ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳದಿ | ಮಾಂಸಾಹಾರವಿಲ್ಲದೆ ಮಾರಿಜಾತ್ರೆ ಆಚರಣೆ; ₹ 2.50 ಕೋಟಿ ಉಳಿತಾಯ

240 ಮನೆಗಳಿಂದ ಎರಡೂವರೆ ಕೋಟಿ ರೂಪಾಯಿ ಉಳಿತಾಯ
Last Updated 6 ಮಾರ್ಚ್ 2021, 2:39 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಕೆಳದಿ ಗ್ರಾಮ ಐತಿಹಾಸಿಕ ಕಾರಣಗಳಿಗಾಗಿ ಕರ್ನಾಟಕದ ಭೂಪಟದಲ್ಲಿ ಮಹತ್ವದ ಸ್ಥಾನ ಗಳಿಸಿದೆ. ಕೆಳದಿ ಅರಸರ ಕಾಲದಲ್ಲಿ ಕೆಳದಿ ಚೆನ್ನಮ್ಮ 25 ವರ್ಷಗಳ ಕಾಲ ರಾಣಿಯಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ಇಲ್ಲಿನ ನೆಲದ್ದು. ಈಗ ಕೆಳದಿ ಗ್ರಾಮ ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದೆ.

ಈ ಬಾರಿ ಕೆಳದಿ ಗ್ರಾಮಸ್ಥರು ಮಾಂಸಾಹಾರವನ್ನು ತ್ಯಜಿಸಿ, ಸಸ್ಯಾಹಾರ ಊಟದ ಮೂಲಕವೇ ಮಾರಿಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ಮಾಂಸಾಹಾರ ತ್ಯಜಿಸಿ ಜಾತ್ರೆ ಮಾಡಿದ್ದರಿಂದ ಸುಮಾರು ₹ 2.50 ಕೋಟಿ ಹಣ ಉಳಿತಾಯವಾದಂತಾಗಿದೆ.

ಹಾಗೆಂದು ಜಾತ್ರೆ, ಪೂಜೆಗೆ ಸಂಬಂಧಪಟ್ಟ ಯಾವುದೇ ವಿಧಿ ವಿಧಾನಗಳನ್ನು ಅವರು ಬಿಟ್ಟಿಲ್ಲ. ಎಂದಿನಂತೆ ಊರೊಟ್ಟಿನ ಜನರು ಒಟ್ಟಿಗೆ ಸೇರಿ ಜಾತ್ರೆಯನ್ನು ಸಂಭ್ರಮಿಸಿದ್ದಾರೆ. ಹೆಣ್ಣ ಮಕ್ಕಳು ತವರು ಮನೆಗೆ ಬಂದು ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಕೆಳದಿ ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ಮಾರಿಕಾಂಬಾ ದೇವಿಯ ಜಾತ್ರೆ ನಡೆಯುತ್ತದೆ. ಮಾರಿಜಾತ್ರೆ ಎಂದರೆ ಅಲ್ಲಿ ಕುರಿ, ಕೋಳಿ ಕಡಿದು ಬಾಡೂಟ ಬಡಿಸುವ ಖರ್ಚು ಗ್ರಾಮಸ್ಥರ ಪಾಲಿಗೆ ದೊಡ್ಡ ಬಾಬ್ತಿನದು. ಕುರಿ, ಕೋಳಿ ಊಟವಿಲ್ಲದೆ ಮಾರಿಜಾತ್ರೆಯೆ ಇಲ್ಲ ಎನ್ನುವುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕೇಳಿಬರುವ ಮಾತು.

ಗ್ರಾಮದಲ್ಲಿ ಸುಮಾರು 270 ಮನೆಗಳಿವೆ. ಈ ಪೈಕಿ 240 ಮನೆಗಳಲ್ಲಿ ಮಾಂಸಾಹಾರ ಉಪಯೋಗಿಸುವವರಿದ್ದಾರೆ. ಹಿಂದಿನಂತೆ ಕುರಿ, ಕೋಳಿ ಕಡಿದು ಜಾತ್ರೆ ಮಾಡಿದರೆ ಒಂದು ಮನೆಗೆ ₹ 50 ಸಾವಿರದಿಂದ ₹ 1.50 ಲಕ್ಷದವರೆಗೂ ಖರ್ಚು ಬರುತ್ತಿತ್ತು.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಜಾತ್ರೆ ಸಂಬಂಧ ಗ್ರಾಮದವರು ಸಭೆ ಸೇರಿದಾಗ ಸಸ್ಯಾಹಾರದ ಮೂಲಕವೇ ಜಾತ್ರೆ ಆಚರಿಸುವ ವಿಷಯ ಪ್ರಸ್ತಾಪವಾಯಿತು. ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಮಸ್ಥರು ಜಾತ್ರೆ ಕಾರಣಕ್ಕೆ ಮತ್ತೆ ಆರ್ಥಿಕ ತೊಂದರೆಗೆ ಸಿಲುಕುವುದು ಬೇಡ ಎಂಬ ಅಭಿಪ್ರಾಯಕ್ಕೆ ಮನ್ನಣೆ ದೊರಕಿತು.

ಹೀಗಾಗಿ, ಜಾತ್ರೆ ಸಂದರ್ಭದಲ್ಲಿ ಯಾರಾದರೂ ಕುರಿ, ಕೋಳಿ ಕಡಿದರೆ ₹ 25 ಸಾವಿರ ದಂಡ ವಿಧಿಸಬೇಕು ಎಂದು ತೀರ್ಮಾನಿಸಲಾಯಿತು. ಈ ತೀರ್ಮಾನಕ್ಕೆ ಬದ್ಧರಾದ ಗ್ರಾಮಸ್ಥರು ಸಸ್ಯಾಹಾರದ ಮೂಲಕವೇ ಕಳೆದ ಮಂಗಳವಾರದಿಂದ ಗುರುವಾರದವರೆಗೆ ಜಾತ್ರೆಯನ್ನು ಪೂರೈಸಿದ್ದಾರೆ. ಎರಡು ದಿನ ಜಾತ್ರೆ ಸಮಿತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಗ್ರಾಮಸ್ಥರ ಈ ತೀರ್ಮಾನದಿಂದ ಹೆಚ್ಚು ಖುಷಿ ಪಟ್ಟವರು ಊರಿನ ಹೆಣ್ಣುಮಕ್ಕಳು. ಏಕೆಂದರೆ ಈ ಹಿಂದೆ ಜಾತ್ರೆ ವೇಳೆ ಅಡುಗೆ, ಪಾತ್ರೆ ತೊಳೆಯುವ ಕೆಲಸದಲ್ಲೆ ಅವರು ಹೆಚ್ಚಿನ ಸಮಯ ಕಳೆಯಬೇಕಿತ್ತು. ಈ ಬಾರಿ ಮಹಿಳೆಯರು ಈ ಒತ್ತಡವಿಲ್ಲದೆ ಜಾತ್ರೆಯನ್ನು ಕಣ್ತುಂಬಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT