ಸೋಮವಾರ, ಆಗಸ್ಟ್ 8, 2022
22 °C
ಸರ್ಕಾರಕ್ಕೆ ಹತ್ತು ಪ್ರಶ್ನೆ ಕೇಳುವ ಚಳವಳಿ

ಹೆಗ್ಗೋಡಿನಲ್ಲಿ ಇಂದು ಗ್ರಾಮೋದ್ಯೋಗ ಉಳಿಸಿ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ತಾಲ್ಲೂಕಿನ ಹೆಗ್ಗೋಡಿನಲ್ಲಿ ಚರಕ, ಗ್ರಾಮ ಸೇವಾ ಸಂಘ, ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟದ ವತಿಯಿಂದ ಶುಕ್ರವಾರ ಗ್ರಾಮೋದ್ಯೋಗ ಉಳಿಸಿ ಜನಾಂದೋಲನ ನಡೆಯಲಿದೆ.

ಈ ಮೂಲಕ ಸರ್ಕಾರಕ್ಕೆ ಹತ್ತು ಪ್ರಶ್ನೆಗಳನ್ನು ಕೇಳಲು ಗ್ರಾಮೋದ್ಯೋಗದಲ್ಲಿ ತೊಡಗಿಕೊಂಡಿರುವವರು ಸಜ್ಜಾಗಿದ್ದಾರೆ. ಸೋಮವಾರದಿಂದ ಆರಂಭವಾಗಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಈ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ದೊರಕಲಿದೆ ಎಂಬ ನಿರೀಕ್ಷೆಯೊಂದಿಗೆ ಆಂದೋಲನ ಏರ್ಪಾಟಾಗಿದೆ.

‘ಗ್ರಾಮೋದ್ಯೋಗ ಕ್ಷೇತ್ರದ ಪ್ರಗತಿಯಲ್ಲಿ ಕರ್ನಾಟಕವು ದಕ್ಷಿಣ ಭಾರತದ ಇತರೆ ರಾಜ್ಯಗಳಿಗಿಂತ ಕೆಳಮಟ್ಟಕ್ಕೆ ತಲುಪಿರುವುದು ಯಾಕೆ? ಗ್ರಾಮೀಣ ಉದ್ಯೋಗಗಳನ್ನು ಗಟ್ಟಿಗೊಳಿಸದೆ ರಾಜ್ಯವು ಸರ್ವಾಂಗೀಣ ಪ್ರಗತಿ ಸಾಧಿಸುವುದು ಸಾಧ್ಯವೇ? ಕೋವಿಡ್ ಸಂದರ್ಭದಲ್ಲಿ ಪಕ್ಕದ ಆಂಧ್ರ ರಾಜ್ಯವು ಉದ್ಯೋಗ ವಂಚಿತರಾದ ಪ್ರತಿ ಗ್ರಾಮೋದ್ಯೋಗಿಗಳಿಗೆ ಉದ್ಯೋಗ ನಷ್ಟಕ್ಕೆ ಪ್ರತಿಯಾಗಿ ₹ 24 ಸಾವಿರ ಹಂಚಿಕೆ ಮಾಡಿದ್ದು, ನಮ್ಮ ರಾಜ್ಯದಲ್ಲಿ ಕೇವಲ ₹ 2 ಸಾವಿರ ರೂಪಾಯಿ ಹಂಚಿಕೆ ಮಾಡಿರುವುದು ಸಾಕೆ?’ ಎಂಬ ಪ್ರಶ್ನೆಯನ್ನು ಕೇಳಲು ಚಳವಳಿಕಾರರು ಮುಂದಾಗಿದ್ದಾರೆ.

‘ಕೇರಳ ರಾಜ್ಯವು ಗ್ರಾಮೋದ್ಯೋಗಿಗಳನ್ನು ನರೇಗಾ ಯೋಜನೆಯಡಿ ತಂದು ಅವರ ಮಾಸಿಕ ವರಮಾನವು ದುಪ್ಪಟ್ಟಾಗುವಂತೆ ಮಾಡಿದೆ. ಅದು ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ನೀಡಲೆಂದು ಅಗತ್ಯವಿರುವ ಸಮವಸ್ತ್ರದ ಬಟ್ಟೆಯನ್ನು ಕೈಮಗ್ಗ ನೇಕಾರರಿಂದ ಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಲು ಕಾರಣವೇನು?’ ಎಂಬ ಪ್ರಶ್ನೆಯನ್ನು ಗ್ರಾಮೋದ್ಯೋಗಿಗಳು ಮುಂದಿಡಲಿದ್ದಾರೆ.

ವಿದ್ಯುತ್ ಮಗ್ಗದ ವಸ್ತ್ರವನ್ನು ಖರೀದಿಸುವಾಗಲೂ ಸಹ ವಿವಿಧ ಸಬೂಬುಗಳನ್ನು ನೀಡಿ ವಿದ್ಯುತ್ ಮಗ್ಗಗಳ ಮಾಲಿಕರು, ಕಾರ್ಮಿಕರನ್ನು ಉದ್ಯೋಗ ವಂಚಿತರನ್ನಾಗಿಸಿ ಹೊರ ರಾಜ್ಯಗಳಿಂದ ಬಟ್ಟೆ ಖರೀದಿಸುತ್ತಿರುವುದು ಯಾಕೆ? ಪ್ರಿಯದರ್ಶಿನಿ ಹ್ಯಾಂಡ್ ಲೂಮ್ ಹೌಸ್, ಕಾವೇರಿ ಎಂಪೋರಿಯಂ, ಕೈಮಗ್ಗ ಅಭಿವೃದ್ಧಿ ನಿಗಮ ಇತ್ಯಾದಿ ಸಂಸ್ಥೆಗಳು ಮುಚ್ಚಲ್ಪಡುವ ದಾರುಣ ಸ್ಥಿತಿಗೆ ತಲುಪಿರುವುದು ಏಕೆ? ಎಂಬ ಪ್ರಶ್ನೆಯನ್ನು ಕೇಳಲು ಸತ್ಯಾಗ್ರಹಿಗಳು ಸಜ್ಜಾಗಿದ್ದಾರೆ.

‘ವಿವಿಧ ಗ್ರಾಮೋದ್ಯೋಗ ಕ್ಷೇತ್ರಗಳನ್ನು ನಿರ್ವಹಿಸಬೇಕಿರುವ ಸರ್ಕಾರದ ಇಲಾಖೆಗಳು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಎಂಬ ಗ್ರಾಮೀಣ ಬಡವರ ಅಳಲಿನಲ್ಲಿ ಸತ್ಯಾಂಶವಿಲ್ಲವೇ? ಖಾದಿ ನೂಲು ತೆಗೆಯುವ ನಮ್ಮ ಕಾರ್ಯಕ್ರಮವೇಕೆ ತುಕ್ಕು ಹಿಡಿದು ಕುಳಿತಿದೆ? ಒಂದು ಕಾಲದಲ್ಲಿ ದೇಶದ ಅತೀ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದ್ದ ಗ್ರಾಮೋದ್ಯೋಗ ಕ್ಷೇತ್ರ ಹಿಂದೆ ಬೀಳಲು ಕಾರಣವೇನು?’ ಎಂಬ ಪ್ರಶ್ನೆಯನ್ನು ಕೂಡ ಚಳವಳಿಕಾರರು ಮುಂದಿಡುತ್ತಿದ್ದಾರೆ.

ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಿಂದ ಬೆಳಿಗ್ಗೆ 11ಕ್ಕೆ ಮೆರವಣಿಗೆ ಹೊರಡಲಿದ್ದು ಹೆಗ್ಗೋಡು ಪಂಚಾಯಿತಿ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು