ಸಂದೇಶ ಸಾರಿದ್ದಾರೆ. ಸ್ವದೇಶಿ ವಸ್ತುಗಳ ಬಳಕೆ, ಸ್ವಾವಲಂಬನೆ ಸೂತ್ರ, ಸ್ವಚ್ಛ ಭಾರತ ಸಂಕಲ್ಪದಂತಹ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲ ಸಾಗಬೇಕು’ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
‘ಗಾಂಧೀಜಿ ತಮ್ಮ ಜೀವನದುದ್ದಕ್ಕೂ ರಾಮನ ಭಜನೆಯನ್ನು ಮಾಡಿದ್ದಾರೆ ಎಂದು ಸ್ಮರಿಸಿದ ಅವರು, ನಾವೆಲ್ಲರೂ ದೇಶ ಭಕ್ತರಾಗೋಣ. ಸ್ವಚ್ಛ ಭಾರತ ನಿರ್ಮಾಣ ಮಾಡೋಣ’ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್ ಚನ್ನಬಸಪ್ಪ ತಿಳಿಸಿದರು.
‘ಗಾಂಧೀಜಿ ಅವರನ್ನು ಆರಾಧನಾ ನೆಲೆಯಿಂದ ನೋಡದೇ, ಒಬ್ಬ ವ್ಯಕ್ತಿಯಾಗಿ ನೋಡಿದಾಗ ಅವರು ಹೆಚ್ಚು ಅರ್ಥವಾಗುತ್ತಾರೆ. ಅವರು ಸತ್ಯಕ್ಕಾಗಿ ಬದುಕಿದವರು. ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಬೇಕು ಎಂದು ಹೋರಾಡಿದರು’ ಎಂದು ಉಪನ್ಯಾಸಕ ಅಣ್ಣಪ್ಪ ಮಳಮಠ್ ಅವರು ಗಾಂಧೀಜಿ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ವಧರ್ಮ ಬೋಧನೆ ಪಠಣ ಮಾಡಲಾಯಿತು. ಫ್ರೌಢಶಾಲೆ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಭೂಪಾಲ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.