ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಸಂಸದ ಬಿ.ವೈ. ರಾಘವೇಂದ್ರ ಜನ್ಮದಿನ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಶ್ಲಾಘನೆ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಸದ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ‘ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ತನ್ನದೇ ಆದ ನಾಯಕತ್ವ ಗುಣವನ್ನು ಸಂಸದ ಬಿ.ವೈ. ರಾಘವೇಂದ್ರ ಬೆಳೆಸಿಕೊಂಡಿದ್ದಾರೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶ್ಲಾಘಿಸಿದರು.

ಪಟ್ಟಣದ ಕುಮದ್ವತಿ ವಸತಿಯುತ ಕೇಂದ್ರೀಯ ಶಾಲೆ ಆವರಣದಲ್ಲಿ ಸೋಮವಾರ ಬಿ.ವೈ.ರಾಘವೇಂದ್ರ ಅಭಿಮಾನಿಗಳ ಬಳಗ ಆಯೋಜಿಸಿದ್ದ ಸಂಸದ ರಾಘವೇಂದ್ರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೋರಾಟದ ಸ್ಫೂರ್ತಿಯಿಂದ ನೂರಾರು ನಾಯಕರು ಉನ್ನತ ಸ್ಥಾನಮಾನ ಪಡೆದಿದ್ದಾರೆ. ರಾಜ್ಯದ ಸೇವೆ ಸಲ್ಲಿಸುವ ಭಾಗ್ಯ ನಾನೂ ಸೇರಿ ಹಲವು ನಾಯಕರಿಗೆ ದೊರೆತಿದೆ. ಯಡಿಯೂರಪ್ಪ ಪುತ್ರ ಸಂಸದ ರಾಘಣ್ಣ ತಂದೆಯಂತೆ ಜಿಲ್ಲೆಯಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದಾರೆ. ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಜಿಲ್ಲೆಯ ಜನರಿಗೆ ಚಿರಪರಿಚಿತರಾಗಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ರಾಘವೇಂದ್ರ ಸಂಸದರಾಗುವ ಮೊದಲು ಮಹಾನ್ ನಾಯಕರು ಸಂಸದರಾಗಿದ್ದರು. ಆದರೆ ಅವರನ್ನು ಜಿಲ್ಲೆಯಲ್ಲಿ ನೋಡಲು ಸಿಗುತ್ತಿರಲಿಲ್ಲ. ಆದರೆ, ರಾಘವೇಂದ್ರ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಜನರೊಂದಿಗೆ ನಿಕಟ ಸಂಬಂಧ ಹೊಂದುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಯಡಿಯೂರಪ್ಪ ಕುಟುಂಬದ ರಾಘವೇಂದ್ರ ಹಾಗೂ ವಿಜಯೇಂದ್ರ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ದೊರೆಯಲಿ’ ಎಂದು ಹಾರೈಸಿದರು.

ಶಾಸಕ ಹರತಾಳು ಹಾಲಪ್ಪ, ‘ಮಾಜಿ ಮುಖ್ಯಮಂತ್ರಿ ಹೋರಾಟದ ಫಲದಿಂದ ನಾವೆಲ್ಲ ಅಧಿಕಾರ ಅನುಭವಿಸುತ್ತಿದ್ದೇವೆ. ತಂದೆಯಂತೆ ಸಂಸದ ರಾಘವೇಂದ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಂಸದ ರಾಘವೇಂದ್ರ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪತ್ನಿ ತೇಜಸ್ವಿನಿ ಅವರು ಸಹಕಾರ ನೀಡಿದ್ದಾರೆ. ರಾಘವೇಂದ್ರ ಅವರಿಗೆ ಉತ್ತಮ ಭವಿಷ್ಯ ದೊರೆಯಲಿ’ ಎಂದು ಹಾರೈಸಿದರು.

ಶಾಸಕರಾದ ಕೆ.ಬಿ. ಅಶೋಕನಾಯ್ಕ, ಸುಕುಮಾರ್ ಶೆಟ್ಟಿ, ಅರುಣ್ ಕುಮಾರ್, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ್ರು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಮಾಜಿ ಅಧ್ಯಕ್ಷ ಪದ್ಮನಾಭ್ ಭಟ್, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಅರುಣಾದೇವಿ, ಸಂಸದ ರಾಘವೇಂದ್ರ ಪತ್ನಿ ತೇಜಸ್ವಿನಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖಂಡರಾದ ಡಾ.ಹಾಫೀಜ್ ಕರ್ನಾಟಕಿ, ಭದ್ರಾಪುರ ಹಾಲಪ್ಪ, ಡಿ.ಎಸ್. ಅರುಣ್ ಉಪಸ್ಥಿತರಿದ್ದರು.

ಜನ್ಮದಿನ ಕಾರ್ಯಕ್ರಮಕ್ಕೂ ಮುನ್ನ ಸಂಸದ ಬಿ.ವೈ.ರಾಘವೇಂದ್ರ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನ, ರಾಘವೇಂದ್ರ ಮಠ ಹಾಗೂ ದತ್ತಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು