ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಜ್ಯೋತಿ ಯೋಜನೆ ಅನುಷ್ಠಾನದ ಲೋಪ ಕುರಿತು ತನಿಖೆಗೆ ಆದೇಶ: ಸುನೀಲ್ ಕುಮಾರ್

Last Updated 1 ಜನವರಿ 2022, 11:38 IST
ಅಕ್ಷರ ಗಾತ್ರ

ಶಿವಮೊಗ್ಗ: ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಲೋಪಗಳಾಗಿವೆ. ತಕ್ಷಣ ತಪ್ಪಿತಸ್ಥ ಎಂಜಿನಿಯರ್‌ಗಳನ್ನು ತಕ್ಷಣ ಅಮಾನತುಗೊಳಿಸಲಾಗುವುದು. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಗ್ರಾಮ ಜ್ಯೋತಿ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ನಿರಂತರ ಜ್ಯೋತಿ ಯೋಜನೆಯ ಫೀಡರ್‌ಗಳ ಅಳವಡಿಕೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ₹ 224 ಕೋಟಿ ಮೊತ್ತದ ಈ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ. ವಿದ್ಯುತ್ ಕಂಬಗಳನ್ನು ನಿಗದಿತ ಆಳದಲ್ಲಿ ಅಳವಡಿಸಿಲ್ಲ. ಸಮರ್ಪಕವಾಗಿ ಭೂಮಿ ಅಗೆದಿಲ್ಲ. ಕಾರ್ಮಿಕ ಕಾಯ್ದೆಯ ನಿಯಮಗಳನ್ನು ಪಾಲನೆ ಮಾಡಿಲ್ಲ. ವಿವಿಧ ಹಂತಗಳಲ್ಲಿ ಇಂತಹ ಹಲವು ದೋಷಗಳು ಕಂಡುಬಂದಿವೆ. ಹಾಗಾಗಿ, ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಲು ಸೂಚಿಸಲಾಗಿದೆ. ಯೋಜನೆ ಅನುಷ್ಠಾನ ಕುರಿತು ಎಸಿಬಿ ಅಥವಾ ಇಲಾಖೆಯಿಂದ ಸಮಗ್ರ ತನಿಖೆ ನಡೆಸುವ ಕುರಿತು ಪ್ರಧಾನ ಕಾರ್ಯದರ್ಶಿ ಜತೆ ಚರ್ಚಿಸಲಾಗುವುದು ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಗ್ರಾಮ ಜ್ಯೋತಿ ಯೋಜನೆ ಕೇಂದ್ರ ಸರ್ಕಾರದ ಯೋಜನೆ. ಶೇ 60ರಷ್ಟು ಕೇಂದ್ರ ಹಾಗೂ ಶೇ 40ರಷ್ಟು ಅನುದಾನವನ್ನು ಮೆಸ್ಕಾಂ ಭರಿಸುತ್ತದೆ. ಗ್ರಾಮೀಣ ಪ್ರದೇಶದ 11ಕೆ.ವಿ. ಮಾರ್ಗಗಳಲ್ಲಿ ಕೃಷಿ, ಕೃಷಿಯೇತರ ಸ್ಥಾವರಗಳನ್ನು ಬೇರ್ಪಡಿಸುವುದು, ಗ್ರಾಮೀಣ ಮನೆಗಳಿಗೆ ವಿದ್ಯುತ್‌ ಸಂಪರ್ಕ, ಮಾಪನ ಅಳವಡಿಕೆ ಕಾರ್ಯವನ್ನು ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. 145 ಗ್ರಾಮೀಣ ಫೀಡರ್‌ಗಳ ಕೃಷಿಯೇತರ ಹೊರೆಯನ್ನು ಪ್ರತ್ಯೇಕಿಸಲು 68 ಹೊಸ ಫೀಡರ್‌ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 66 ಫೀಡರ್‌ಗಳನ್ನು ಚಾಲನೆಗೊಳಿಸಲಾಗಿದೆ. 39 ಫೀಡರ್‌ಗಳ ಕಾಮಗಾರಿ ಬಿಲ್ ಪಾವತಿ ಮಾಡಲಾಗಿದೆ. ಉಳಿದ ಬಿಲ್ಲುಗಳ ಪಾವತಿ ತಡೆ ಹಿಡಿಯಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಕಾಮಗಾರಿಗೂ, ಗುತ್ತಿಗೆದಾರನಿಗೆ ಬಿಡುಗಡೆಯಾಗಿರುವ ಹಣಕ್ಕೂ ₹ 12.21 ಕೋಟಿ ವ್ಯತ್ಯಾಸವಿದೆ. ಇಷ್ಟು ವ್ಯತ್ಯಾಸವಿದ್ದರೂ ಕಾಮಗಾರಿ ಪೂರ್ಣಗೊಳಿಸಿರುವ ಪ್ರಮಾಣ ಪತ್ರ ನೀಡಲಾಗಿದೆ. 676 ಹಳ್ಳಿಗಳಲ್ಲಿ ಕಾಮಗಾರಿ ನಡೆಸಲಾಗಿದೆ. 90 ಕಡೆ ಪ್ರಧಾನಿ ನರೇಂದ್ರ ಮೋದಿ ಅವರ ಬೋರ್ಡ್ ಹಾಕಲಾಗಿದೆ. ಉಳಿದ ಹಳ್ಳಿಗಳಲ್ಲಿ ಪ್ರಧಾನಿ ಮೋದಿ ಅವರ ಭಾವ‌ಚಿತ್ರ ಹಾಕಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಪ, ವಿಧಾನ ಪರಿಷತ್ ಸದಸ್ಯರಾದ ಅಯನೂರು ಮಂಜುನಾಥ್, ರುದ್ರೇಗೌಡ, ನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೆಸ್ಕಾಂ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT