ಬುಧವಾರ, ಜುಲೈ 6, 2022
22 °C

ಮಿಶ್ರ ಬೆಳೆಯಲ್ಲಿ ಲಾಭ ಪಡೆದ ಅಣ್ಣ-ತಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂಸಿ: ಆಸಕ್ತಿ, ಶ್ರಮ, ಶ್ರದ್ಧೆ ಇದ್ದರೆ ಕೃಷಿಯಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ರಾಮ-ಲಕ್ಷ್ಮಣರಂತಿರುವ ವೆಂಕಟರಮಣ ಭಟ್ ಹಾಗೂ ತಮ್ಮ ಶಿವರಾಮ್ ಭಟ್‌ ಉತ್ತಮ ನಿದರ್ಶನ.

ಸಮೀಪದ ಕೋಣೆಹೊಸೂರಿನ ಅನಂತಭಟ್, ತಾಯಿ ಸತ್ಯಭಾಮ ದಂಪತಿಯ ಪುತ್ರರಾಗಿರುವ ಇವರು ಬ್ರಾಹ್ಮಣ ಉಪಾಸನೆ ಜೊತೆಗೆ ಕೃಷಿ ಕ್ಷೇತ್ರವನ್ನೂ ಆಯ್ದುಕೊಂಡಿದ್ದಾರೆ.

ವೆಂಕಟರಮಣ ಭಟ್ ಅವರು ಕುಂಸಿ ಸಮೀಪದ ಚೋಡನಾಳ, ಬ್ಯಾಡನಾಳ, ಪತ್ರೆಹೊಂಡದ ದೇವಸ್ಥಾನಗಳಲ್ಲಿ ಅರ್ಚಕ ವೃತ್ತಿಯ ಜೊತೆಗೆ ಕೃಷಿಯಲ್ಲಿಯೂ ಕಾರ್ಯ ಪ್ರವೃತ್ತರಾದರೆ, ತಮ್ಮ ಶಿವರಾಮ್ ಶುಭ ಸಮಾರಂಭಗಳಲ್ಲಿ ಅಡುಗೆ ಗುತ್ತಿಗೆ ಕೆಲಸ ನಿರ್ವಹಿಸುತ್ತಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇಬ್ಬರೂ ತಮ್ಮ 20ನೇ ವಯಸ್ಸಿಗೇ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ತಮ್ಮ ತಂದೆಯವರಿಂದ ಬಂದಿರುವ ಆರೂವರೆ ಎಕರೆ ಜಮೀನಿನಲ್ಲಿ ಮೊದಲು ಹತ್ತಿ, ತೊಗರಿ, ಮೆಣಸು, ಶುಂಠಿ ಬೆಳೆದು ಲಾಭ ಪಡೆದಿದ್ದಾರೆ. ನಂತರದ ದಿನಗಳಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ ತೋಟವನ್ನು ಕಟ್ಟಿದ್ದಾರೆ. ಅದರಲ್ಲಿಯೇ ಉಪಬೆಳೆಗಳಾಗಿ ಕಾಳುಮೆಣಸು, ವೀಳ್ಯದೆಲೆ ಬಳ್ಳಿಗಳನ್ನು ಬೆಳೆದರು. ನಂತರ ವೆನಿಲಾ ಬೆಳೆದು ಉತ್ತಮ ಲಾಭ ಪಡೆದರು. ಪ್ರಸ್ತುತ ಅಡಿಕೆ ಮರಗಳ ನಡುವೆ ಕಾಫಿ, ಏಲಕ್ಕಿ, ಲವಂಗ, ಜಾಯಿಕಾಯಿ ಬೆಳೆದಿದ್ದು ಲಾಭದ ನಿರೀಕ್ಷೆಯಲ್ಲಿದ್ದಾರೆ.

ಉಳಿದ ಒಂದೂವರೆ ಎಕರೆಯಲ್ಲಿ ತೆಂಗು ಬೆಳೆದಿದ್ದಾರೆ. ಅದರ ನಡುವೆಯೇ ಸಪೋಟ, ಕಿತ್ತಳೆ, ಮೋಸಂಬಿ, ಹಲಸು, ಪೇರಲ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಇನ್ನೂ ಒಂದು ಎಕರೆ ಜಮೀನಿನಲ್ಲಿ ಮಿಡಿಮಾವು ಜೊತೆಗೆ ಬಾಳೆಯನ್ನು ಬೆಳೆದು ಲಾಭ ಕಾಣುತ್ತಿರುವ ಇವರು ಗೇರುಗಿಡ ಹಾಗೂ ಮಾವು ಬೆಳೆಯುತ್ತಿರುವ ಜಾಗದಲ್ಲಿಯೇ ಹಸುಗಳಿಗೆ ಮೇವನ್ನು ಬೆಳೆಯುತ್ತಿದ್ದಾರೆ.

ಮನೆ ಹಾಗೂ ಜಮೀನು ಒಂದೇ ಕಡೆ ಇರುವುದರಿಂದ ಬೆಳೆಗಳಿಗೆ ಗೊಬ್ಬರದ ಕೊರತೆಯನ್ನು ನೀಗಿಸಿಕೊಳ್ಳಲು ಹಸುಗಳನ್ನು ಸಾಕಿದ್ದಾರೆ. ಹಾಲನ್ನು ಮಾರಟ ಮಾಡುತ್ತಾರೆ. ಅಡಿಕೆಯಿಂದಲೇ ವರ್ಷಕ್ಕೆ ₹ 10 ಲಕ್ಷ ಆದಾಯ ಗಳಿಸುವ ಇವರು ಎಲ್ಲಾ ಉಪಬೆಳೆಗಳಿಂದ ವರ್ಷಕ್ಕೆ ಸರಾಸರಿ ₹ 3 ಲಕ್ಷದಿಂದ ₹ 4 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಬೆಳೆಗಳಿಗೆ ನೀರಿನ ಕೊರತೆ ಉಂಟಾಗದಂತೆ ಮುಂಜಾಗೃತಾ ಕ್ರಮವಾಗಿ ಮೂರು ಕೊಳವೆಬಾವಿಗಳನ್ನು ಕೊರೆಯಿಸಿದ್ದಾರೆ. ಇವರ ಪರಿಶ್ರಮಕ್ಕೆ ಕುಟುಂಬವೂ ಬೆಂಬಲಕ್ಕಿದೆ.

‘ಕೃಷಿ ನಮಗೆ ಆಸಕ್ತಿಯ ಕ್ಷೇತ್ರ. ಇದರಲ್ಲಿಯೇ ಏನನ್ನಾದರೂ ಸಾಧಿಸಬೇಕು ಎಂದುಕೊಂಡು ಅಡಿಕೆ ಜೊತೆಗೆ ಉಪಬೆಳೆಗಳನ್ನು ಬೆಳೆದಿದ್ದರಿಂದ ಉತ್ತಮ ಲಾಭ ಪಡೆಯಲು ಸಾಧ್ಯವಾಯಿತು. ರೈತರು ಏಕ ಬೆಳೆಗೆ ಸೀಮಿತವಾಗಿರದೆ ಮಿಶ್ರ ಬೆಳೆ ಪದ್ಧತಿ ಅನುಸರಿಸಿದರೆ ಮಾತ್ರ ಲಾಭ ಕಾಣಲು ಸಾಧ್ಯ’ ಎನ್ನುತ್ತಾರೆ ವೆಂಕಟರಮಣ ಭಟ್ ಹಾಗೂ ಶಿವರಾಮ್ ಭಟ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು