ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರ: ಭರಪೂರ ಮಳೆ; ಭರ್ತಿಯ ಭರವಸೆ

‘ಮಾಣಿ’ ಜಲಾಶಯ: 11 ದಿನಗಳಲ್ಲಿ 8 ಮೀಟರ್ ನೀರು ಸಂಗ್ರಹ
Last Updated 13 ಜುಲೈ 2022, 3:04 IST
ಅಕ್ಷರ ಗಾತ್ರ

ಹೊಸನಗರ: ಮಾಣಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ 11 ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದೆ. ಪರಿಣಾಮ ಜಲಾಶಯದ ಒಳ ಹರಿವು ಹೆಚ್ಚುತ್ತಿದ್ದು, 8 ಮೀಟರ್‌ಗೂ ಹೆಚ್ಚು ನೀರು ಸಂಗ್ರಹವಾಗಿದೆ. ನಿರೀಕ್ಷೆಗೂ ಮೀರಿ ನೀರು ಹರಿದುಬರುತ್ತಿದ್ದು, ಈ ಬಾರಿ ಭರ್ತಿ ಆಗುವ ಭರವಸೆ ಮೂಡಿಸಿದೆ.

595 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈವರೆಗೆ 579.28 ಮೀಟರ್ ನೀರು ಸಂಗ್ರಹವಾಗಿದೆ. 11 ದಿನಗಳ ಹಿಂದೆ 570 ಮೀಟರ್ ನೀರು ಸಂಗ್ರಹವಾಗಿತ್ತು. ಮಳೆ ಸುರಿದಿದ್ದರಿಂದ 8.44 ಮೀಟರ್ (24 ಅಡಿಗೂ ಹೆಚ್ಚು) ಏರಿಕೆ ಕಂಡಿದೆ. ಹೀಗೆಯೇ ಸಂಗ್ರಹ ಮಟ್ಟ ಏರಿಕೆ ಕಾಣುತ್ತ ಸಾಗಿದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯ ಭರ್ತಿ ಆಗುವುದರಲ್ಲಿ ಸಂಶಯವಿಲ್ಲ.

ಈ ಬಾರಿ ಮುಂಗಾರಿನ ಆರಂಭ ತೀರಾ ದುರ್ಬಲವಾಗಿತ್ತು. ಅದರಲ್ಲೂ ಜೂನ್ ತಿಂಗಳ ಮಳೆಯ ಪ್ರಮಾಣದಲ್ಲಿ ಬಾರೀ ಇಳಿಕೆ ಕಂಡುಬಂದಿತ್ತು. ಮಾಣಿ ಜಲಾಶಯ ಭರ್ತಿಯಾಗುವುದೇ ಅಪರೂಪವಾದ್ದರಿಂದ ಈ ಬಾರಿ ನೀರಿನ ಸಂಗ್ರಹದಲ್ಲಿ ತೀರಾ ಇಳಿಕೆ ಕಂಡುಬರುವ ಆತಂಕ ಉಂಟಾಗಿತ್ತು. ಜುಲೈ ಆರಂಭಕ್ಕೇ ಮಳೆ ಸುರಿದ ಪರಿಣಾಮ ರೈತರ ಆತಂಕವನ್ನು ದೂರಮಾಡಿ ಅಚ್ಚರಿ ಮೂಡಿಸಿದೆ.

8.44 ಮೀಟರ್ ಏರಿಕೆ: ಜುಲೈ 1ರಂದು ನೀರಿನ ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ 3.70 ಮೀಟರ್ ಕಡಿಮೆಯಾಗಿತ್ತು. ಕಳೆದ ವರ್ಷ ಜುಲೈ 1ರಂದು ನೀರಿನ ಸಂಗ್ರಹ 573.70 ಮೀ ಇದ್ದರೆ, ಈ ವರ್ಷ 570 ಮೀ. ಇತ್ತು.

ಮಾಣಿಯಲ್ಲಿ ಹೆಚ್ಚು ಮಳೆ: ಮಾಣಿ ಜಲಾನಯನ ಪ್ರದೇಶದಲ್ಲಿ ಕಳೆದ 11 ದಿನಗಳಲ್ಲಿ ಬಾರಿ ಮಳೆ ಸುರಿದಿದೆ. ಜೂನ್‌ 6ರಂದು 23.7 ಸೆಂ.ಮೀ, ಜುಲೈ 10ರಂದು 20 ಸೆಂ.ಮೀ. ಮಳೆ ಸುರಿದಿದೆ. ಪ್ರತಿ ದಿನವೂ 20 ಸೆಂ.ಮೀ. ಸರಾಸರಿ ಮಳೆ ಸುರಿಯುತ್ತಿದೆ. ಅಲ್ಲದೆ, ಮಾಣಿಯಲ್ಲಿ ಈವರೆಗೆ 219.1 ಸೆಂ.ಮೀ ಮಳೆ ದಾಖಲಾಗಿದೆ.

ವಾರಾಹಿ ಯೋಜನಾ ಪ್ರದೇಶದ ಯಡೂರು, ಸುಣ್ಣದಮನೆ, ಮತ್ತಿಗಾ, ಮೇಲಸುಂಕಾ, ಮೇಗರವಳ್ಳಿ, ಗಿಣಿಕಲ್, ಯಡೂರು, ಹೆಬ್ಬಾಗಿಲು ಭಾಗದಲ್ಲಿ ನಿತ್ಯ 15 ಸೆಂ.ಮೀ.ನಿಂದ 25 ಸೆಂ.ಮೀ. ಮಳೆ ಸುರಿಯುತ್ತಿದೆ.

34 ವರ್ಷಗಳಲ್ಲಿ ತುಂಬಿದ್ದು 4 ಬಾರಿ ಮಾತ್ರ

595 ಮೀ. ಗರಿಷ್ಠ ಮಟ್ಟ ಹೊಂದಿರುವ ಮಾಣಿ ಜಲಾಶಯ 34 ವರ್ಷಗಳಲ್ಲಿ ನಾಲ್ಕು ಬಾರಿ ಮಾತ್ರ ಭರ್ತಿಯಾಗಿದೆ. ಈವರೆಗೆ ಜುಲೈ ಮತ್ತು ಆಗಸ್ಟ್‌ನಲ್ಲಿ ಭಾರಿ ಮಳೆ ಸುರಿದಾಗ ಮಾತ್ರ ತುಂಬಿದ ಉದಾಹರಣೆ ಇದೆ. ಈ ವರ್ಷವೂ ಹೀಗೆಯೇ ಮಳೆಯ ಅಬ್ಬರ ಮುಂದುವರಿದರೆ ಮಾತ್ರ ತುಂಬುವ ಸಾಧ್ಯತೆ ಇದೆ.

ವಾರಾಹಿ ಜಲವಿದ್ಯುತ್ ಯೋಜನೆಯಲ್ಲಿ ಮಾಣಿ ಜಲಾಶಯದ ಪಾತ್ರ ಮಹತ್ವದ್ದು. ಮಾಣಿಯಿಂದ ಹೆಚ್ಚಿನ ಪ್ರಮಾಣದ ನೀರಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಬಳಿಕ ಅದೇ ನೀರನ್ನು ಭೂಗರ್ಭ ವಿದ್ಯುದಾಗಾರಕ್ಕೆ ನೀರು ಹರಿಸಲಾಗುವ ವಿಶಿಷ್ಟ ಜಲಾಶಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT