ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಮೇಲಿನ ದಾಳಿ ಸರಿಪಡಿಸಲಾಗುತ್ತಿದೆ: ಸಂಸದ ಬಿ.ವೈ. ರಾಘವೇಂದ್ರ

ವಿಎಚ್‌ಪಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಸದ
Last Updated 30 ಮೇ 2022, 3:59 IST
ಅಕ್ಷರ ಗಾತ್ರ

ಭದ್ರಾವತಿ: ಹಿಂದೂ ಸಂಸ್ಕೃತಿಯ ಮೇಲೆ ಹಾಕಿರುವ ಪರದೆಯನ್ನು ಸರಿಪಡಿಸುವ ಕೆಲಸ ನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಭಾನುವಾರ ಜರುಗಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಧರ್ಮಶ್ರೀ ಸಮುದಾಯ ಭವನದ ಮುಂದುವರಿದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಹಿಂದೂ ಧರ್ಮದ ಮೇಲೆ ನಡೆದಿದ್ದ ನಿರಂತರ ದಾಳಿಯನ್ನು ಸರಿಪಡಿಸುವ ಕೆಲಸ ಈಗ ನಡೆದಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಸಂಕಲ್ಪ ಮಾಡುವ ಮೂಲಕ ಕೆಲಸ ನಡೆದಿದೆ. ಇದೆಲ್ಲವೂ ಹಲವು ವರ್ಷಗಳ ನಿರಂತರ ಹೋರಾಟದ ಫಲ ಎಂದರು.

‘ಎಲ್ಲಾ ರಂಗದಲ್ಲೂ ಆಗಿರುವ ವ್ಯವಸ್ಥಿತ ಪಿತೂರಿ ಹೊರತೆಗೆಯುವ ಕೆಲಸ ನಡೆದಿದೆ. ಇದಕ್ಕೆ ಮತ್ತಷ್ಟು ಕಾಲ ಬೇಕಿದೆ. ಅನೇಕ ಹಿರಿಕರ, ಪರಿವಾರದ ಕನಸನ್ನು ಈಡೇರಿಸುವ ಕೆಲಸ ನಡೆದಿದ್ದು, ಇದಕ್ಕೆ ಕೋಮುಬಣ್ಣ ಹಚ್ಚುವ ಕೆಲಸ ವಿರೋಧ ಪಕ್ಷಗಳಿಂದ ನಡೆದಿದೆ’ ಎಂದು ದೂರಿದರು.

ನಿರಂತರ ಕೆಲಸ: ‘ಹಿಂದೂ ಸಮಾಜವನ್ನು ಕಟ್ಟುವ ಕೆಲಸ ನಿರಂತರವಾಗಿ ಸಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ವಿರೋಧಿಗಳು ಪ್ರತಿ ಸಂದರ್ಭದಲ್ಲೂ ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ನಮ್ಮ ಸಾಂಸ್ಕೃತಿಕ ಬದ್ಧತೆಗೆ ಧಕ್ಕೆ ಮಾಡುವ ಕೆಲಸ ನಡೆಸಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು ಹೇಳಿದರು.

ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ‘ವಿಶ್ವ ಹಿಂದೂ ಪರಿಷತ್ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುವ ಮೂಲಕ ಬಡವರ ಪಾಲಿಗೆ ನೆರವಾಗಿದೆ. 38 ವರ್ಷಗಳಲ್ಲಿ 700ಕ್ಕೂ ಹೆಚ್ಚು ವಿವಾಹಗಳನ್ನು ನೆರವೇರಿಸಿರುವುದು ಶ್ಲಾಘನೀಯ’ ಎಂದರು.

ನಗರಸಭೆ ಅಧ್ಯಕ್ಷೆ ಗೀತಾರಾಜಕುಮಾರ್ ಮಾತನಾಡಿ, ‘ಸಮಾಜ ಕಟ್ಟುವ ಕೆಲಸ ಮಾಡುವುದು ಬಹಳಷ್ಟು ಕಷ್ಟಕರ. ಆದರೂ ಇಲ್ಲಿರುವ ಹಿರಿಕರು ಕಷ್ಟಪಟ್ಟು ಮಾಡುತ್ತಿರುವ ಈ ಸೇವೆ ಮೆಚ್ಚುವಂತಹುದು. ಇದಕ್ಕೆ ಅವಶ್ಯ ಇರುವ ನೆರವನ್ನು ಒದಗಿಸಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಡಾ.ನರೇಂದ್ರಭಟ್, ಹಾ.ರಾಮಪ್ಪ, ಕೇಶವಹೆಗ್ಡೆ, ವಾಸುದೇವಮೂರ್ತಿ,ಎಸ್.ಮುತ್ತುರಾಮಲಿಂಗಮ್, ಯಶೋಧ ವೀರಭದ್ರಪ್ಪ, ಕೆ.ಎಚ್. ತೀರ್ಥಯ್ಯ, ವೇದಾವತಿ ಶಿವಮೂರ್ತಿ, ಆರ್. ಪೂರ್ವಾಚಾರ್, ಡಿ.ಆರ್. ಶಿವಕುಮಾರ್, ವೈ.ಎಸ್. ರಾಮಮೂರ್ತಿ, ಮಂಜುನಾಥ ಪವಾರ್, ಎನ್.ಎಸ್. ಮಹೇಶ್ವರಪ್ಪ, ಡಾ.ಬಿ.ಜಿ. ಧನಂಜಯ ಅವರೂ ಉಪಸ್ಥಿತರಿದ್ದರು.

ಸಂಸ್ಕೃತಿ ಹತ್ತಿಕ್ಕುವ ಯತ್ನ: ಸ್ವಾಮೀಜಿ

‘ಮತಪ್ರಚಾರ ಮೂಲಕ ಹಿಂದೂ ಧಾರ್ಮಿಕ ಸಂಸ್ಕೃತಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿವೆ. ಇದನ್ನು ಯಾರೂ ಸಹಿಸದೆ ನಮ್ಮ ಧಾರ್ಮಿಕ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ನಡೆಸಬೇಕು’ ಎಂದು ಶಿವಮೊಗ್ಗ ಬಸವ ಕೇಂದ್ರದ ಬಸವಮರುಳಸಿದ್ದ ಸ್ವಾಮೀಜಿ ಹೇಳಿದರು.

‘ಕೆಲವೊಂದು ಧರ್ಮಗಳು ತಮ್ಮದೇ ಅಧಿಪತ್ಯ ಇರಬೇಕು ಎಂದು ಬಯಸುತ್ತವೆ. ಇದು ಸರಿಯಲ್ಲ. ಅಂತಹ ಶಕ್ತಿಗಳಿಗೆ ಸರಿಯಾದ ಉತ್ತರ ನೀಡುವ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದರು.

‘ಟೀಕೆಯಲ್ಲೂ ತಾರತಮ್ಯ ಎಷ್ಟು ಸರಿ’

ಟಿಪ್ಪು, ಅಕ್ಬರ್, ಔರಂಗಜೇಬನ ಪಠ್ಯ ಒಪ್ಪುವ ನಮ್ಮ ಬುದ್ಧಿಜೀವಿ ಮನಸ್ಸುಗಳು ನಮ್ಮ ಸಂಸ್ಕೃತಿಯ ಭಾಗವಾದ ಭಗವದ್ಗೀತೆ, ರಾಮಾಯಣ, ಮಹಾಭಾರತ ವಿಷಯವನ್ನು ಸೇರ್ಪಡೆ ಮಾಡಲು ಮುಂದಾದರೆ ಟೀಕಿಸುವುದು ಎಷ್ಟು ಸರಿ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯದರ್ಶಿ ಕೇಶವಹೆಗ್ಡೆ ಪ್ರಶ್ನಿಸಿದರು.

‘ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಸಮಿತಿ ಕೆಲವು ಆದರ್ಶಯುತ ವಿಚಾರ ಸೇರ್ಪಡೆ ಮಾಡಲು ಮುಂದಾದರೆ ಅವರನ್ನು ಟೀಕೆ ಮಾಡುವ ಉದ್ದೇಶದಿಂದಲೇ ನಮ್ಮ ಸಂಸ್ಕೃತಿ, ಧಾರ್ಮಿಕ ಪರಂಪರೆ ಮೇಲೆ ದೌರ್ಜನ್ಯ ನಡೆಸಿದವರ ಪರವಾಗಿ ಮಾತನಾಡುವುದು ಎಷ್ಟು ಸರಿ?’ ಎಂದು ಕಿಡಿಕಾರಿದರು.

‘ಹಿಂದೂ ಸಮಾಜ ಗಟ್ಟಿಯಾಗಿ ದನಿ ಎತ್ತಿರುವ ಕಾಲದಲ್ಲಿ ಈ ಮನಸ್ಥಿತಿಯ ಮಂದಿ ತಮ್ಮ ಚಿಂತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮನೋಭಾವ ಅಗತ್ಯ. ಮತ್ತೊಬ್ಬರನ್ನು ಒಲೈಕೆ ಮಾಡುವ ಸಲುವಾಗಿ ನಮ್ಮ ಧರ್ಮದ ದಾರ್ಶನಿಕರನ್ನು, ಮಹಾತ್ಮರನ್ನು, ಧಾರ್ಮಿಕ ಆಚರಣೆಯನ್ನು ಟೀಕಿಸುವ ಇಂತಹ ಮಂದಿ ಬೇರೆ ಧರ್ಮದ ವಿಚಾರವಾಗಿಯೂ ಮಾತನಾಡಿ ಅಲ್ಲಿನ ನೈಜತೆ ತೆರೆದಿಡುವ ಮನಸ್ಥಿತಿ ಬೆಳೆಸಿಕೊಳ್ಳಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT