ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಕಟ್ಟೆ, ಕಲ್ಯಾಣಿಗಳ ಅಭಿವೃದ್ಧಿಗೆ ಕ್ರಮ-ಈಶ್ವರಪ್ಪ

ತೀರ್ಥಹಳ್ಳಿ ತಾ.ಪಂ. ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ
Last Updated 28 ಮಾರ್ಚ್ 2021, 4:58 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ನರೇಗಾ ಯೋಜನೆ ಮೂಲಕ ರಾಜ್ಯದ ಕೆರೆಕಟ್ಟೆ, ಕಲ್ಯಾಣಿ, ಗೋಕಟ್ಟೆ, ಶಾಲೆಗಳ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಮಳೆ ನೀರನ್ನು ಕೆರೆಗೆ ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು. ಈ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ನಡೆಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶನಿವಾರ ಪಟ್ಟಣದಲ್ಲಿ ₹ 12 ಕೋಟಿ ವೆಚ್ಚದ ತಾಲ್ಲೂಕು ಪಂಚಾಯಿತಿ ನೂತನ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಮಳೆನೀರನ್ನು ಕೆರೆಕಟ್ಟೆ, ಕಲ್ಯಾಣಿಗಳಲ್ಲಿ ಹಿಡಿದಿಡುವ ಮಹತ್ವದ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ, ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಬಣ್ಣ, ಕಾಂಪೌಂಡ್‌ ನಿರ್ಮಾಣ ಹಾಗೂ ಅಭಿವೃದ್ಧಿ ಕೆಲಸಗಳ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ ಎಂದರು.

ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಜೊತೆಗೆ ಅಭಿವೃದ್ಧಿ ಕೆಲಸ ಆಗಬೇಕಿದೆ. ದೇವಸ್ಥಾನಗಳ ಬಳಿ ಇರುವ ಕಲ್ಯಾಣಿಗಳ ಮರುಪೂರಣಕ್ಕೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಕೇಂದ್ರದ ಸಹಕಾರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ, ‘ಶಿವಮೊಗ್ಗ ಜಿಲ್ಲೆ ದೇಶದಲ್ಲಿ ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ಹೊರಹೊಮ್ಮಲಿದೆ. ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಜೋಗ ಜಲಪಾತದ ಮಳೆಗಾಲದ ವೈಭವವನ್ನು ಎಲ್ಲ ಋತುಗಳಲ್ಲಿಯೂ ಇರುವಂತೆ ನೋಡಿಕೊಳ್ಳಲಾಗುವುದು. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮೂಲಕ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಸಚಿವ ಈಶ್ವರಪ್ಪ ಅವರ ಸಹಕಾರ ಸ್ಮರಣೀಯ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ, ‘ಶಿಥಿಲಗೊಂಡಿದ್ದ ತಾಲ್ಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ಪ್ರಥಮ ಹಂತದಲ್ಲಿ ₹ 8 ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನೂ ₹4 ಕೋಟಿಯ ಅಗತ್ಯವಿದೆ. ಅನುದಾನದ ಕೊರತೆ ಇದ್ದರೂ ತಾಲ್ಲೂಕಿನ ಅಭಿವೃದ್ಧಿಗೆ ಜನಪ್ರತಿನಿಧಿಗಳು ಒತ್ತು ನೀಡಿದ್ದಾರೆ’ ಎಂದು
ತಿಳಿಸಿದರು.

ಬ್ರಿಟಿಷರ ಕಾಲದ ಕಟ್ಟಡ ತಾಲ್ಲೂಕಿನ ವಿವಿಧ ಇಲಾಖೆಗಳಿಗೆ ಆಶ್ರಯ ನೀಡಿತ್ತು. ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡ ಸ್ಥಳ ಇದಾಗಿದೆ. ವಿವಿಧ ಇಲಾಖೆಗಳನ್ನು ಒಂದೇ ಕಟ್ಟಡದಲ್ಲಿ ಸಂಯೋಜಿಸಲಾಗಿದೆ. ಮಲೆನಾಡಿಗೆ ಹೊಂದಿಕೆಯಾಗುವ ಶೈಲಿಯಲ್ಲಿ ಕಟ್ಟಡ ತಲೆ ಎತ್ತಲಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನವಮಣಿ ರವಿಕುಮಾರ್ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಯಶೋದ ಮಂಜುನಾಥ್, ಸದಸ್ಯರಾದ ಬೇಗುವಳ್ಳಿ ಕವಿರಾಜ್, ಸಾಲೇಕೊಪ್ಪ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಪನ, ಭಾರತಿ ಬಾಳೇಹಳ್ಳಿ, ಅಪೂರ್ವ ಶರಧಿ, ಕಾಸರವಳ್ಳಿ ಶ್ರೀನಿವಾಸ್, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ನಗರ ನೀರು ಸರಬರಾಜು ಮಂಡಳಿಯ ನಿರ್ದೇಶಕ ಆರ್.ಮದನ್, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಬಿ.ಟಿ. ಕಾಂತರಾಜ್ ಇದ್ದರು. ಚಂದವಳ್ಳಿ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ವೀಣಾ ಗಿರೀಶ್ ಪ್ರಾರ್ಥಿಸಿದರು. ಪ್ರಶಾಂತ್ ಕುಕ್ಕೆ ಸ್ವಾಗತಿಸಿದರು. ಟಿ.ಮಂಜುನಾಥ್ ನಿರೂಪಿಸಿದರು. ಇಒ ಆಶಾಲತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT