ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಒಂಬತ್ತು ದಿನ ಮಾರಿಕಾಂಬಾ ದೇವಿ ಜಾತ್ರೆ

ಸಾಗರ: ಜಾತ್ರೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಜಾತಿ, ಧರ್ಮದವರಿಗೂ ಮುಕ್ತ ಅವಕಾಶ
Last Updated 7 ಫೆಬ್ರುವರಿ 2023, 5:04 IST
ಅಕ್ಷರ ಗಾತ್ರ

ಸಾಗರ: ‘ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಮೂರು ವರ್ಷಗಳಿಗೊಮ್ಮೆ ನಡೆಯುವ ಇಲ್ಲಿನ ಮಾರಿಕಾಂಬಾ ಜಾತ್ರೆ ಫೆ. 7ರಿಂದ 15ರವರೆಗೆ ನಡೆಯಲಿದೆ. ಜಾತ್ರೆಯಲ್ಲಿ ವಹಿವಾಟು ನಡೆಸಲು ಎಲ್ಲ ಧರ್ಮಿಯರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ’ ಎಂದು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿ ಬಿ.ಗಿರಿಧರ ರಾವ್ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಜಾತ್ರೆಗೆ ಸಿದ್ಧತೆ ನಡೆಸಲಾಗಿದ್ದು, ಈಗ ಅದು ಅಂತಿಮ ಹಂತಕ್ಕೆ ತಲುಪಿದೆ. ಜಾತ್ರೆಯನ್ನು ವ್ಯವಸ್ಥಿತವಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಒಂಬತ್ತು ದಿನಗಳ ಅವಧಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಈ ಬಾರಿ ಜಾತ್ರೆಯ ಅಂಗವಾಗಿ ಗಾಂಧಿ ಮೈದಾನದಲ್ಲಿರುವ ನಗರಸಭೆ ರಂಗ ಮಂದಿರದಲ್ಲಿ ಫೆ. 8ರಿಂದ 15ರವರೆಗೆ ಪ್ರತಿದಿನ ಸಂಜೆ 5.30ರಿಂದ ರಾತ್ರಿ 1 ರವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಪ್ರಖ್ಯಾತ ಕಲಾವಿದರು, ಕಲಾ ತಂಡಗಳು ಪಾಲ್ಗೊಳ್ಳುತ್ತಿವೆ ಎಂದು ಮಾಹಿತಿ ನೀಡಿದರು.

ಫೆ. 10ರಿಂದ 12ರವರೆಗೆ ಮಧ್ಯಾಹ್ನ 3.30ರಿಂದ ನೆಹರೂ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಕರ್ನಾಟಕ ಹಾಗೂ ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಪ್ರಖ್ಯಾತ ಪೈಲ್ವಾನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹೊನಲು ಬೆಳಕಿನಲ್ಲಿ ಸಹ ಕುಸ್ತಿ ನಡೆಯಲಿದೆ ಎಂದು ತಿಳಿಸಿದರು.

ಜಾತ್ರೆಗೆ ಬರುವ ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ವೀರಶೈವ ಕಲ್ಯಾಣ ಮಂಟಪದಲ್ಲಿ ಭೋಜನದ ವ್ಯವಸ್ಥೆಯನ್ನು ಸಮಿತಿ ವತಿಯಿಂದ ಮಾಡಲಾಗಿದೆ. ಫೆ.7ರಂದು ರಾತ್ರಿ ನಡೆಯಲಿರುವ ಮಾರಿಕಾಂಬಾ ದೇವಿಯ ರಾಜಬೀದಿ ಉತ್ಸವದಲ್ಲಿ ನಾಡಿನ ಪ್ರಖ್ಯಾತ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ಅವರು ಹೇಳಿದರು.

ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ್ ಸಿಂಗ್, ಖಜಾಂಚಿ ನಾಗೇಂದ್ರ ಕುಮಟ, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಸಂಚಾಲಕರಾದ ರವಿ ನಾಯ್ಡು, ಕೆ.ಸಿ.ನವೀನ್, ಬಾಲಕೃಷ್ಣ ಗುಳೇದ್, ತಾರಾಮೂರ್ತಿ, ಪುರುಷೋತ್ತಮ್, ಧರ್ಮರಾಜ್, ಉಮೇಶ್ ಚೌಟಗಿ, ಲೋಕೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT