ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಗೊಂದಲದ ವಾತಾವರಣ

Last Updated 3 ಫೆಬ್ರುವರಿ 2023, 6:48 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಮಿಷನ್ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು ಕೋಲಾಹಲದ ವಾತಾವರಣ ಸೃಷ್ಟಿಯಾಗಿತ್ತು.

ಎರಡೂ ಪಕ್ಷಗಳ ಸದಸ್ಯರು ಪರಸ್ಪರ ಉದ್ವೇಗದಿಂದ ಮಾತನಾಡಿ ಆರೋಪ, ಪ್ರತ್ಯಾರೋಪ ಮಾಡಿದರು. ಕೆಲವು ಸದಸ್ಯರು ತಾವು ಕುಳಿತಿದ್ದ ಸ್ಥಾನದಿಂದ ಎದ್ದು ಬಂದು ಅಧ್ಯಕ್ಷರ ಎದುರು ಏರಿದ ದನಿಯಲ್ಲಿ ಮಾತನಾಡಿದಾಗ ಗೊಂದಲದ ವಾತಾವರಣ ನಿರ್ಮಾಣವಾಗಿ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳದಂತಾಗಿತ್ತು.

ಬಿಜೆಪಿ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್, ‘ಇಲ್ಲಿನ ಇಂದಿರಾ ಕ್ಯಾಂಟಿನ್‌ಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಸಮಗ್ರ ತನಿಖೆಯಾಗಬೇಕು. ಅಲ್ಲಿ ಊಟ ಹಾಗೂ ಉಪಾಹಾರದ ಬಗ್ಗೆ ಸುಳ್ಳು ಲೆಕ್ಕ ನೀಡಿ ಗುತ್ತಿಗೆದಾರ ಅಕ್ರಮ ಲಾಭ ಪಡೆದುಕೊಂಡಿದ್ದಾರೆ. ಇದರ ಹಿಂದೆ ಯಾರು ಇದ್ದಾರೆ ಎಂಬುದು ಬೆಳಕಿಗೆ ಬರಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ಕಾಂಗ್ರೆಸ್ ಸದಸ್ಯೆ ಎನ್.ಲಲಿತಮ್ಮ, ‘ಈಗ ಎಲ್ಲೆಡೆ ಗುತ್ತಿಗೆಯಲ್ಲಿ ಭ್ರಷ್ಟಾಚಾರದ ಕೂಗು ಕೇಳಿಬರುತ್ತಿದೆ. ಗುತ್ತಿಗೆಯಲ್ಲಿ ಶೇ 40ರಷ್ಟು ಕಮಿಷನ್ ಕೇಳುತ್ತಿರುವುದಾಗಿ ಪ್ರಧಾನಿ ಮೋದಿಯವರೆಗೂ ದೂರು ಹೋಗಿದೆ’ ಎಂದು ಹೇಳಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು.

ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್, ‘ಅನಗತ್ಯವಾಗಿ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರದ ವಿಷಯವನ್ನು ಎಳೆದು ತರಲಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲವಾಗಿದೆ. ಏಕೆಂದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ವ್ಯಾಪಕ ಭ್ರಷ್ಟಾಚಾರ ನಡೆಸಿದ ಕಾರಣಕ್ಕೆ ಅದು ಅಧಿಕಾರ ಕಳೆದುಕೊಂಡಿದೆ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಮೋದಿಯವರ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಲಲಿತಮ್ಮ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಈ ನಡುವೆ ಕಾಂಗ್ರೆಸ್ ಸದಸ್ಯರ
ನಡೆಯಿಂದ ಬೇಸರಗೊಂಡ ಟಿ.ಡಿ.ಮೇಘರಾಜ್ ತಮ್ಮ ಅಸಮಧಾನ ಸೂಚಿಸಿ ಸಭೆಯಿಂದ ಹೊರ
ನಡೆದರು.

ತದನಂತರ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು. ಲಲಿತಮ್ಮ ಅವರು ಕ್ಷಮೆ ಕೇಳುವವರೆಗೂ
ಅವರಿಗೆ ಸಭೆಯಲ್ಲಿ ಮಾತನಾಡುವ ಅವಕಾಶ ನೀಡಬಾರದು
ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

ಬಿಜೆಪಿ ಸದಸ್ಯರ ಈ ವರ್ತನೆಯನ್ನು ಖಂಡಿಸಿ ಲಲಿತಮ್ಮ ಅವರು ಅಧ್ಯಕ್ಷರ ಎದುರು ನೆಲದ ಮೇಲೆ ಧರಣಿ ಕುಳಿತು ‘ಜೈ ಭೀಮ್’ ಘೋಷಣೆ ಕೂಗಿದರು. ಆಗ ಉಪಾಧ್ಯಕ್ಷ ವಿ.ಮಹೇಶ್, ‘ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ಸಿಗರಿಗೆ ಅವರ ಹೆಸರು ಹೇಳುವ ಯೋಗ್ಯತೆ ಇಲ್ಲ’ ಎಂದು ಛೇಡಿಸಿದರು.

ಈ ಹಂತದಲ್ಲಿ ಎರಡೂ ಕಡೆಯವರು ಧಿಕ್ಕಾರದ ಘೋಷಣೆಗಳನ್ನು ಕೂಗಿದಾಗ ಪರಿಸ್ಥಿತಿ ಗಂಭೀರ ಸ್ವರೂಪ
ಪಡೆಯಿತು. ನಗರಸಭೆ ಆಡಳಿತ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.

ಇಂದಿರಾ ಕ್ಯಾಂಟಿನ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸುವ ನಿರ್ಣಯ ಸ್ವೀಕರಿಸಲಾಯಿತು. ಪೌರಾಯುಕ್ತ ಎಚ್.ಕೆ.ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT