ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ನಗರದೊಳಗಣ ಗ್ರಾಮಗಳ ಸಮೃದ್ಧಿ – ಸಂಕಷ್ಟಗಳ ತೊಳಲಾಟ

Last Updated 8 ಮಾರ್ಚ್ 2021, 5:14 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರಗಳು ಬೆಳೆದು ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡಂತೆಲ್ಲ ಸೆರಗಿನಂಚಿನ ಹಳ್ಳಿಗಳು ನಗರದ ಒಡಲು ಸೇರುತ್ತಲೇ ಸಾಗುತ್ತವೆ. ಕೆಲವು ಹಳ್ಳಿಗಳು ಗ್ರಾಮ ಪಂಚಾಯಿತಿ ಸಮೇತ ಪುರಸಭೆ, ನಗರಸಭೆ, ನಗರಪಾಲಿಕೆ ಪಾಲಾದರೆ, ಕೆಲವು ಗ್ರಾಮ ಪಂಚಾಯಿತಿಗಳಿಗೆ ಪಟ್ಟಣ ಪಂಚಾಯಿತಿ ಯೋಗವೂ ಒದಗಿಬಂದಿವೆ. ಹೀಗೆ ನಗರ, ಪಟ್ಟಣಗಳ ಒಡಲು ಸೇರಿದ ಹಳ್ಳಿಗಳಿಗೆ ಲಾಭವೂ ಇದೆ. ನಷ್ಟವೂ ಆಗುತ್ತದೆ. ಲಾಭಕ್ಕಿಂತ ಸಮಸ್ಯೆಗಳೇ ಅಧಿಕವಾಗಿ ನಗರ ಜೀವನ ಕಿರಿಕಿರಿಯಾಗಿದೆ.

ಶಿವಮೊಗ್ಗ ನಗರಸಭೆ ಇದ್ದಾಗಲೇ 1996ರಲ್ಲಿ ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಮಲವಗೊಪ್ಪ, ವಡ್ಡಿನಕೊಪ್ಪ, ಪುರಲೆ, ತ್ಯಾವರೆಚಟ್ನಹಳ್ಳಿ, ಗಾಡಿಕೊಪ್ಪ ಸೇರಿ 24 ಗ್ರಾಮಗಳು ಸೇರ್ಪಡೆಯಾಗಿದ್ದವು. ಇಂದಿಗೂ ಆ ಎಲ್ಲ ಗ್ರಾಮಗಳು ನಗರವೂ ಆಗದೇ, ಅತ್ತ ಹಳ್ಳಿಗಳ ಸೊಗಡು, ಸಮಸ್ಯೆಗಳಿಂದಲೂ ಮುಕ್ತವಾಗದೇ ಪರಿತಪಿಸುತ್ತಿವೆ. ರಸ್ತೆ, ಚರಂಡಿ, ಬೀದಿದೀಪಗಳಿಗೂ ಅಲ್ಲಿನ ಜನರು ದೂರದ ನಗರಪಾಲಿಕೆಗೆ ಅಲೆಯುವಂತಾಗಿದೆ. ಬಹುತೇಕ ಗ್ರಾಮಗಳಿಗೆ ಇಂದಿಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮೂಲಸೌಕರ್ಯಗಳ ಕೊರತೆ ನೀಗಿಲ್ಲ.

ತೆರಿಗೆ ಭಾರ: ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ತೆರಿಗೆ ಭಾರ ಅಧಿಕವಾಗಿದೆ. ಪಂಚಾಯಿತಿಗಳು ನೀರಿನ ಕರ ವಾರ್ಷಿಕ ಸರಾಸರಿ ₹ 400, ಮನೆ ಕಂದಾಯ ₹ 200, ಖಾಲಿ ನಿವೇಶನ ₹ 150, ₹ 10 ಲಕ್ಷದವರೆಗಿನ ಮನೆಕಟ್ಟಲು ₹ 3 ಸಾವಿರದ ಆಸುಪಾಸಿನಲ್ಲಿ ಕಂದಾಯ ಸಂಗ್ರಹಿಸುತ್ತವೆ. ಅದೇ ನಗರ ವ್ಯಾಪ್ತಿಯಲ್ಲಿ ನೀರಿನ ಕಂದಾಯವೇ ₹ 2 ಸಾವಿರಕ್ಕೂ ಅಧಿಕವಿದೆ. ಮನೆ ಕಟ್ಟಲು ಪರವಾನಗಿ ಪಡೆಯಲು ಅಧಿಕ ಶುಲ್ಕದ ಜತೆಗೆ ಲಂಚವನ್ನೂ ನೀಡುವ ಸ್ಥಿತಿ ಇದೆ. ಹಣ ಕೊಟ್ಟರೂ ಅಲೆದಾಟ ತಪ್ಪಿದ್ದಲ್ಲ ಎನ್ನುವ ದೂರು ಸಾರ್ವಜನಿಕರದು.

ಖಾಲಿ ನಿವೇಶನಕ್ಕೆ, ವಸತಿ ಉದ್ದೇಶದ ಕಟ್ಟಡಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ಹಾಗೂ ಕೈಗಾರಿಕಾ ಉದ್ದೇಶಿತ ಕಟ್ಟಡಗಳಿಗೆ ಈಚೆಗೆ ಪಾಲಿಕೆ ಶೇ 15ರಷ್ಟು ತೆರಿಗೆ ಹೆಚ್ಚಳ ಮಾಡಿದೆ. ಹೊಸ ನೀರಿನ ಸಂಪರ್ಕಕ್ಕಾಗಿ ಈ ಹಿಂದೆ ₹ 2,500 ದರ ನಿಗದಿಯಾಗಿತ್ತು. ಈಗ ಅದನ್ನು ಸಹ ಹೆಚ್ಚಳ ಮಾಡಲಾಗಿದೆ. ಇದರಿಂದ ನಗರ ಜೀವನ ಅತ್ಯಂತ ದುಬಾರಿ ಎನಿಸಿದೆ.

ಬಗೆಹರಿಯದ ಖಾತೆ ಸಮಸ್ಯೆ: ಬಹುತೇಕ ಜನರು ಹಳ್ಳಿಗಳ ಗೋಮಾಳ, ಕಂದಾಯ ಭೂಮಿಗಳಲ್ಲಿ ಗುಡಿಸಲು, ಪುಟ್ಟ ಮನೆಗಳನ್ನು ಕಟ್ಟಿಕೊಂಡು, ಪಂಚಾಯಿತಿ ಅನುಮತಿ ಪಡೆದು ಬದುಕು ಸಾಗಿಸುತ್ತಿರುತ್ತಾರೆ. ಹಳ್ಳಿಗಳು ಪಟ್ಟಣ, ನಗರ ಪ್ರದೇಶಗಳ ವ್ಯಾಪ್ತಿಗೆ ಬಂದಾಗ ನಗರಾಡಳಿತಕ್ಕೆ ಕಡತಗಳು ವರ್ಗಾವಣೆಗೊಳ್ಳುತ್ತವೆ. ಶಿವಮೊಗ್ಗ ನಗರಸಭೆಗೆ ಹಾಗೆ ವರ್ಗಾವಣೆಗೊಂಡ ಎಷ್ಟೋ ಜನರ ಆಸ್ತಿ ದಾಖಲೆಗಳು ಇಂದಿಗೂ ಸಮರ್ಪಕವಾಗಿಲ್ಲ. ನಗರ ಪಾಲಿಕೆಯಾದರೂ ಕೆಲವರಿಗೆ ಮನೆ, ಜಾಗಗಳ ಖಾತೆಯಾಗಿಲ್ಲ. ಗ್ರಾಮ ಪಂಚಾಯಿತಿಗಳಿಂದ ಕಡತ ವರ್ಗಾವಣೆ ಮಾಡುವಾಗಲೇ ಎಲ್ಲ ದಾಖಲೆ ಸಮರ್ಪಕವಾಗಿ ವರ್ಗಾಯಿಸದೆ ಇರುವುದು ಇಂತಹ ಅವಾಂತರಗಳಿಗೆ ಕಾರಣ. ದಶಕಗಳು ಕಳೆದರೂ ಸಮಸ್ಯೆ ಬಗೆಹರಿಸುವ ಪ್ರಯತ್ನಗಳೂ ನಡೆದಿಲ್ಲ.

ಕಲ್ಮಶಗಳ ತಾಣಗಳಾದ ಹಳ್ಳಿಗಳು: ನಗರದ ಘನತ್ಯಾಜ್ಯ, ಯುಜಿಡಿ ಕಲ್ಮಶಗಳನ್ನು ಸಂಸ್ಕರಿಸಲು ನಗರದ ಸೆರಗಿನಲ್ಲಿರುವ ಗ್ರಾಮಗಳನ್ನೇ ನಗರಾಡಳಿತಗಳು ಆಯ್ಕೆ ಮಾಡಿಕೊಳ್ಳುತ್ತವೆ. ಇದರಿಂದ ಅಂತಹ ಹಳ್ಳಿಗಳ ನೈರ್ಮಲ್ಯ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ತ್ಯಾವರಚಟ್ನಹಳ್ಳಿ ಬಳಿ ಕಲ್ಮಶ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಪುರಲೆ ಬಳಿ ಸ್ಥಾಪಿಸಲು ಉದ್ದೇಶಿಸಿದ್ದ ಮತ್ತೊಂದು ಘಟಕಕ್ಕೆ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯವೂ 130 ಟನ್‌ ಕಸ ಸಂಗ್ರಹವಾಗುತ್ತದೆ. ಅದರಲ್ಲಿ ಸುಮಾರು 10 ಟನ್‌ ಗೊಬ್ಬರ ದೊರೆಯುತ್ತಿದೆ. ಉಳಿದ ತ್ಯಾಜ್ಯವನ್ನು ಅನುಪಿನಕಟ್ಟೆ ಬಳಿಯ 27.15 ಎಕರೆಯಲ್ಲಿ ಗುಂಡಿಗಳಿಗೆ ಸುರಿಯಲಾಗುತ್ತಿದೆ.

ಮೌಲ್ಯವರ್ಧನೆಯೊಂದೇ ಸಮಾಧಾನದ ಸಂಗತಿ:ಹಳ್ಳಿಗಳು ನಗರ ವ್ಯಾಪ್ತಿಗೆ ಒಳಪಟ್ಟ ನಂತರ ತೆರಿಗೆ ಭಾರ, ಮೂಲಸೌಕರ್ಯಗಳ ಕೊರತೆ ನೀಗದಿದ್ದರೂ, ಗ್ರಾಮೀಣ ಜನರು, ರೈತರು ತಾವು ಹೊಂದಿದ್ದ ಆಸ್ತಿ ಮೌಲ್ಯ ಹೆಚ್ಚಳದಿಂದ ಒಂದಷ್ಟು ಸಮಾಧಾನಗೊಂಡಿದ್ದಾರೆ. ₹ 5 ಲಕ್ಷದಿಂದ ₹ 10 ಲಕ್ಷ ಇದ್ದ ಜಮೀನುಗಳು ಕೋಟಿ ಮೌಲ್ಯಗಳಿಗೆ ಮಾರಾಟವಾಗಿವೆ. ಮನೆ, ನಿವೇಶನಗಳ ಮೌಲ್ಯಗಳೂ ಹೆಚ್ಚಾಗಿವೆ. ಜತೆಗೆ, ಬಹುತೇಕ ರೈತರು ಜಮೀನು ಮಾರಿಕೊಂಡು ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸಿ, ಎಲ್ಲವೂ ಖರ್ಚಾದ ನಂತರ ಬೀದಿಗೆ ಬಿದ್ದಿದ್ದಾರೆ. ನಗರದ ವಿವಿಧೆಡೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ತೆರಿಗೆಯಷ್ಟೇ ಹೆಚ್ಚಳ

ಕೆ.ಎನ್.ಶ್ರೀಹರ್ಷ

ಭದ್ರಾವತಿ: ಇಲ್ಲಿನ ನಗರಸಭೆ ವ್ಯಾಪ್ತಿಗೆ 1994ರಲ್ಲಿ ಗ್ರಾಮಾಂತರ ಪ್ರದೇಶಗಳು ಸೇರಿದ ನಂತರ ಅಭಿವೃದ್ಧಿ ಹೆಚ್ಚದಿದ್ದರೂ ತೆರಿಗೆ ಮಾತ್ರ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ನಾಗರಿಕರು.

ಹಳೇನಗರ ಭಾಗಕ್ಕೆ ಸೀಮಿತವಾಗಿದ್ದ ಪುರಸಭೆ ನಗರಸಭೆಯಾದ ನಂತರ ವಿಐಎಸ್ಎಲ್, ಎಂಪಿಎಂ ವ್ಯಾಪ್ತಿಯ ನಗರಪ್ರದೇಶ ಒಳಗೊಂಡಂತೆ ಬೊಮ್ಮನಕಟ್ಟೆ, ಸಿದ್ದಾಪುರ, ಜೇಡಿಕಟ್ಟೆ, ಭದ್ರಾಕಾಲೊನಿ, ಅಶ್ವಥನಗರ ಸೇರಿದಂತೆ ಅವುಗಳ ಸುತ್ತಲಿನ ಗ್ರಾಮೀಣ ಪ್ರದೇಶಗಳು ನಗರಸಭೆ ವ್ಯಾಪ್ತಿಗೆ ಸೇರಿದವು.

‘ಈ ರೀತಿ ಸೇರಿದ ಗ್ರಾಮೀಣ ಪ್ರದೇಶಗಳ ಖಾತೆ ವರ್ಗಾವಣೆ ದಾಖಲೆ, ಕಂದಾಯ ವಗೈರೆ ಎಲ್ಲವೂ ಬದಲಾಗುವ ಪ್ರಕ್ರಿಯೆ ಈಗಲೂ ಮುನ್ನಡೆದಿದೆ’ ಎನ್ನುತ್ತಾರೆ ಸಿದ್ದಾಪುರ ಬಸವರಾಜ್.

‘ಗ್ರಾಮ ಪಂಚಾಯಿತಿ ಖಾತೆ ಇದ್ದ ನಮ್ಮ ಆಸ್ತಿಗಳು ಕೆಲವು ಕಾನೂನು ತೊಡಕಿನ ಕಾರಣ ಈಗಲೂ ಬದಲಿಸುವ ಕೆಲಸ ನಡೆದಿದೆ. ಅದಕ್ಕಾಗಿ ಸಾಕಷ್ಟು ಓಡಾಟ ಮಾಡುವ ಸ್ಥಿತಿ ಇದೆ’ ಎನ್ನುತ್ತಾರೆ ಜೇಡಿಕಟ್ಟೆ ಕೃಷ್ಣಪ್ಪ.

‘ನಗರ ವ್ಯಾಪ್ತಿಗೆ ನಮ್ಮ ಗ್ರಾಮಗಳು ಸೇರಿದ್ದರಿಂದ ಆಸ್ತಿ ಮೌಲ್ಯ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ನಡೆದಿಲ್ಲ. ಬದಲಾಗಿ ಹೊಸ ಬಡಾವಣೆಗಳ ರೂಪುರೇಷೆ ಸರಿಯಾಗಿ ನಡೆದಿದ್ದರೂ ಒತ್ತುವರಿ ಸಹಜವಾಗಿ ಹೆಚ್ಚುತ್ತಲೇ ಇದೆ. ಇದನ್ನು ತಡೆಯಲು ಮಾತ್ರ ಯಾರಿಂದಲೂ ಸಾಧ್ಯವಾಗಿಲ್ಲ’ ಎನ್ನುತ್ತಾರೆ ಬೊಮ್ಮನಕಟ್ಟೆ ನಿವಾಸಿ.

‘ವಿಐಎಸ್ಎಲ್ ಹಾಗೂ ಎಂಪಿಎಂ ವಸತಿಗೃಹ ಪ್ರದೇಶ ನಗರಸಭೆಗೆ ಸೇರಿದ್ದರೂ, ಅದರಿಂದ ಯಾವುದೇ ಹೆಚ್ಚಿನ ಕೆಲಸ ಈ ಭಾಗದಲ್ಲಿ ನಡೆದಿಲ್ಲ. ಕಾರ್ಖಾನೆ ಸ್ಥಿತಿ ಬದಲಾಗಿದ್ದು, ಬೀದಿದೀಪ, ನೀರು, ಚರಂಡಿ ವ್ಯವಸ್ಥೆಗೆ ನಗರಸಭೆ ಸಿಬ್ಬಂದಿ ಆಶ್ರಯಿಸುವ ಸ್ಥಿತಿ ಹೆಚ್ಚುತ್ತಲೇ ಇದೆ. ಅದನ್ನು ಸರಿಪಡಿಸುವ ಕೆಲಸ ನಡೆದಿಲ್ಲ’ ಎನ್ನುತ್ತಾರೆ ಬಾಬು.

‘ಕಾರ್ಖಾನೆ ವ್ಯಾಪ್ತಿಯ ವಸತಿ ಪ್ರದೇಶದ ತೆರಿಗೆ ಇನ್ನೂ ನಗರಸಭೆಗೆ ಪಾವತಿಯಾಗಿಲ್ಲ. ಭಾರಿ ಪ್ರಮಾಣದ ಕೆಲಸವನ್ನು ಈ ಭಾಗದಲ್ಲಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿದರೆ ಕಾಮಗಾರಿ ಕೆಲಸಗಳು ಹೆಚ್ಚಾಗುತ್ತವೆ’ ಎನ್ನುತ್ತಾರೆ ಪರಮೇಶ್ವರ್.

ಒಟ್ಟಿನಲ್ಲಿ ನಗರಸಭಾ ವ್ಯಾಪ್ತಿಗೆ ಗ್ರಾಮೀಣ ಭಾಗಗಳು ಸೇರಿದ್ದರಿಂದ ಆಸ್ತಿ ಮೌಲ್ಯ ಹೆಚ್ಚಿದ್ದು ಬಿಟ್ಟರೆ ಮೂಲಸೌಕರ್ಯ ಸುಧಾರಣೆಯಲ್ಲಿ ಭಾರಿ ಬದಲಾವಣೆ ಆಗಿಲ್ಲ ಎಂಬ ಕೊರಗು ಈ ಭಾಗದ ನಾಗರಿಕರಲ್ಲಿದೆ.

ಭೂಗಳ್ಳರ ಸ್ವರ್ಗ

ನಗರ ಪ್ರದೇಶಗಳಿಗೆ ಸೇರುವ ಗ್ರಾಮಗಳ ವ್ಯಾಪ್ತಿಯ ಗ್ರಾಮಠಾಣಾ,
ಕೆರೆ ಪ್ರದೇಶ, ಗೋಮಾಳಗಳು ಭೂಗಳ್ಳರ ಸ್ವರ್ಗಗಳಾಗಿವೆ. ಸರಿಯಾದ ದಾಖಲೆಗಳು ಲಭ್ಯವಿಲ್ಲದ ಇಂತಹ ಭೂಮಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ಕಬಳಿಸಿವೆ. ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಮಲ್ಲಿಗೇನಹಳ್ಳಿ, ಆಲ್ಕೊಳ, ಕಲ್ಲಹಳ್ಳಿ, ಕಾಶಿಪುರ, ಸೋಮಿನಕೊಪ್ಪ, ಬೊಮ್ಮನಕಟ್ಟೆ, ನವುಲೆ, ಮಲವಗೊಪ್ಪ, ತೋಪಿನಘಟ್ಟ, ಊರುಗಡೂರು, ವಡ್ಡಿನಕೊಪ್ಪ, ಹರಕೆರೆ, ಮಂಡ್ಲಿ, ಪುರಲೆ ಭಾಗದ ಗ್ರಾಮ ಠಾಣೆಗಳನ್ನು ಸಂರಕ್ಷಿಸಲು ನಗರ ಪಾಲಿಕೆಗೆ ಸಾಧ್ಯವಾಗಿಲ್ಲ. ಕಂದಾಯ ಇಲಾಖೆಯ ನೇತೃತ್ವದಲ್ಲಿ ಕೆಲವು ಕೆರೆಗಳ ಒತ್ತುವರಿ ತೆರೆವುಗೊಳಿಸಿದ್ದರೂ, ಕೆಲವು ಕೆರೆಗಳನ್ನು ಸರ್ಕಾರವೇ ಅತಿಕ್ರಮಣ ಮಾಡಿದೆ.

***

ಗ್ರಾಮೀಣ ಸವಲತ್ತು ಕಳೆದುಕೊಳ್ಳುವ ಭೀತಿ

ರವಿ ಆರ್.ತಿಮ್ಮಾಪುರ

ಆನವಟ್ಟಿ: ಆನವಟ್ಟಿ ಗ್ರಾಮ ಪಂಚಾಯಿತಿಗೆ ಪಟ್ಟಣ ಪಂಚಾಯಿತಿ ಮಾನ್ಯತೆ ದೊರೆತ ನಂತರ ಸಮನವಳ್ಳಿ, ಕುಬಟೂರು, ತಲ್ಲೂರು, ನೇರಲಗಿ, ದೇವಸ್ಥಾನದ ಹಕ್ಕಲು, ಹೊಸಳ್ಳಿ, ಕೊಡಿಕೊಪ್ಪ ಗ್ರಾಮಗಳ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗ್ರಾಮೀಣ ಕೃಪಾಂಕ, ನರೇಗಾ ಯೋಜನೆ, ಭಾಗ್ಯಜ್ಯೋತಿ ಸಲವತ್ತುಗಳು ಸಿಗುವುದಿಲ್ಲ. ಅಂಗಡಿ, ಮನೆ, ನೀರು, ವಿದ್ಯುತ್ ಸೇರಿದಂತೆ ಎಲ್ಲ ತೆರಿಗೆಗಳ ಹೆಚ್ಚಳ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಗುವ ಕೆಲವು ಸರ್ಕಾರಿ ಸವಲತ್ತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಗ್ರಾಮಸ್ಥರ ಆತಂಕ.

ಮತ್ತೊಂದೆಡೆ ತಾಲ್ಲೂಕು ಕಚೇರಿಯ ಬಹುತೇಕ ಕೆಲಸಗಳು ಪಟ್ಟಣ ಪಾಚಾಯಿತಿ ವ್ಯಾಪ್ತಿಯಲ್ಲಿ ಆಗುತ್ತವೆ. ನಿವೇಶನಗಳಿಗೆ ಬೇಡಿಕೆ ಹಾಗೂ ಬೆಲೆ ಹೆಚ್ಚಳ, ಮನೆ ಕಟ್ಟಿಕೊಳ್ಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಗಿಂತ ಹೆಚ್ಚಿನ ಅನುದಾನ, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ವಲಯಕ್ಕೆ ಹೆಚ್ಚಿನ ಅನುದಾನ, ಉದ್ಯಮ ವಲಯ, ಶಿಕ್ಷಣ ಕ್ಷೇತ್ರ, ಕೃಷಿ ಮಾರುಕಟ್ಟೆ, ಸಣ್ಣ ಕೈಗಾರಿಕೆಗಳ ಉದ್ಯಮಗಳ ಅಭಿವೃದ್ಧಿ, ನಗರ ಅಭಿವೃದ್ಧಿ ಇಲಾಖೆಯ ಅನುದಾನ ದೊರೆಯುತ್ತದೆ ಎನ್ನುವುದು ಹಲವರ ಆಶಯ.

ಬಗರ್‌ಹುಕುಂ, ಅರಣ್ಯ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ಸಿಗುತ್ತವೆ ಎಂದು ಕೆಲವರು ನಂಬಿದ್ದಾರೆ. ಆನವಟ್ಟಿ ಗ್ರಾಮಕ್ಕೆ ಹೊಂದಿಕೊಂಡು ಬೇರೆ ಗ್ರಾಮದ ಗಡಿ ಅಂಚಿನಲ್ಲಿರುವ ಬಡಾವಣೆಗಳು ಉತ್ತಮ ರಸ್ತೆಗಳನ್ನೇ ಕಂಡಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಆ ಗ್ರಾಮಗಳು ಸೇರುವುದರಿಂದ ಉತ್ತಮ ರಸ್ತೆಗಳು ಆಗುತ್ತವೆ ಎಂಬ ಆಶಾಭಾವನೆ ಇದೆ.

ಹೆಚ್ಚು ಆಸ್ತಿ ಹಾಗೂ ನಿವೇಶನಗಳನ್ನು ಹೊಂದಿರುವ ಮತ್ತು ಮುಖ್ಯರಸ್ತೆಯಲ್ಲಿ ಅಂಗಡಿ ಮಳಿಗೆಗೆಗಳನ್ನು ಕಟ್ಟಿಕೊಂಡಿರುವವರಿಗೆ ಪಟ್ಟಣ ಪಂಚಾಯಿತಿ ಖುಷಿ ಕೊಟ್ಟಿದೆ. ಆದರೆ, ಬಡವರು ಹಾಗೂ ಮಧ್ಯಮ ವರ್ಗದವರು ಪರಿತಪಿಸುತ್ತಿದ್ದಾರೆ.

***

ನಗರ ಪಾಲಿಕೆಗೆ ಸೇರಿದ ಗ್ರಾಮಗಳ ಆಸ್ತಿ ಮೌಲ್ಯಗಳು ಗಣನೀಯವಾಗಿ ಹೆಚ್ಚಳವಾಗಿವೆ. ರೈತರ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅವರ ಜೀವನ ಸ್ಥಿತಿ ಸುಧಾರಿಸಿದೆ.

ಎಚ್‌.ಸಿ.ಯೋಗೀಶ್, ಪಾಲಿಕೆ ವಿರೋಧ ಪಕ್ಷದ ನಾಯಕ.

***

ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಸೇರಿದ ಗ್ರಾಮಗಳ ದಾಖಲೆಗಳ ನಿರ್ವಹಣೆ ಸಮರ್ಪಕವಾಗಿ ನಡೆದಿಲ್ಲ. ನೀರು, ಮನೆ ಕಂದಾಯ ಸೇರಿದಂತೆ ಅಲ್ಲಿನ ಜನರು ತೆರಿಗೆ ಭಾರದಿಂದ ನಲುಗಿದ್ದಾರೆ. ಮೊದಲು ತೆರಿಗೆ ಹೊರೆ ಕಡಿಮೆ ಮಾಡಬೇಕು.

ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕ

***

ನಗರದ ವ್ಯಾಪ್ತಿಗೆ ಸೇರಿದ್ದ ಹಳ್ಳಿಗಳಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯ ಕೊರತೆ ಇತ್ತು. ಈಗ ಅಂತಹ 24 ಗ್ರಾಮಗಳಿಗೆ ಪ್ರತ್ಯೇಕವಾಗಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ₹ 96 ಕೋಟಿ ನೀಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಶೀಘ್ರ ಕಾಮಗಾರಿಗಳ ಅನುಷ್ಠಾನವಾಗಲಿದೆ.

ಸುವರ್ಣಾ ಶಂಕರ್, ಮೇಯರ್, ನಗರಪಾಲಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT