ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ: ಬೆಳಕಿನತ್ತ ಮೊದಲ ಹೆಜ್ಜೆ

ಶರಾವತಿ ಸಂತ್ರಸ್ತರ 6 ದಶಕಗಳ ಕನಸು ಸಾಕಾರಕ್ಕೆ ಹೈಕೋರ್ಟ್ ನಿರ್ದೇಶನ
Last Updated 8 ಡಿಸೆಂಬರ್ 2022, 20:18 IST
ಅಕ್ಷರ ಗಾತ್ರ

ಶಿವಮೊಗ್ಗ: ತಾಲ್ಲೂಕಿನ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಹೈಕೋರ್ಟ್ ನಿರ್ದೇಶನದಂತೆ ಭೂಗತ ಕೇಬಲ್‌ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಮುಂದಾಗಿದೆ. ನಾಗರಿಕ ಸೌಕರ್ಯ ಪಡೆಯಬೇಕು ಎಂಬ ಶರಾವತಿ ಮುಳುಗಡೆ ಸಂತ್ರಸ್ತರ ಆರು ದಶಕಗಳ ಕನಸು ನನಸಾಗುವ ಕಾಲ ಈಗ
ಕೂಡಿಬಂದಿದೆ.

1960ರಲ್ಲಿ ಶರಾವತಿ ವಿದ್ಯುತ್‌ ಯೋಜನೆಗೆ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದ ವೇಳೆ ಸರ್ಕಾರವು
ಅಲ್ಲಿನ ಮುಳುಗಡೆ ಸಂತ್ರಸ್ತರನ್ನು ಕರೆತಂದು ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಿತ್ತು. ದಟ್ಟಕಾಡಿನ ನಡುವೆ 110ಕ್ಕೂ ಹೆಚ್ಚು ಕುಟುಂಬಗಳು ನೆಲೆಗೊಂಡಿದ್ದವು.

ಮೂಲಸೌಕರ್ಯದ ಬೇಡಿಕೆ: ‘ನಮ್ಮ ಅಜ್ಜ, ಅಪ್ಪಂದಿರನ್ನು ಇಲ್ಲಿಗೆ ಲಾರಿಗಳಲ್ಲಿ ತುಂಬಿಕೊಂಡು ಬಂದು ಬಿಡಲಾಗಿತ್ತು. ನಂತರ ನಮ್ಮ ಕಡೆಗೆ ಯಾರೂ (ಸರ್ಕಾರ) ತಿರುಗಿ ಕೂಡ ನೋಡಲಿಲ್ಲ. ರಸ್ತೆ, ವಿದ್ಯುತ್‌ ಸೌಕರ್ಯ ಕಲ್ಪಿಸಿ ಎಂಬ ಬೇಡಿಕೆಗೆ ಆಗ ಮನ್ನಣೆ ಸಿಕ್ಕಿರಲಿಲ್ಲ’ ಎಂದು ಸಾಗರ ತಾಲ್ಲೂಕಿನ ಸಾಲಗಳಲೆಯಿಂದ ಬಂದು ನೆಲೆಸಿರುವ ಸಂತ್ರಸ್ತ ಕುಟುಂಬದ ಗಣಪತಿ ನಾಯ್ಕ ತಿಳಿಸಿದರು.

‘ಮುಂದೆ 1984ರಲ್ಲಿ ನಮ್ಮ ಬೇಡಿಕೆಗೆ ಸ್ಪಂದನೆ ದೊರೆತು ಊರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೆಇಬಿಯವರು ಕಂಬ ಹಾಕಿದ್ದರು. ಆದರೆ, ಇದು ಅಭಯಾರಣ್ಯದ ವ್ಯಾಪ್ತಿಯಾದ ಕಾರಣ ಅರಣ್ಯ ಇಲಾಖೆ ಅನುಮತಿ ನೀಡಿರಲಿಲ್ಲ’ ಎಂದು
ನೆನಪಿಸಿಕೊಂಡರು.

ದೇಣಿಗೆ ಸಂಗ್ರಹಿಸಿ ಹೋರಾಟ: ‘ವಿದ್ಯುತ್‌, ರಸ್ತೆ, ಆಸ್ಪತ್ರೆ ಸೇರಿ ನಾಗರಿಕ ಸೌಲಭ್ಯ ಪಡೆಯಲು 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದೆವು. ನಮ್ಮ ಅಳಲಿಗೆ ಮನ್ನಣೆ ನೀಡಿದ ನ್ಯಾಯಾಲಯ, ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘನೆಯಾಗದಂತೆ ಸೌಕರ್ಯ ಕಲ್ಪಿಸಲು 2016ರ ಏಪ್ರಿಲ್‌ 13ರಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅದಕ್ಕೆ ಈಗ ಚಾಲನೆ ದೊರೆತಿದೆ’ ಎಂದು ವಕೀಲರೂ ಆದ ಶೆಟ್ಟಿಹಳ್ಳಿ ನಿವಾಸಿ ದೇವರಾಜ್ ‘ಪ್ರಜಾವಾಣಿ’ಗೆ
ತಿಳಿಸಿದರು.

‘ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಅಗತ್ಯವಾದ ಖರ್ಚು ನಿಭಾಯಿಸಲು ಊರಿನಲ್ಲಿ ದೇಣಿಗೆ ಸಂಗ್ರಹಿಸಿದ್ದೆವು’ ಎಂದು ಅವರು ಹೇಳಿದರು.

..

₹ 3.60 ಕೋಟಿ ವೆಚ್ಚದಲ್ಲಿ ಅಳವಡಿಕೆ

ವಿದ್ಯುತ್‌ ಸಂಪರ್ಕ ಕಲ್ಪಿಸಲು ₹ 3.60 ಕೋಟಿ ವೆಚ್ಚದಲ್ಲಿ 11.5 ಕಿ.ಮೀ ದೂರದ ಭೂಗತ ಕೇಬಲ್ ಅಳವಡಿಕೆಗೆ ಡಿ. 11ರಂದು ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಉಮಾಪತಿ ನೇತೃತ್ವದಲ್ಲಿ ಊರಿನವರು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT