ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಹಾನಿ ಸಾಧ್ಯತೆಯ 93 ಗ್ರಾಮಕ್ಕೆ ಕ್ರಿಯಾಯೋಜನೆ

ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌. ವೈಶಾಲಿ ಮಾಹಿತಿ
Last Updated 27 ಮೇ 2022, 5:21 IST
ಅಕ್ಷರ ಗಾತ್ರ

ಶಿವಮೊಗ್ಗ: ಮಳೆಯಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇರುವ 93 ಗ್ರಾಮ ಪಂಚಾಯಿತಿಗಳನ್ನು ಗುರುತಿಸಿದ್ದು, ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌. ವೈಶಾಲಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಳೆಹಾನಿ ಸ್ಥಿತಿಗತಿ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಪರಿಶೀಲಿಸಿ ಕೆರೆಗಳಿಗೆ ಆಗುವ ಹಾನಿ ತಪ್ಪಿಸಲು ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್‌ ಮಾತನಾಡಿ, ‘ಅತಿವೃಷ್ಟಿ ಅನಾಹುತಗಳು ಮುಂಗಾರು ಸಮಯದಲ್ಲಿ ಮತ್ತೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಶಿವಮೊಗ್ಗ ನಗರದ ಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಹೂಳು ಸಂಪೂರ್ಣವಾಗಿ ತೆರವುಗೊಳಿಸಬೇಕು. ನೀರು ಸರಾಗವಾಗಿ ಹರಿದುಹೋಗಲು ಅಡ್ಡಿಯಾಗುವ ಅಡೆತಡೆಗಳನ್ನು ನಿವಾರಿಸಬೇಕು. ಈಚೆಗೆ ಸುರಿದ ಮಳೆಗೆ ಚರಂಡಿಗಳಲ್ಲಿ ಕಸ ಕಡ್ಡಿಗಳು ತುಂಬಿರುವ ಸಾಧ್ಯತೆ ಇದೆ. ಆದಷ್ಟು ಶೀಘ್ರ ತೆರವುಗೊಳಿಸಬೇಕು. ಶಿವಮೊಗ್ಗ ನಗರದಲ್ಲಿ ನೆರೆ ಪರಿಸ್ಥಿತಿ ಎದುರಿಸಲು ವಾರ್ಡ್‌ವಾರು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಕಾಲುವೆ ಪ್ರದೇಶ ಒತ್ತುವರಿಯಾಗಿದ್ದರೆ ತಕ್ಷಣ ತೆರವುಗೊಳಿಸಬೇಕು’ ಎಂದು ತಾಕೀತು ಮಾಡಿದರು.

ಬೆಳೆ ಹಾನಿ ಹಾಗೂ ಕಟಾವು ನಂತರ ಹಾನಿಯಾದ ಬೆಳೆಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಹಾನಿಗೀಡಾಗಿರುವ ಎಲ್ಲಾ ಕೆರೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಕೆರೆಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ನಗರದಲ್ಲಿ ಹಾದು ಹೋಗಿರುವ ತುಂಗಾ ನಾಲೆಯಲ್ಲಿ ತುಂಬಿರುವ ಹೂಳು ತೆರವುಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ನಗರದಲ್ಲಿ ಸುಮಾರು 4 ಸಾವಿರ ಮನೆಗಳಿಗೆ ನೀರು ನುಗ್ಗಿತ್ತು. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಲಾಗುವುದು. ಬೆಳೆ ಹಾನಿ ಕುರಿತು ಈಗಾಗಲೇ ಸರ್ವೆ ಕಾರ್ಯ ನಡೆಸಲಾಗಿದೆ. ಶೀಘ್ರ ಪರಿಹಾರ ವಿತರಿಸಲಾಗುವುದು. ಜನ, ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾಹಿತಿ ನೀಡಿದರು.

ಶಿವಮೊಗ್ಗ ನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ನಗರದಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ಕೈಗೊಂಡಿರುವ ಕ್ರಿಯಾ ಯೋಜನೆಗಳ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್‌. ಹೊನ್ನಳ್ಳಿ,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ನಗರ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ. ಜಯಲಕ್ಷ್ಮಮ್ಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.

ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಪೂರ್ಣಕ್ಕೆ ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈವರೆಗೆ ಸಮೀಕ್ಷೆ ನಡೆಸದಿರುವ ಹಾಗೂ ಬಾಕಿ ಉಳಿದ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಜೂನ್‌ ಒಳಗೆ ಸಮೀಕ್ಷೆ ನಡೆಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಸೂಚಿಸಿದರು.

ಸ್ಥಳೀಯ ಸಂಸ್ಥೆಗಳು, ಇತರೆ ಸ್ಥಳಗಳಲ್ಲಿ ನೇರಪಾವತಿ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ಹಾಗೂ ಅಂಗೀಕೃತ ಸಂಸ್ಥೆಯ ಸಹಯೋಗದಲ್ಲಿ ಗುರುತಿನ ಪತ್ರ ನೀಡಲು ಸೂಚಿಸಲಾಗಿದೆ. ಸ್ವಚ್ಛತಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ತಮ್ಮ ಸುರಕ್ಷತೆಗಾಗಿ ನೀಡಲಾಗಿರುವ ಪರಿಕರಗಳನ್ನು ಬಳಸದಿರುವುದು ಗಮನಕ್ಕೆ ಬಂದಿದೆ. ಪರಿಕರಗಳನ್ನು ಬಳಸಿಕೊಂಡು ಆರೋಗ್ಯ ಸುರಕ್ಷತೆಗೆ ಗಮನಹರಿಸಬೇಕು ಎಂದರು.

ಸ್ವಚ್ಛತಾ ಕಾರ್ಮಿಕರ ಆರೋಗ್ಯ ತಪಾಸಣೆ, ಸೇವಾ ಸೌಲಭ್ಯಗಳು, ಉಪಹಾರ, ವಸತಿ, ವಿಶ್ರಾಂತಿಗೃಹ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾ ಕಾರ್ಮಿಕರು ನಿವೃತ್ತರಾದ್ದರೆ ಅಂತಹ ಕಾರ್ಮಿಕರ ಕುಟುಂಬಗಳ ಅವಲಂಬಿತರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು.ನಗರ, ಪಟ್ಟಣ ಪ್ರದೇಶಗಳ ಉದ್ಯಾನಗಳಲ್ಲಿ ಸ್ವಚ್ಛತಾ ಕಾರ್ಮಿಕರ ಅನುಕೂಲಕ್ಕಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ಸಫಾಯಿ ಕರ್ಮಚಾರಿಗಳನ್ನು ಬಳಸಿಕೊಳ್ಳುತ್ತಿರುವ ಕುರಿತು ಅಹವಾಲು ಕೇಳಿ ಬರುತ್ತಿದೆ. ಕೂಡಲೇ ಸರಿಪಡಿಸಿಕೊಳ್ಳಬೇಕು. ಕಾರ್ಖಾನೆಗಾಗಿ ಪ್ರತ್ಯೇಕ ಸಕ್ಕಿಂಗ್ ಯಂತ್ರ ಕೊಂಡುಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT