ಭಾನುವಾರ, ನವೆಂಬರ್ 28, 2021
19 °C

ಉತ್ಸಾಹಿ ಯುವಕರ ತಂಡದಿಂದ ಸಸಿ ನೆಡುವ ಕಾರ್ಯಕ್ರಮ: ಪರಿಸರ ಸಂರಕ್ಷಣೆಯತ್ತ ಚಿತ್ತ

ರವಿ ಆರ್. ತಿಮ್ಮಾಪುರ Updated:

ಅಕ್ಷರ ಗಾತ್ರ : | |

Prajavani

ಆನವಟ್ಟಿ: ಹಳ್ಳಿಗಾಡಿನಿಂದ ಬೆಂಗಳೂರಿಗೆ ಹೋಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಉತ್ಸಾಹಿ ಯುವಕರು ಕೊರೊನಾ ಕಲಿಸಿದ ಪಾಠದಿಂದ ಪರಿಸರ ಸಂರಕ್ಷಣೆಯತ್ತ ಚಿತ್ತ ಹರಿಸಿದ್ದಾರೆ.

ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವ ಲಕ್ಕವಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಎಚ್.ಲಿಂಗರಾಜ್, ಎಲ್.ಬಿ. ಅಶೋಕ, ಪ್ರಭುಕುಮಾರ, ಎಲ್.ಬಿ.ರಮೇಶ್, ಜೀತೇಂದ್ರ ಗೌಡ, ಮಹಾಬಲೇಶ್ವರ, ಎಚ್.ವಿ.ಯುವರಾಜ್, ಮಲ್ಲಿಕಾರ್ಜುನ್ ಸ್ವಾಮಿ, ಬಂಗಾರ ಸ್ವಾಮಿ, ಎಂ.ಎನ್. ದೇವರಾಜ ಅವರ ತಂಡ ಪರಿಸರ ಸಂರಕ್ಷಣೆಯತ್ತ ಮುಖ ಮಾಡಿದ್ದಾರೆ.

ಪ್ರತಿ ವರ್ಷ 150ರಿಂದ 200 ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಗಿಡಗಳನ್ನು ಸಂರಕ್ಷಣೆ ಮಾಡಿ, ಬೆಳೆಸುವವರೆಗೂ ಜವಾಬ್ದಾರಿ ಜತೆ ಅದರ ಸಂಪೂರ್ಣ ಖರ್ಚು ನೋಡಿ ಕೊಳ್ಳುತ್ತಿದ್ದಾರೆ.

ಹಳ್ಳಿಗಳಲ್ಲಿ ಹೇಗೆ ಗಿಡ ನೆಟ್ಟು ಬೆಳೆಸುವುದು ಎಂಬ ಅಲೋಚನೆ ಮೂಡಿದಾಗ ಅವರಿಗೆ ಮೊದಲು ಕಂಡಿದ್ದೇ ಶಾಲೆಗಳು.

ಶಾಲಾ ಮಕ್ಕಳ ಮೂಲಕ ಗಿಡ ನೆಟ್ಟು, ಬೆಳೆಸುವ ಮಾರ್ಗ ಕಂಡುಕೊಂಡ ಈ ತಂಡ ಲಕ್ಕವಳ್ಳಿ ಶಾಲೆಯ ಮುಖ್ಯಶಿಕ್ಷಕ ನಾಗರಾಜ ಕಾತುವಳ್ಳಿ ಅವರ ನೆರವು ಕೋರಿತು. ಅವರು ಇದಕ್ಕೆ ಸಹಕಾರ ನೀಡಿದರು.

ಮುಖ್ಯಶಿಕ್ಷಕ ನಾಗರಾಜ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರನ್ನು ಭೇಟಿ ಮಾಡಿ ಅವರಿಗೂ ವಿಚಾರ ತಿಳಿಸಿದರು. ಇವರ ಈ ಪರಿಸರ ಕಾಳಜಿಗೆ ಸ್ಥಳೀಯ ಜನಪ್ರತಿನಿಧಿಗಳು ಜೊತೆಯಾದರು. ಶಾಲಾ ಮಕ್ಕಳೊಂದಿಗೆ ಈ ವರ್ಷ 150 ಗಿಡಗಳನ್ನು
ನೆಟ್ಟಿದ್ದಾರೆ.

ಗಿಡಗಳನ್ನು ಸಂರಕ್ಷಿಸುವ ಕಾರಣ ತಂತಿ ಜಾಲರಿ ಅಥವಾ ಬೇಲಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.

‘ನಾವು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದೇವೆ ಹೊರತು ಊರು ಬಿಟ್ಟು ಅಲ್ಲ. ಹಾಗಾಗಿ ನಾವು ಹುಟ್ಟಿ ಬೆಳೆದ ಊರಿಗೆ ಏನಾದರೂ ಸೇವೆ ಮಾಡಬೇಕು ಎಂಬ ಕಲ್ಪನೆಯಲ್ಲಿ ಪರಿಸರ ಸಂರಕ್ಷಣೆಯ ಕೆಲಸ ಮಾಡುತ್ತಿದ್ದೇವೆ. ಪ್ರತಿ ವರ್ಷ 200 ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಣೆ ಮಾಡಿ, ಬೆಳೆಸುವ ಗುರಿ ಹಾಕಿಕೊಂಡಿದ್ದೇವೆ. ನಮ್ಮ ಯೋಜನೆ ಯಶಸ್ಸಿಗೆ ಕಾರಣರಾದ ಲಕ್ಕವಳ್ಳಿ ಗ್ರಾಮದ ಗ್ರಾಮಸ್ಥರು, ಶಾಲಾ ಮಕ್ಕಳು, ಶಿಕ್ಷಕರ ಮರೆಯಲಾಗದ್ದು’ ಎನ್ನುತ್ತಾರೆ ತಂಡದ ಎಚ್.ಲಿಂಗರಾಜ್, ಎಲ್.ಬಿ. ಅಶೋಕ, ಪ್ರಭುಕುಮಾರ.

‘ನಗರ ಬೆಳೆದಂತೆ ಅರಣ್ಯ ನಾಶವಾಗುತ್ತಿದೆ. ಕೊನೆ ಪಕ್ಷ ರಸ್ತೆ ಪಕ್ಕದಲ್ಲಿಯಾದರೂ ಗಿಡಗಳು ಬೆಳೆಯಲಿ ಎಂಬ ಆಶಾಭಾವನೆಯೊಂದಿಗೆ ಇಂತಹ ಕೆಲಸಕ್ಕೆ ಮುಂದಾಗಿದ್ದೇವೆ’ ಎಂದರು ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು