ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಬೆಲೆ ಏರಿಕೆ ಖಂಡಿಸಿ ಮೆರವಣಿಗೆ

Last Updated 28 ಸೆಪ್ಟೆಂಬರ್ 2021, 3:08 IST
ಅಕ್ಷರ ಗಾತ್ರ

ಸಾಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ, ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರ ಪೊಲೀಸ್ ಠಾಣೆ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ‘ಸುಗ್ರೀವಾಜ್ಞೆಗಳ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯಿಂದಾಗಿ ರೈತರು ಬೀದಿಗೆ ಬರುವಂತಾಗಿದೆ. ಮುಕ್ತ ಮಾರುಕಟ್ಟೆ ಹೆಸರಿನಲ್ಲಿ ಕೃಷಿ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ಇದರ ಹಿಂದೆ ಇದೆ’ ಎಂದು ಟೀಕಿಸಿದರು.

ಕೃಷಿ ಉತ್ಪನ್ನಗಳ ಮಾರಾಟದ ಮೇಲಿದ್ದ ನಿರ್ಬಂಧವನ್ನು ತೆರವುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳನ್ನು ಹಣವುಳ್ಳವರು ಅಕ್ರಮವಾಗಿ ಸಂಗ್ರಹಿಸಲು ದಾರಿ ಮಾಡಿಕೊಟ್ಟಿದೆ. ಗುತ್ತಿಗೆ ಕೃಷಿಗೆ ಪ್ರೋತ್ಸಾಹ ನೀಡುವ ಸರ್ಕಾರದ ನೀತಿಯಿಂದ ಭವಿಷ್ಯದಲ್ಲಿ ಆಹಾರ ಬೆಳೆಗಳನ್ನೇ ಬೆಳೆಯುವವರು ಇಲ್ಲವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ್ ಕುಮಾರ್ ಕಸವೆ, ‘ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಶ್ರೀಮಂತರು ಕೃಷಿಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕೃಷಿಭೂಮಿಯ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಅಪಾಯವಿದೆ’ ಎಂದರು.

ರೈತ ಮುಖಂಡ ಕನ್ನಪ್ಪ ಸಿರಿವಂತೆ, ‘ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮನಸ್ಸಿಗೆ ಬಂದಂತೆ ಕಾಯ್ದೆಗಳನ್ನು ರೂಪಿಸುತ್ತಿರುವುದು ರೈತ ಸಮುದಾಯಕ್ಕೆ ಕಂಟಕವಾಗಿದೆ. ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದ ಕೆಲವೇ ವರ್ಷಗಳಲ್ಲಿ ಎಪಿಎಂಸಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಲಿದೆ’ ಎಂದು ಹೇಳಿದರು.

ರೈತ ಮಹಿಳೆ ಪೂರ್ಣಿಮಾ ಹಿರೇಮನೆ, ‘ಹತ್ತು ತಿಂಗಳಿನಿಂದ ರೈತರು ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಅವರೊಂದಿಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಗೆ ವ್ಯವಧಾನ ಇಲ್ಲದಿರುವುದು ವಿಪರ್ಯಾಸ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುಮಂಗಲಾ ರಾಮಕೃಷ್ಣ, ರೈತ ಸಂಘದ ಪ್ರಮುಖರಾದ ಕೆ.ಬಿ. ಸೇನಾಪತಿ ಗೌಡ, ಚಂದ್ರಶೇಖರ್, ಗುರುಮೂರ್ತಿ, ಮಂಜಪ್ಪ ಹಿರೇನೆಲ್ಲೂರು, ದಿನೇಶ್ ಶಿರವಾಳ, ಚಂದ್ರಶೇಖರ್ ಮಳ್ಳ, ಕೃಷ್ಣಮೂರ್ತಿ ಬಿಳಿಗಲ್ಲೂರು, ಮಂಜುನಾಥ ಬಳಸಗೋಡು ಭಾಗವಹಿಸಿದ್ದರು.

ಬಂದ್‌ಗೆ ನೀರಸ ಪ್ರತಿಕ್ರಿಯೆ: ಭಾರತ್ ಬಂದ್ ಕರೆಗೆ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಲ್ಲಿ ಕೆಲವು ಅಂಗಡಿಗಳನ್ನು ಕೆಲಕಾಲ ಬಂದ್ ಮಾಡಲಾಗಿತ್ತು. ಜನಜೀವನ ಸಹಜವಾಗಿತ್ತು. ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದು ಬಂದ್‌ಗೆ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT