ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಗೆ ನೀಡಿರುವ ಗನ್‌ಮ್ಯಾನ್ ವ್ಯವಸ್ಥೆ ತೆಗೆದು ಹಾಕಿ: ಆಯನೂರು ಮಂಜುನಾಥ್‌

Last Updated 10 ಏಪ್ರಿಲ್ 2022, 6:35 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದ ಎಲ್ಲ ಶಾಸಕರಿಗೆ ನೀಡಿರುವ ಗನ್‌ಮ್ಯಾನ್ ವ್ಯವಸ್ಥೆ ತೆಗೆದು ಹಾಕಬೇಕು ಎಂದು ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಸರ್ಕಾರವನ್ನು ಒತ್ತಾಯಿಸಿದರು.

ಮೀಸಲು ಪೊಲೀಸರನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ಶೋಭೆ ತರುವುದಿಲ್ಲ. ಜನಪ್ರತಿನಿಧಿಯಾದವರು ಮುಕ್ತವಾಗಿ ಜನರ ಬಳಿ ಹೋಗಬೇಕು. ಯಾರಿಗೆ ಜೀವಭಯವಿದೆ ಅಂಥವರಿಗೆ ಭದ್ರತೆ ನೀಡಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಹಿಂದೆ ಶಾಸಕರಿಗೆ ಗನ್‌ಮ್ಯಾನ್‌ ಇರಲಿಲ್ಲ. ಈಗ ಎಲ್ಲ ಶಾಸಕರಿಗೂ ನಿಯೋಜನೆ ಮಾಡಲಾಗಿದೆ. ಅನವಶ್ಯಕವಾಗಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ಔರಾದ್ಕರ್‌ ವರದಿ ಮರು ಪರಿಶೀಲನೆಗೊಳಪಡಿಸಬೇಕು. ಇಲ್ಲವಾದರೆ ಕಾನೂನು ಹೋರಾಟಕ್ಕೂ ನಾನು ಸಿದ್ಧ’ ಎಂದರು.

‘ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಇಲಾಖೆಯಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸಿವಿಲ್ ಪೊಲೀಸರಂತೆ ರಿಸರ್ವ್ ಪೊಲೀಸರು ಪರೀಕ್ಷೆ ಬರೆದು, ಅವರಂತೆ ತರಬೇತಿ ಪಡೆದು, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಬರುತ್ತಾರೆ. ಅವರನ್ನು ಅಧಿಕಾರಿಗಳ ಮನೆಯಲ್ಲಿ ಕೆಲಸಕ್ಕೆ ನೇಮಿಸಲಾಗುತ್ತದೆ. ಶಾಸಕರಿಗೆ ಹಾಗೂ ವಿಐಪಿಗಳಿಗೆ ಗನ್‌ಮ್ಯಾನ್‌ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ದೂರಿದರು.

ಪೊಲೀಸ್ ಇಲಾಖೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಸರ್ಕಾರ ನೇಮಿಸಿದ ಔರಾದ್ಕರ್ ವರದಿಯಲ್ಲಿ ಸಾಕಷ್ಟು ಲೋಪಗಳಿವೆ. ಪೊಲೀಸ್‌ ಇಲಾಖೆಗೆ ಹೊಸದಾಗಿ ನೇಮಕವಾದವರಿಗೂ, ಇಲಾಖೆಯಲ್ಲಿ ಈಗಾಗಲೇ ಏಳೆಂಟು ವರ್ಷ ಸೇವೆ ಸಲ್ಲಿಸಿದ ಸಿಬ್ದಂದಿಗೂ ಒಂದೇ ವೇತನವಿದೆ. ವೇತನ ತಾರತಮ್ಯ ತಳಮಟ್ಟದ ಸಿಬ್ಬಂದಿಯಲ್ಲಿ ಹಾಗೆಯೇ ಮುಂದುವರಿದಿದೆ ಎಂದು ಆರೋಪಿಸಿದರು.

‘ಸಮಿತಿ ಪಾರದರ್ಶಕವಾಗಿ ಸಿಬ್ಬಂದಿ ಸಮಸ್ಯೆಗಳನ್ನು ಈವರೆಗೂ ನೀಗಿಸಿಲ್ಲ. ಇದು ಕರ್ತವ್ಯ ನಿರ್ವಹಿಸುವ ಪೊಲೀಸರಲ್ಲಿ ನೈತಿಕ ಸ್ಥೈರ್ಯ ಕುಂದುವಂತೆ ಮಾಡುತ್ತದೆ. ಪೊಲೀಸ್ ಇಲಾಖೆ ಬ್ರಿಟಿಷ್ ಮಾದರಿಯ ಕಾನೂನಿನಲ್ಲಿ ನರಳುತ್ತಿದೆ. ಮೀಸಲು ಪೊಲೀಸರಿಗೆ ನ್ಯಾಯಕೊಡಿಸಲು ವರದಿ ಮರು ಪರಿಶೀಲಿಸಲು ಒತ್ತಾಯ ಮಾಡುತ್ತಿದ್ದೇನೆ. ಪೊಲೀಸರನ್ನು ಪ್ರಚೋದಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT