ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಚಿವ ಮಧು ಬಂಗಾರಪ್ಪ

ನೆಹರೂ ಕ್ರೀಡಾಂಗಣದ ಅವ್ಯವಸ್ಥೆ: ಸಾರ್ವಜನಿಕರಿಂದ ದೂರು, ಆಕ್ರೋಶ
Published : 14 ಆಗಸ್ಟ್ 2024, 15:20 IST
Last Updated : 14 ಆಗಸ್ಟ್ 2024, 15:20 IST
ಫಾಲೋ ಮಾಡಿ
Comments

ಶಿವಮೊಗ್ಗ: ಚುಂಚಾದ್ರಿ ಕಪ್ ವಾಲಿಬಾಲ್ ಟೂರ್ನಿಯ ಸಮಾರೋಪದಲ್ಲಿ ಪಾಲ್ಗೊಳ್ಳಲು ಬುಧವಾರ ಸಂಜೆ ಇಲ್ಲಿನ ನೆಹರೂ ಕ್ರೀಡಾಂಗಣಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕ್ರೀಡಾಂಗಣದಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದರು.

ಮಹಾನಗರ ಪಾಲಿಕೆ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರಿಂದ ದೂರು: ಸಚಿವರು ಬರುವ ಮಾಹಿತಿ ತಿಳಿದು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಕ್ರೀಡಾಂಗಣದ ನಿರ್ವಹಣೆಯಲ್ಲಿನ ಅವ್ಯವಸ್ಥೆಯ ದೂರು ನೀಡಿದರು.

ಆಗ ಸ್ಥಳಕ್ಕೆ ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕರೆಸಿಕೊಂಡ ಮಧು ಬಂಗಾರಪ್ಪ, ಅವರ ವಿರುದ್ಧ ಹರಿಹಾಯ್ದರು.

ಕ್ರೀಡಾಪಟುಗಳಿಗೆ ಯಾವುದೇ ತೊಂದರೆ ಆಗದಂತೆ ತಕ್ಷಣ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ ವಹಿಸುವಂತೆ ತಾಕೀತು ಮಾಡಿದರು.

ಕಳಪೆ ಕಾಮಗಾರಿ, ಅಸಮಾಧಾನ: ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಕಟ್ಟಡ, ನೀರಿನ ಟ್ಯಾಂಕ್, ವಾಕಿಂಗ್ ಪಾಥ್ ಸೇರಿದಂತೆ ಎಲ್ಲ  ಕಾಮಗಾರಿಯೂ ಕಳಪೆಯಾಗಿವೆ. ನೀರಿನ ಟ್ಯಾಂಕ್ ಸೋರುತ್ತಿದೆ ಎಂದು ಸಾರ್ವಜನಿಕರು ದೂರಿದರು. ಇದರಿಂದ ಕುಪಿತಗೊಂಡ ಮಧು ಬಂಗಾರಪ್ಪ, ಆಗಸ್ಟ್ 16ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಹಾಗೂ ಕಳಪೆ ಕಾಮಗಾರಿಯ ಪಟ್ಟಿಯೊಂದಿಗೆ ಬರುವಂತೆ ಅಧಿಕಾರಿಗಳಿಗೆ ಹೇಳಿದರು.

ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕೇಳಿದರೆ ಕ್ರೀಡಾ ಇಲಾಖೆ ಅಧಿಕಾರಿಗಳು ಉಡಾಫೆ ಉತ್ತರ ಕೊಡುತ್ತಾರೆ. ನೀವು (ಸಚಿವರು) ಇಲ್ಲಿನ ಬರುತ್ತಿರುವ ಕಾರಣ ಈಗ ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದು ಕ್ರೀಡಾಪಟುಗಳು ಸಚಿವರ ಗಮನ ಸೆಳೆದರು. ಆಗ ಕ್ರೀಡಾ ಇಲಾಖೆ ಅಧಿಕಾರಿಯನ್ನು ಮಧು ಬಂಗಾರಪ್ಪ ತರಾಟೆಗೆ ತೆಗೆದುಕೊಂಡರು. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಫುಟ್ಬಾಲ್ ಆಟಗಾರರಿಗೆ ಅನುಕೂಲವಾಗುವಂತೆ ಗ್ರೀನ್ ಲಾನ್ ಅಳವಡಿಸುವಂತೆ ಸೂಚಿಸಿದರು.

ಟೂರ್ನಮೆಂಟ್‌ಗೆ ತೆರಳಲು ಅಗತ್ಯವಿರುವ ಜರ್ಕಿನ್, ಶೂ ಹಾಗೂ ಶಾರ್ಟ್ಸ್ ಒದಗಿಸುವಂತೆ ಫುಟ್‌ಬಾಲ್‌ ಆಟಗಾರರ ಮನವಿಗೆ ಸ್ಪಂದಿಸಿದ ಸಚಿವರು ವೈಯಕ್ತಿಕ ಹಣದಿಂದ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT