ಗುರುವಾರ , ಅಕ್ಟೋಬರ್ 21, 2021
29 °C

ಮಹೇಶ್ ಹುಲ್ಕುಳಿ ಮ್ಯಾಮ್ಕೋಸ್ ಉಪಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಮ್ಯಾಮ್ಕೋಸ್ (ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ) ನೂತನ ಉಪಾಧ್ಯಕ್ಷರಾಗಿ ಮಹೇಶ್ ಎಚ್‌.ಎಸ್‌. ಹುಲ್ಕುಳಿ ಆಯ್ಕೆಯಾಗಿದ್ದಾರೆ.

ಇಲ್ಲಿನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಮಹೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾದರು.

ಸಂಸ್ಥೆಯ ಬೈಲಾ ಪ್ರಕಾರ ಆಡಳಿತ ಮಂಡಳಿಯಿಂದ ಉಪಾಧ್ಯಕ್ಷರನ್ನು ಚುನಾಯಿಸಲಾಗುತ್ತದೆ. ನಿತ್ಯ ವ್ಯವಹಾರಗಳನ್ನು ಉಪಾಧ್ಯಕ್ಷರೇ ನಿರ್ವಹಿಸುತ್ತಾರೆ. 2020ರ ಅವಧಿಯಲ್ಲಿ ಅವಿರೋಧವಾಗಿ ಆಯ್ಕೆಯಾದ ವೈ.ಎಸ್.ಸುಬ್ರಹ್ಮಣ್ಯ ಅವರು ಮೊದಲ ಒಂದೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದು, ಆ. 9ರಂದು ಸಹಕಾರ ಭಾರತಿ ಮುಖಂಡರ ಸೂಚನೆಯನ್ವಯ ರಾಜೀನಾಮೆ ನೀಡಿದ್ದರು. ಬಳಿಕ ಚುನಾವಣೆ ಘೋಷಣೆಯಾಗಿತ್ತು. ಬುಧವಾರ ನಡೆದ ಚುನಾವಣೆಯಲ್ಲಿ ಎಲ್ಲ ಸದಸ್ಯರು ಮ್ಯಾಮ್ಕೋಸ್ ಆಡಳಿತ ಮಂಡಳಿ ಸಭೆಗೆ ಹಾಜರಾಗಿದ್ದರು.

2015ರಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಎಲ್ಲ 18 ಸದಸ್ಯರು ಆಯ್ಕೆಯಾಗಿದ್ದು, ಎರಡನೇ ಬಾರಿ ಆಯ್ಕೆಯಾಗಿದ್ದ ವೈ.ಎಸ್.ಸುಬ್ರಹ್ಮಣ್ಯ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 2020ರಲ್ಲಿ ನಡೆದ ಚುನಾವಣೆಯಲ್ಲಿ ಕೂಡ ಸಹಕಾರ ಭಾರತಿ ಸ್ವೀಪ್ ಮಾಡಿತು. ಆಗ ಸುಬ್ರಹ್ಮಣ್ಯ ಅವರನ್ನು ಎರಡನೇ ಬಾರಿ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ, ಒಂದೂವರೆ ವರ್ಷದ ಬಳಿಕ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತಲ್ಲದೆ, ಹೊಸಬರಿಗೆ ಅವಕಾಶ ಕೊಡಲು ನಾಯಕರು ತೀರ್ಮಾನಿಸಿದ್ದರು.

ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪಪ್ರಬಂಧಕರಾದ ನಾಗೇಶ್ ಡೋಂಗ್ರೆ ಕಾರ್ಯ ನಿರ್ವಹಿಸಿದರು.

***

ರೈತರಿಗೆ ನ್ಯಾಯಸಮ್ಮತ ಬೆಲೆ

‘ಬೆಳಗಾರರ ಹಿತ ಕಾಯುವುದೇ ನಮ್ಮ ಉದ್ದೇಶ. ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಸರಳೀಕೃತವಾಗಿ ವ್ಯಾಪಾರ, ವಹಿವಾಟು ನಡೆಯುವಂತೆ ನೋಡಿಕೊಳ್ಳಲಾಗುವುದು. ರೈತರಿಗೆ ನ್ಯಾಯಸಮ್ಮತ ಬೆಲೆ ಒದಗಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

– ಮಹೇಶ್ ಎಚ್‌.ಎಸ್‌. ಹುಲ್ಕುಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು