ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ, ಮೊಸರಿಗೆ ಜಿಎಸ್‌ಟಿ: ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಸಮರ್ಥನೆ

ವಿರೋಧಿಸುವವರು ಶ್ರೀಲಂಕಾ, ಪಾಕಿಸ್ತಾನ ಸ್ಥಿತಿ ಗಮನಿಸಲಿ
Last Updated 18 ಜುಲೈ 2022, 10:12 IST
ಅಕ್ಷರ ಗಾತ್ರ

ಶಿವಮೊಗ್ಗ: ಅಕ್ಕಿ, ಮೊಸರಿಗೆ ಜಿಎಸ್‌ಟಿ ವಿರೋಧಿಸುವವರು ಅಕ್ಕಪಕ್ಕದ ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್‌ನಂತಹ ದೇಶಗಳ ಆರ್ಥಿಕ ಸ್ಥಿತಿಗತಿ ಗಮನಿಸಲಿ. ಆಗ ಸರ್ಕಾರದ ನಿಲುವು ಅರ್ಥವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ಜಿಎಸ್‌ಟಿ ಸಂಗ್ರಹಗೊಂಡರೆ ಮಾತ್ರ ಸರ್ಕಾರಕ್ಕೆ ಆದಾಯ. ಸರ್ಕಾರ ಆರ್ಥಿಕವಾಗಿ ಸದೃಢವಾಗಿದ್ದರೆ ಅದೇ ಹಣ ಮತ್ತೆ ವಾಪಸ್ ಜನರ ಅವಶ್ಯಕತೆಗಳಿಗೆ ಬಳಸುತ್ತದೆ ಎಂದರು.

ಜಿಎಸ್‌ಟಿ ಕೌನ್ಸಿಲ್ ಪ್ರತಿ ತಿಂಗಳು ಸಭೆ ಸೇರಿ ಯಾವುದಕ್ಕೆ ಕಡಿಮೆ, ಯಾವುದು ಜಾಸ್ತಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತದೆ. ಇನ್ನೊಂದು ಆರು ತಿಂಗಳಲ್ಲಿ ಸಾಮಾನ್ಯ ಜನರಿಗೆ ನೇರವಾಗಿ ತೊಂದರೆ ಆಗುತ್ತಿರುವ ಅಗತ್ಯ ವಸ್ತುಗಳು ಬೆಲೆ ಕಡಿಮೆ ಆಗಲಿದೆ ಎಂದು ಭವಿಷ್ಯ ನುಡಿದರು.

‘ಆರು ತಿಂಗಳು ಕಳೆದರೆ ವಿಧಾನಸಭೆಗೆ ಚುನಾವಣೆ ಇರಲಿದೆ. ಹೀಗಾಗಿ ಬೆಲೆ ಕಡಿಮೆ ಆಗಲಿದೆಯೇ‘ ಎಂಬ ಪ್ರಶ್ನೆಗೆ ‘ಪ್ರತೀ ಆರು ತಿಂಗಳಿಗೊಮ್ಮೆ ದೇಶದಲ್ಲಿ ಯಾವುದಾದರೂ ಚುನಾವಣೆ ನಡೆಯುತ್ತಿರುತ್ತದೆ. ಹೀಗಾಗಿ ಬೆಲೆ ಏರಿಳಿತ ಅದಕ್ಕೆ ಸಂಬಂಧಿಸಿಲ್ಲ‘ ಎಂದು ಅರುಣ್ ಪ್ರತಿಕ್ರಿಯಿಸಿದರು.

’ಹಾಲು, ಮೊಸರಿನ ಮೇಲೆ ಜಿಎಸ್‌ಟಿ ದರ ಹೆಚ್ಚಾದರೆ ಅದರಿಂದ ಬರುವ ಆದಾಯ ಉತ್ಪಾದಕರಿಗೆ (ರೈತರಿಗೆ) ಸಹಾಯಧನ ನೀಡಲು ಬಳಕೆಯಾಗುತ್ತದೆ. ರೈತರಿಗೆ ಅನುಕೂಲಗಳನ್ನು ಮಾಡಿಕೊಡಬೇಕು ಎಂದು ನೀವೇ (ಮಾಧ್ಯಮದವರು) ಹೇಳುತ್ತೀರಿ. ಕಿಸಾನ್ ಸಮ್ಮಾನ್, ಮನೆ ಮನೆಗೆ ಗಂಗೆ ಯೋಜನೆಗಳನ್ನು ಕೊಟ್ಟಾಗ ನಾವು ಜಿಎಸ್‌ಟಿಯಲ್ಲಿ ಯಾವುದೇ ದರ ಹೆಚ್ಚಳ ಮಾಡಿರಲಿಲ್ಲ. ಜಿಎಸ್‌ಟಿ ಆದಾಯದಿಂದಲೇ ಕೋವಿಡ್‌ ಸಾಂಕ್ರಾಮಿಕದ ನಂತರ ದೇಶದ ಆರ್ಥಿಕಸ್ಥಿತಿ ಚೇತರಿಸಿಕೊಂಡಿದೆ‘ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT