ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾತ್ಮ ಗಾಂಧಿ ಪ್ರಭಾವ: ಚರಕ ನಿಧಿಗೆ ತೀರ್ಥಹಳ್ಳಿಯಲ್ಲಿ ₹1506 ಸಂಗ್ರಹ’

ಲೇಖಕ ಡಿ.ಎಸ್. ಸೋಮಶೇಖರ್ ಮಾಹಿತಿ
Last Updated 9 ಆಗಸ್ಟ್ 2022, 4:47 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘1927 ಆ. ತಿಂಗಳಲ್ಲಿ ಮಹಾತ್ಮ ಗಾಂಧೀಜಿ ತಾಲ್ಲೂಕಿಗೆ ಆಗಮಿಸಿದ್ದರು. ಗಾಂಧಿ ಪ್ರಭಾವಕ್ಕೆ ಒಳಗಾಗಿ ಎಲ್ಲ ಜಾತಿ ಧರ್ಮದವರೂ ಸೇರಿ ಅವರ ಚರಕ ನಿಧಿಗೆ ₹ 1506 ಸಂಗ್ರಹಿಸಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ 526 ಜನರು ವಂತಿಗೆ ನೀಡಿದ್ದರು’ ಎಂದು ಲೇಖಕ ಡಿ.ಎಸ್. ಸೋಮಶೇಖರ್ ಸ್ಮರಿಸಿದರು.

ತಾಲ್ಲೂಕು ಕನ್ನಡ‌ ಸಾಹಿತ್ಯ ಪರಿಷತ್ತು ವತಿಯಿಂದ ಬಾಳೇಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೀರ್ಥಹಳ್ಳಿ ಕೊಡುಗೆ’ ವಿಷಯ ಮಂಡಿಸಿ ಮಾತನಾಡಿದರು.

‘ಗಾಂಧಿ ದಾವಣಗೆರೆಗೆ ಬಂದಿದ್ದಾಗ ಮಂಜುನಾಥಯ್ಯ, ಮಾಳೂರು ಸುಬ್ಬರಾಯರು ತೀರ್ಥಹಳ್ಳಿಗೆ ಬರುವಂತೆ ಆಹ್ವಾನಿಸಿದ್ದರು. ದೇಣಿಗೆ ಸಮಿತಿ ಅಧ್ಯಕ್ಷರಾಗಿ ಜವಳಿ ಮಾಧವ ರಾವ್, ಖಜಾಂಚಿಯಾಗಿ ಜವಳಿ ಭಾಸ್ಕರ ರಾವ್ ಕಾರ್ಯ ನಿರ್ವಹಿಸಿದ್ದರು’ ಎಂದು ವಿವರಿಸಿದರು.

‘95 ವರ್ಷಗಳ ಹಿಂದೆ ಆ. 15ರಂದು ರಾಧಾಕೃಷ್ಣ ಮುದ್ರಣಾಲಯದಲ್ಲಿ ಗಾಂಧಿ ಆಗಮನದ ಆಹ್ವಾನ ಪತ್ರಿಕೆ ಮುದ್ರಣಗೊಂಡಿದೆ. 17ರಂದು ಆಗುಂಬೆ ಬಸ್ ನಿಲ್ದಾಣದ ಸಮೀಪವಿದ್ದ ಡ್ರಾಮಾ ಥಿಯೇಟರ್ ಕಟ್ಟಡದಲ್ಲಿ ಭಾಷಣ ಮಾಡಿದ್ದರು. ಅವರ ಆಪ್ತ ಕಾರ್ಯದರ್ಶಿ ಮಹಾದೇವ ಪ್ರಸಾದ್, ರಾಜಾಗೋಪಾಲಚಾರ್ಯ ಇನ್ನಿತರ ಗಣ್ಯರು ಬಂದಿದ್ದರು’ ಎಂದು ತಿಳಿಸಿದರು.

‘ಅಸ್ಪೃಶ್ಯತೆ, ಸ್ವದೇಶಿ, ಚರಕ, ಮದ್ಯವ್ಯರ್ಜನ ಸ್ತ್ರೀ ಪುರುಷ ಸಮಾನತೆ ಕುರಿತು ಶಾಂತಿ, ಅಹಿಂಸೆ, ಸತ್ಯಾಗ್ರಹ ಮಂತ್ರಗಳ ಮೂಲಕ ಜಗತ್ತನ್ನು ಸೆಳೆದ ಮಹಾಪುರುಷ. ಸತ್ಯ ಪ್ರತಿಪಾದಿಸಿ ನೈತಿಕತೆ, ಮಾನವೀಯತೆಗೆ ಒತ್ತು ನೀಡಿದ್ದಾರೆ. ಹೀಗಾಗಿ ಯುರೋಪಿನಲ್ಲಿ ಎರಡನೇ ಏಸು ಕ್ರಿಸ್ತ ಎಂಬ ಗೌರವ ಸೂಚಿಸುತ್ತಾರೆ. ವಿದ್ಯಾರ್ಥಿಗಳು ‘ಹಿಂದ್ ಸ್ವರಾಜ್’ ಪುಸ್ತಕ ಓದಬೇಕು’ ಎಂದು ಸಲಹೆ ನೀಡಿದರು.

1924ರ ಬೆಳಗಾವಿ 39ನೇ ಭಾರತ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನದಲ್ಲಿ ಕುವೆಂಪು, ದೇವಂಗಿ ಮಾನಪ್ಪ, ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲ ಗೌಡ, ಹೆದ್ದೂರು ಮಂಜಪ್ಪ ಗೌಡರು, ಹುಂಚ ರಂಗರಾಯರು, ಕಿಟ್ಟಪ್ಪ ಗೌಡರು, ಶ್ಯಾಮ್ ಐತಾಳ್, ಸದಾಶಿವರಾಯರು, ಮೇಗರವಳ್ಳಿ ಶೇಷಪ್ಪ ಹೆಗ್ಡೆ, ತಿಮ್ಮರಸಯ್ಯ ಸೇರಿ ತಾಲ್ಲೂಕಿನ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದರು.

ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಾ.ಬಿ.ಎಂ. ಜಯಶೀಲ, ಕಾಲೇಜಿನ ಪ್ರಾಂಶುಪಾಲ ಎಂ.ಎನ್.ವಿಜಯೇಂದ್ರ ಮಾತನಾಡಿದರು.

ಕೆ.ಎಸ್.ಉಮೇಶ್ ಜೋಯ್ಸ್ ಪ್ರಾರ್ಥಿಸಿದರು. ಆರ್.ಎಂ.ಧರ್ಮ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸೌಳಿ ನಾಗರಾಜ್ ವಂದಿಸಿದರು. ಉಪನ್ಯಾಸಕ ಮಾರುತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT