ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಕರು ಇ–ವೇ ಬಿಲ್ ಅಳವಡಿಸಿಕೊಳ್ಳಿ: ತ ಡಾ. ಮುರುಳಿಕೃಷ್ಣ

Last Updated 24 ಅಕ್ಟೋಬರ್ 2021, 4:11 IST
ಅಕ್ಷರ ಗಾತ್ರ

ಶಿವಮೊಗ್ಗ: ವರ್ತಕರು ಸಕಾಲದಲ್ಲಿ ಇ-ವೇ ಬಿಲ್ ಅಳವಡಿಸಿಕೊಳ್ಳುವುದರಿಂದ ಡಂಡದಿಂದ ಪಾರಾಗಬಹುದು ಎಂದು ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ ಡಾ. ಮುರುಳಿಕೃಷ್ಣ ಹೇಳಿದರು.

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಇ-ವೇ ಬಿಲ್ ಮತ್ತು ಜಿ.ಎಸ್.ಟಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಇ–ಸುಗಮ್ 2010ರಲ್ಲೇ ಜಾರಿಗೊಳಿಸಿತ್ತು. ಇದೇ ಮಾದರಿಯಲ್ಲಿ ಇ–ವೇ ಬಿಲ್‌ಗಳನ್ನು ಅಳವಡಿಸಿಕೊಂಡು ಬರಲಾಗಿದೆ. ಜಿಎಸ್‌ಟಿ ಬಂದ ಮೇಲೆ ಸರ್ಕಾರಕ್ಕೆ ಕೊರೊನಾ ಸಂದರ್ಭದಲ್ಲೂ ಆದಾಯ ಹೆಚ್ಚಳವಾಗಿದೆ. ಇ–ವೇ ಬಿಲ್‌
ಗಳಲ್ಲಿ ನಮೂದಿಸಿದ ಸಾಮಗ್ರಿಗಳ ಆಧಾರದ ಮೇಲೆ ಸಂಪೂರ್ಣ ತೆರಿಗೆಯನ್ನು ಕೊಡಲೇಬೇಕಾಗುತ್ತದೆ. ಹಿಂದೆ ₹ 10 ಸಾವಿರ ಸಾಮಗ್ರಿ ವಿಲೇವಾರಿಯಾದಾಗ ಅದನ್ನು ₹ 1 ಸಾವಿರ ಎಂದು ತೋರಿಸುವ ಸಂಭವವಿತ್ತು. ಆದರೆ, ಈಗ ಅದು ಸಾಧ್ಯವಿಲ್ಲ ಎಂದು ಹೇಳಿದರು.

ಮೋಟಾರು ವಾಹನಗಳಲ್ಲಿ ₹ 50 ಸಾವಿರಕ್ಕಿಂತ ಮೇಲ್ಪಟ್ಟ ಯಾವುದೇ ಸಾಮಗ್ರಿಗಳು ಸಾಗಣೆ ಮಾಡಿದರೆ ತೆರಿಗೆ ಸಲ್ಲಿಸುವುದು ಅನಿವಾರ್ಯ. ಜಿಎಸ್‌ಟಿ ಬಂದ ಮೇಲೆ ದೇಶದಲ್ಲಿರುವ ಎಲ್ಲಾ ವಾಣಿಜ್ಯ ಇಲಾಖೆಯ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ. ಅತ್ಯಾಧುನಿಕ ತಾಂತ್ರಿಕತೆ ಅಳವಡಿಸಿಕೊಂಡಿರುವುದರಿಂದ ತೆರಿಗೆ ತಪ್ಪಿಸಿಕೊಳ್ಳುವುದು ಅಸಾಧ್ಯ. ತಾಂತ್ರಿಕತೆ ಅಳವಡಿಸಿಕೊಂಡಿಲ್ಲವಾದಲ್ಲಿ ಜಿಎಸ್‌ಟಿ ಅನುಷ್ಠಾನ ಅಸಾಧ್ಯ ಎಂದರು.

‘ಎಲ್ಲದಕ್ಕೂ ಒಂದು ಇತಿಮಿತಿ ಇರುವ ಹಾಗೆ ಜಿಎಸ್‌ಟಿ ಕೂಡ ತನ್ನದೇ ಆದ ಇತಿಮಿತಿ ಹೊಂದಿದೆ. ಬಿಲ್ ಹಾಕಿದರೆ ಯಾವುದೇ
ಆತಂಕ ಇರುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹ ಪ್ರತಿ ವರ್ಷ ಹೆಚ್ಚಳವಾಗುತ್ತಿದ್ದು, ಕೆಲವೊಂದು ನ್ಯೂನತೆಗಳು ಇವೆ. ಆದರೆ, ವ್ಯಾಪಾರಸ್ಥರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಲೋಪವನ್ನು ಸರಿಪಡಿಸಬಹುದು’ ಎಂದು ಸಲಹೆ ನೀಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ ಮಾತನಾಡಿ, ‘ವ್ಯಾಪಾರಿಗಳು ಸರ್ಕಾರದ ಎಲ್ಲಾ ತೆರಿಗೆ ನೀತಿಯ ಬದಲಾವಣೆಗೆ ಸಹಕಾರ ಕೊಡುತ್ತಾ ಬಂದಿದ್ದೇವೆ. ಆದರೂ ವ್ಯಾಪಾರಿಗಳನ್ನು ಕಳ್ಳರ ಹಾಗೆ ನೋಡುವುದನ್ನು ಅಧಿಕಾರಿಗಳು ಬಿಡಬೇಕು. ಕಂಪನಿಗಳು ₹ 50 ಕೋಟಿ ಮೀರಿದ ಬಿಲ್‌ಗಳನ್ನು ವಿತರಕರಿಗೆ ನೀಡುವಲ್ಲಿ ತಾಂತ್ರಿಕ ಲೋಪವಾದಾಗ ವಿನಾಕಾರಣ ದಂಡವನ್ನು ಭರಿಸುವಂತಾಗಿದೆ. ಅನೇಕ ಸಂದರ್ಭಗಳಲ್ಲಿ ಯಾರದೋ ತಪ್ಪಿಗೆ ಯಾರೋ ದಂಡ ತೆರುವಂತಾಗಿದೆ. ಕೆಲವು ಸಂದರ್ಭಗಳಲ್ಲಿ ಮೂವರ ಬಳಿ ಒಟ್ಟು ವ್ಯಾಪಾರದ ಮೊತ್ತ ₹ 50 ಸಾವಿರ ಇದ್ದಾಗ ಕೇವಲ ಒಂದೇ ಹೆಸರು ಸ್ವೀಕಾರವಾಗುವ ಅವಕಾಶ ತೆರಿಗೆ ಇಲಾಖೆಯ ಆ್ಯಪ್‌ನಲ್ಲಿ ಇದೆ. ಇದರಿಂದ ಅದಕ್ಕೂ ವಿತರಕರೇ ದಂಡ ತೆರುವ ಪರಿಸ್ಥಿತಿ ಇದೆ. ಈ ಲೋಪಗಳನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತೆರಿಗೆ ಸಲಹಾ ಸಮಿತಿ ಚೇರ್ಮನ್ ಮಧುಸೂದನ ಐತಾಳ್, ‘ಹಿಂದಿನ ತೆರಿಗೆ ವಿಧಾನಗಳನ್ನು ಹೋಲಿಸಿದಾಗ ಜಿಎಸ್‌ಟಿ ಕಠಿಣವಾಗಿದೆ. ದಂಡದ ಪ್ರಮಾಣ ಜಾಸ್ತಿ ಇದೆ ಎಂದು ಅನಿಸುತ್ತದೆ. ವ್ಯಾಪಾರಸ್ಥರು ಸಂದರ್ಭಾನುಸಾರ ಇದನ್ನು ಅರಿತುಕೊಂಡು ಹೊಸ ತೆರಿಗೆಯ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ಇಂತಹ ಕಾರ್ಯಾಗಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ವಾಣಿಜ್ಯ ತೆರಿಗೆಯ ಮಲೆನಾಡು ವಿಭಾಗದ ಜಂಟಿ ಆಯುಕ್ತ ಕೆ. ಮಂಜುನಾಥ್, ಜಿಲ್ಲಾ ವಾಣಿಜ್ಯ ಸಂಘದ ಎಸ್.ಎಸ್. ಉದಯಕುಮಾರ್, ಡಿ.ಎಸ್. ಅರುಣ್, ಡಿ.ಎಂ. ಶಂಕರಪ್ಪ ಬಿ. ಗೋಪಿನಾಥ್, ಬಿ.ಆರ್. ಸಂತೋಷ್, ಜಿ.ವಿಜಯಕುಮಾರ್, ಡಿ.ಪಿ. ಸಂದೀಪ್, ಪಾಂಡುರಂಗ, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT