ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಅಂಗನವಾಡಿಗಳಿಗಿಲ್ಲ ಸೂರು, ಸಮಸ್ಯೆಗಳು ನೂರಾರು!

Last Updated 29 ಮಾರ್ಚ್ 2021, 4:42 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ 567 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮ ಪಂಚಾಯಿತಿ, ಸಮುದಾಯ ಭವನ, ಯುವಕರ ಸಂಘ, ಮಹಿಳಾ ಮಂಡಳಿ, ಶಾಲೆ, ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ, ಮೂಲಸೌಕರ್ಯದ ಕೊರತೆಯ ಮಧ್ಯೆ ಮಕ್ಕಳ ಕಲಿಕೆ ಸಾಗುತ್ತಿದೆ.

ಜಿಲ್ಲೆಯಲ್ಲಿ 2,458 ಅಂಗನವಾಡಿ ಕೇಂದ್ರಗಳಿವೆ. 1,891 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಉಳಿದ 567 ಕಟ್ಟಡಗಳಿಗೆ ಸ್ವಂತ ಸೂರಿಲ್ಲ. ಪಂಚಾಯಿತಿ ಕಟ್ಟಡಗಳಲ್ಲಿ 31, ಶಾಲಾ ಕಟ್ಟಡಗಳಲ್ಲಿ 137, ಸಮುದಾಯ ಭವನದಲ್ಲಿ 58, ಬಾಡಿಗೆ ಕಟ್ಟಡಗಳಲ್ಲಿ 238 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಬಾಡಿಗೆ ಕಟ್ಟಡಗಳಲ್ಲಿ ಕುಡಿಯುವ ನೀರು, ಶೌಚಾಲಯ,ಆಟದ ಮೈದಾನ, ದಾಸ್ತಾನು ಕೊಠಡಿ, ಕಾಂಪೌಂಡ್‌ ಮತ್ತಿತರ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಮಕ್ಕಳ ಕಲಿಕೆಗೆ ಭದ್ರ ಬುನಾದಿಯಾಗಬೇಕಾದ ಅಂಗನವಾಡಿ ಶಿಕ್ಷಣ ಅಭದ್ರ ಸ್ಥಿತಿಯಲ್ಲಿರುವುದು ಪೋಷಕರ ಕಳವಳಕ್ಕೆ ಕಾರಣವಾಗಿದೆ.

3ರಿಂದ 6 ವರ್ಷದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕಲಿಕಾ ಸ್ನೇಹಿ ವಾತಾವರಣ ಅಗತ್ಯ. ಗಾಳಿ–ಬೆಳಕೇ ಇಲ್ಲದ ಬಾಡಿಗೆ ಕಟ್ಟಡಗಳ ಕತ್ತಲ ಕೋಣೆಯಲ್ಲಿ ಸಿಗುತ್ತಿರುವ ಶಿಕ್ಷಣ ಪುಟ್ಟ ಮಕ್ಕಳಿಗೆ ಉಸಿರುಗಟ್ಟಿಸುತ್ತಿದೆ. ಎಷ್ಟೋ ಅಂಗನವಾಡಿಗಳಲ್ಲಿ ಆಟಿಕೆಗಳನ್ನು ಮಕ್ಕಳಿಗೆ ಕೊಡದೆ, ಚೀಲಗಳಿಗೆ ಹಾಕಿ ಸಜ್ಜೆ ಮೇಲೆ ಇಟ್ಟಿದ್ದಾರೆ ಎಂಬುದು ಹಲವು ಪೋಷಕರ ದೂರು.

ಕೊರೊನಾ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿಗಳು ಸ್ಥಗಿತವಾಗಿವೆ. ಸಿಡಿಪಿಒ, ಮೇಲ್ವಿಚಾರಕರು ಅಂಗನವಾಡಿಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸುತ್ತಿಲ್ಲ. ಇದನ್ನೆಲ್ಲ ಪ್ರಶ್ನಿಸಬೇಕಾದ ಜನಪ್ರತಿನಿಧಿಗಳಿಗೆ ಅಂಗನವಾಡಿ ಕೇಂದ್ರಗಳ ಸುಧಾರಣೆಯ ಆಸಕ್ತಿಯಿಲ್ಲ. ಅಂಗನವಾಡಿ ಮಕ್ಕಳು ವೋಟ್‌ ಬ್ಯಾಂಕ್‌ ಆಗಿದ್ದರೆ, ಎಲ್ಲ ಸೌಲಭ್ಯ ದೊರಕುತ್ತಿತ್ತೇನೋ ಎಂದು ಪೋಷಕರೊಬ್ಬರು ಕುಟುಕಿದರು.

ಬಾಡಿಗೆ ಹೆಚ್ಚಿಸುವ ಅಗತ್ಯವಿದೆ: ಕಟ್ಟಡಕ್ಕೆ ಸರ್ಕಾರ ಪ್ರತಿ ತಿಂಗಳು ನೀಡುವ ಬಾಡಿಗೆ ದರ ಕಡಿಮೆ ಇದೆ. ನಗರದ ಪ್ರದೇಶದಲ್ಲಿ ₹ 4 ಸಾವಿರ ನೀಡುತ್ತಿದೆ. ಈ ದರಕ್ಕೆ ಸಿಗುವ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರಗಳು ನಡೆಯಬೇಕಾಗಿದೆ. ಹಲವು ಅಂಗನವಾಡಿ ಕೇಂದ್ರಗಳು ಮೂಲಸೌಲಭ್ಯಗಳಿಲ್ಲದೆ ಬಳಲುತ್ತಿವೆ. ಆರಂಭದಿಂದಲೂ ಒಂದೇ ಬಾಡಿಗೆ ದರ ನೀಡುತ್ತಿದೆ. ಆದರೆ, ಬಾಡಿಗೆ ಕಟ್ಟಡ ಮಾಲೀಕರು ಪ್ರತಿವರ್ಷ ಬಾಡಿಗೆ ದರದಲ್ಲಿ ಹೆಚ್ಚಳ ಮಾಡುತ್ತಿದ್ದಾರೆ. ಇದು ಅಂಗನವಾಡಿ ಕಾರ್ಯಕರ್ತೆಯರಿಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಬಾಡಿಗೆ ದರ ಹೆಚ್ಚಿಸಬೇಕು ಎನ್ನುತ್ತಾರೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಬಿ.ಪ್ರೇಮ.

‘ಶಿವಮೊಗ್ಗ ನಗರದ ಹೆಚ್ಚಿನ ಅಂಗನವಾಡಿಗಳಿಗೆ ನಿವೇಶನದ ಕೊರತೆ ಇದೆ. ಶಾಲೆ, ಸಮುದಾಯ ಭವನಗಳಲ್ಲಿ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಅವುಗಳನ್ನು ನಡೆಸಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ಸೂಕ್ತ ನಿವೇಶನ ನೀಡಿದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು’ ಎನ್ನುತ್ತಾರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ.

***

329 ಕೇಂದ್ರಗಳಿಗೆ ಪರ್ಯಾಯ ವ್ಯವಸ್ಥೆ

ಜಿಲ್ಲೆಯ ನಗರ ಪ್ರದೇಶ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ನಿವೇಶನ ದೊರೆಯದ ಕಾರಣ, 329 ಅಂಗನವಾಡಿ ಕೇಂದ್ರಗಳನ್ನು ಪರ್ಯಾಯ ವ್ಯವಸ್ಥೆಯಲ್ಲಿ ನಡೆಸಲಾಗುತ್ತಿದೆ. ಸ್ವಂತ ಕಟ್ಟಡ ಇರುವ ಕಡೆ ನೀರಿನ ಸೌಲಭ್ಯ ಮತ್ತು ಶೌಚಾಲಯ ಕಟ್ಟಿಸಲು ತೊಂದರೆ ಆಗುವುದಿಲ್ಲ. ಆದರೆ, ಬಾಡಿಗೆ ಕಟ್ಟಡ, ಇತರೆಡೆ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳಲ್ಲಿ ಸಮಸ್ಯೆ ಎದುರಾಗುತ್ತಿದೆ.

ಜಿಲ್ಲೆಯಲ್ಲಿ ಆರ್ ಡಿಸಿಎಸ್ 25 ಅಡಿ 148 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರದಿಂದ ಹಣ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆ ಕೆಲಸ ಆರಂಭಿಸಿದೆ. ಒಂದೆರಡು ಕಟ್ಟಡಗಳಿಗೆ ಜಾಗದ ಸಮಸ್ಯೆ ಇದೆ. 148 ಕಟ್ಟಡಗಳ ಕಾಮಗಾರಿ ಆರಂಭಗೊಂಡಿದೆ.ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ 30X40 ಜಾಗ ಬೇಕಾಗಿದೆ. ಅಳತೆ ಕಡಿಮೆ ಇರುವೆಡೆ ಮೊದಲ ಮಹಡಿಯಲ್ಲಿ ಕಟ್ಟಡ ಕಟ್ಟಲು ಅನುಮತಿ ಪಡೆಯಲಾಗಿದೆ. ಎಸ್‌ಡಿಪಿ ಅಡಿ ಸೊರಬ ಮತ್ತು ಶಿಕಾರಿಪುರ 20 ಅಂಗನವಾಡಿಗಳು ಮಂಜೂರಾಗಿವೆ. ಆಯಾ ಗ್ರಾಮ ಪಂಚಾಯಿತಿ ಮೂಲಕ ಕಾಮಗಾರಿ ಆರಂಭಗೊಂಡಿದೆ.

ವಿಶೇಷ ಅನುದಾನಡಿ ₹ 3.5 ಕೋಟಿ ಅನುದಾನ ಬಂದಿದೆ. ನಗರದಲ್ಲಿ 19 ಕಟ್ಟಡಗಳಿಗೆ ಅನುದಾನ ಬಿಡುಗಡೆಯಾಗಿದೆ. ಶೀಘ್ರ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಆರಂಭಿಸಲಾಗುತ್ತಿದೆ. ಅಂಗನವಾಡಿಗಳ ದುರಸ್ತಿಗೆ ₹ 2.19 ಕೋಟಿ ಅನುದಾನ ಬಿಡುಗಡೆಯಾಗಿದೆ. ಪ್ರತಿ ಅಂಗನವಾಡಿಗೆ ₹ 2 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಆರಂಭವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕ ಸುರೇಶ್ ಮಾಹಿತಿ ನೀಡಿದರು.

***

26 ಕಟ್ಟಡಗಳಿಗೆ ಹೈಟೆಕ್‌ ಸ್ಪರ್ಶ

- ಕೆ.ಎನ್.ಶ್ರೀಹರ್ಷ

ಭದ್ರಾವತಿ: ಕಳೆದ ಸಾಲಿನಲ್ಲಿ ಹೊಸದಾಗಿ ಸುಮಾರು 26 ಅಂಗನವಾಡಿ ಕಟ್ಟಡಗಳ ಹೈಟೆಕ್ ಕಾಮಗಾರಿ ಕೆಲಸಕ್ಕೆ ಅನುಮತಿ ಸಿಕ್ಕಿದೆ. 18 ಕಟ್ಟಡಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ 8 ಕಟ್ಟಡಗಳಿಗೆ ಜಾಗ ಹಾಗೂ ತಾಂತ್ರಿಕ ಸಮಸ್ಯೆ ಇದೆ.

ಡಾಣನಾಯಕನಾಪುರ, ಕಂಬದಾಳ್ ಹೊಸೂರು ಹಾಗೂ ಅಂತರಗಂಗೆ ಗ್ರಾಮದಲ್ಲಿನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ಜಾಗ ಸಿಗಲಿಲ್ಲ ಎಂಬ ಕಾರಣಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ಅದಕ್ಕೆ ಒಪ್ಪಿಗೆ ಸಿಕ್ಕಿದ್ದು, ಡುಪ್ಲೆಕ್ಸ್ ಮಾದರಿಯಲ್ಲಿ ನಿರ್ಮಿಸಲು ಅನುಮತಿ ಸಿಕ್ಕಿದೆ ಎನ್ನುತ್ತಾರೆ ಸಿಡಿಪಿಒ ಸುರೇಶ್.

ಯಾವುದೇ ಕಟ್ಟಡ ನಿರ್ಮಿಸಲು ಮೂವತ್ತು, ನಲವತ್ತು ಅಡಿ ಜಾಗದ ಅಗತ್ಯವಿದೆ. ಈ ಗ್ರಾಮದಲ್ಲಿ ಆಳತೆ ಕಡಿಮೆ ಇತ್ತು ಹೀಗಾಗಿ ಇರುವ ಜಾಗದಲ್ಲೇ ಡುಪ್ಲೆಕ್ಸ್ ಕಟ್ಟಡ ಕಟ್ಟಲು ಅನುಮತಿ ಸಿಕ್ಕಿರುವುದರಿಂದ ಅಲ್ಲಿಯೂ ಶೀಘ್ರ ಕಟ್ಟಡ ನಿರ್ಮಾಣ ಕೆಲಸ ನಡೆಯಲಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಈ ಸಾಲಿನಲ್ಲಿ ₹ 3 ಕೋಟಿ ಅನುದಾನ ಜಿಲ್ಲೆಗೆ ಬಂದಿದೆ. ಅದರಲ್ಲಿ ಅದ್ರಿಹಳ್ಳಿ ಹಾಗೂ ಲಕ್ಷ್ಮೀಪುರ ಗ್ರಾಮದ ಕಟ್ಟಡ ಕಾಮಗಾರಿಗೆ ₹ 2 ಲಕ್ಷ ನೆರವು ಸಿಕ್ಕಿದೆ ಎಂದು ಹೇಳಿದ ಅವರು ಡುಪ್ಲೆಕ್ಸ್ ಕಟ್ಟಡದಲ್ಲಿ ಕೆಳಭಾಗದಲ್ಲಿ ಶಾಲೆ ನಡೆಯಲಿದೆ. ಮೇಲ್ಭಾಗದ ಕೊಠಡಿಯಲ್ಲಿ ಅಡಿಗೆ ವ್ಯವಸ್ಥೆಗೆ ಕಾಯಕಲ್ಪ ಮಾಡಲಾಗುವುದು ಎಂದು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡಗಳು ಅಧಿಕವಾಗಿವೆ. ಇಲ್ಲಿ ಸೂಕ್ತವಾದ ನಿವೇಶನ ಸಿಗುವುದು ಕಷ್ಟ ಎಂದು ತಿಳಿಸಿದ ಅವರು, ಇಲಾಖೆ ನಿಗದಿ ಮಾಡಿರುವಷ್ಟು ಮೊತ್ತಕ್ಕೆ ಬಾಡಿಗೆ ಕಟ್ಟಡ ಸಿಗುವುದು ಕಷ್ಟಕರ ಎಂದರು. ಸದ್ಯ ಹೊಸ ಹೈಟೆಕ್ ಕಟ್ಟಡಗಳ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಎರಡರಿಂದ ಮೂರು ಕಟ್ಟಡಗಳ ಕಾಮಗಾರಿಗಳು ಮುಕ್ತಾಯ ಹಂತಕ್ಕೆ ತಲುಪಿವೆ. ಹೊಸ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ ನೇರವಾಗಿ ಏಜೆನ್ಸಿ ನಿಯೋಜನೆ ಮಾಡಲಾಗಿದೆ. ನಿರ್ಮಿತಿ ಕೇಂದ್ರದ ನೇತೃತ್ವದಲ್ಲಿ ಕಾಮಗಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

***

ಭಾರಿ ಮಳೆ: ಕೇಂದ್ರಗಳಿಗೆ ಹಾನಿ

- ರವಿ ನಾಗರಕೂಡಿಗೆ

ಹೊಸನಗರ: ಮಳೆಗಾಲದಲ್ಲಿ ಸುರಿಯುವ ಭಾರಿ ಮಳೆಗಾಳಿಗೆ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು ಹಾನಿಗೊಳಗಾಗುತ್ತಿವೆ. ಒಂದೇ ಸಮನೆ ಸುರಿಯುವ ಬಿರುಗಾಳಿ ಮಿಶ್ರಿತ ಮಳೆಗೆ ಅಂಗನವಾಡಿ ಕಟ್ಟಡಗಳು ಧರಗೆ ಉರುಳುತ್ತಿವೆ. ಪ್ರತಿವರ್ಷ ಹತ್ತಿಪ್ಪತ್ತು ಅಂಗನವಾಡಿ ಕೇಂದ್ರಗಳು ಮಳೆಗೆ ಕುಸಿಯುವುದು ಸಾಮಾನ್ಯವಾಗಿದೆ.

ಹೊಸನಗರ ತಾಲ್ಲೂಕಿನಲ್ಲಿ 139 ಮಿನಿ ಅಂಗನವಾಡಿ ಕೇಂದ್ರಗಳೂ ಸೇರಿ 345 ಅಂಗನವಾಡಿಗಳಿವೆ. 16 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಕೆಲವು ಕಟ್ಟಡಗಳಿಗೆ ಸ್ಥಳ ಮಂಜೂರಾದ ಕಾರಣ ಅರಣ್ಯ ಭೂಮಿಯಲ್ಲಿವೆ.

2019–20 ಸಾಲಿನಲ್ಲಿ ಮಳೆಹಾನಿಯಿಂದ 24 ಅಂಗನವಾಡಿ ಕೇಂದ್ರಗಳು ಸಂಪೂರ್ಣ ಹಾನಿಯಾಗಿದ್ದವು. 7 ಕೇಂದ್ರಗಳ ದುರಸ್ತಿಗೆ ಅನುದಾನ ಮಂಜೂರಾಗಿದೆ. 2020–21 ಸಾಲಿನಲ್ಲಿ 12 ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆ ತುಲುಪಿವೆ. ಕಟ್ಟಡವನ್ನು ನೆಲಸಮ ಮಾಡಿಯೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ. 12 ಕೇಂದ್ರಗಳಲ್ಲಿ ಹಿರೆಸಾನಿ, ಎಡದಿಡ್ಡೆ, ಹೊಸನಗರ–3, ಕೆಇಬಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಉಳಿದ 8 ಕೇಂದ್ರಗಳ ನಿರ್ಮಾಣಕ್ಕೆ ನರೇಗಾ ಯೋಜನೆ ಅಡಿಯಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ₹ 10 ಲಕ್ಷಕ್ಕೂ ಹೆಚ್ಚು ಹಣ ಬೇಕಿದೆ. ಅನುದಾನ ಕೋರಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಸಿಡಿಪಿಒ ಆರ್.ರಾಘವೇಂದ್ರ.

***

ಶಿಕಾರಿಪುರದಲ್ಲಿ 218 ಕೇಂದ್ರಗಳು ಸ್ವಂತ

- ಎಚ್.ಎಸ್. ರಘು

ಶಿಕಾರಿಪುರ: ತಾಲ್ಲೂಕಿನಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳು ಸುಸಜ್ಜಿತ ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ತಾಲ್ಲೂಕಿನಲ್ಲಿ 302 ಅಂಗನವಾಡಿ ಕೇಂದ್ರಗಳಿವೆ. 218 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 74 ಅಂಗನವಾಡಿ ಕೇಂದ್ರಗಳ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. 16 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 16 ಕೇಂದ್ರಗಳು ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 3 ಕೇಂದ್ರಗಳು ಸಮುದಾಯ ಭವನದಲ್ಲಿ ನಡೆಯುತ್ತಿವೆ. ಪ್ರಸ್ತುತ 10 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದೆ.

ಹೆಂಚಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕೇಂದ್ರಗಳನ್ನು ಪ್ರಸ್ತುತ ತೆರವುಗೊಳಿಸಲಾಗಿದೆ. ಅಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸಮುದಾಯ ಭವನದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದ ಶಾಸಕರೂ ಆಗಿರುವುದರಿಂದ ಬಹುತೇಕ ಅಂಗನವಾಡಿಗಳಿಗೆನೂತನ ಕಟ್ಟಡ ನಿರ್ಮಿಸಲು ಆದ್ಯತೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT