ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ

ನಿಂಬೆಹಣ್ಣು ₹15ಕ್ಕೆ 2, ವೀಳ್ಯದೆಲೆ ₹10ಕ್ಕೆ 2, ಸೇವಂತಿಗೆ ಹೂ ಕೆ.ಜಿಗೆ ₹320 !
Last Updated 22 ಮಾರ್ಚ್ 2023, 6:21 IST
ಅಕ್ಷರ ಗಾತ್ರ

ಶಿವಮೊಗ್ಗ : ನಗರದೆಲ್ಲೆಡೆ ಯುಗಾದಿಯ ಸಂಭ್ರಮ ಮನೆಮಾಡಿದೆ. ಹಬ್ಬದ ಮುನ್ನಾ ದಿನ ಮಂಗಳವಾರ ಖರೀದಿ ಜೋರಾಗಿ ನಡೆಯಿತು. ಬೆಲೆ ಗಗನಕ್ಕೇರಿದ್ದರೂ ಗ್ರಾಹಕರಿಂದ ಹೂವು, ಹಣ್ಣು, ಮಾವು-ಬೇವು, ಹೊಸಬಟ್ಟೆ ಖರೀದಿ ಭರಾಟೆ ನಡೆದಿತ್ತು.

ಯುಗಾದಿಯನ್ನು ಹೊಸ ವರ್ಷವಾಗಿ ಸ್ವೀಕರಿಸುವುದರಿಂದ ಈ ಸಂದರ್ಭದಲ್ಲಿ ದೇವರನ್ನು ಪೂಜಿಸಿ ಬೇವು-ಬೆಲ್ಲ ತಿನ್ನುವುದು ಸಂಪ್ರದಾಯ. ಇದಕ್ಕಾಗಿ ಮಾವಿನಸೊಪ್ಪಿನೊಂದಿಗೆ ಬೇವಿನಸೊಪ್ಪು, ಹೂವು ಮಾರಾಟ ಮಾರುಕಟ್ಟೆಯಲ್ಲಿ ಜೋರಾಗಿತ್ತು.

ಇಲ್ಲಿನ ಶಿವಪ್ಪ ನಾಯಕ ವೃತ್ತದ ಮಾರ್ಕೆಟ್‌ನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಜನರು ಅಗತ್ಯ ವಸ್ತುಗಳನ್ನು ಕೊಂಡರು. ಅದರ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ಯುಗಾದಿಯ ಸಿಹಿಯ ಜೊತೆಗೆ ಕಹಿ ಅನುಭ ನೀಡಿತು. ಸೇವಂತಿಗೆ ಹೂ ದರ ಕೆ.ಜಿಗೆ ₹320 ತಲುಪಿದೆ. ಸೇಬು ಹಣ್ಣಿನ ದರ ₹200, ಕಿತ್ತಳೆ ಹಣ್ಣು ಕೆ.ಜಿಗೆ ₹150 ಆಗಿದೆ. ಮಲ್ಲಿಗೆ ಒಂದು ಮಾರಿಗೆ ₹150 ಇದೆ. ಮಾವಿನ ಸೊಪ್ಪು ಹಾಗೂ ಬೇವಿನ ಸೊಪ್ಪು ಒಂದು ಕಂತೆಗೆ ₹15 ರಿಂದ ₹25ಕ್ಕೆ ಏರಿಕೆ ಆಗಿದೆ. ಬಾಳೆ ಎಲೆ 1ಕ್ಕೆ ₹5 ಆಗಿದೆ. ತೆಂಗಿನಕಾಯಿ 5ಕ್ಕೆ ₹120 ಇತ್ತು. ಕೆಲವೆಡೆ ಚೌಕಾಸಿ ಯೂ ಜೋರಾಗಿತ್ತು.

ನೆಹರು ರಸ್ತೆ, ಬಿ.ಹೆಚ್. ರಸ್ತೆಗಳಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗಿತ್ತು. ಉರಿಬಿಸಿಲನ್ನು ಲೆಕ್ಕಿಸದೆ ಖರೀದಿಯಲ್ಲಿ ತೊಡಗಿದ್ದರು. ನಗರದ ಬಹುತೇಕ ವೃತ್ತಗಳಲ್ಲಿ ಜನರು ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ನಗರದ ಪ್ರಮುಖ ವ್ಯಾಪಾರ ವಹಿವಾಟು ಸ್ಥಳಗಳಾದ ಗಾಂಧಿಜಾರ್, ನೆಹರೂ ರಸ್ತೆ, ಸವಳಂಗ ರಸ್ತೆ, ದುರ್ಗಿಗುಡಿ, ಬಿ.ಎಚ್.ರಸ್ತೆ, ಪೊಲೀಸ್ ಚೌಕಿ ಮುಂತಾದೆಡೆ ವ್ಯಾಪಾರ ಜೋರಾಗಿತ್ತು.

ಯುಗಾದಿಗೆ ಹೊಸ ಬಟ್ಟೆ ಖರೀದಿಗೆ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಬರೀ ಬಟ್ಟೆ, ಹೂವು-ಹಣ್ಣು ತರಕಾರಿ ಅಲ್ಲದೆ ಯುಗಾದಿಗೆ ಹೊಸ ವಾಹನ, ಗೃಹೋಪಯೋಗಿ ವಸ್ತುಗಳ ಖರೀದಿಸುವವರೂ ಇದ್ದುದ್ದರಿಂದ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಜನಜಂಗುಳಿ ಕಂಡುಬಂತು.
ಹಬ್ಬದ ಮುನ್ನಾದಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಆಚರಣೆ ನಡೆದವು.

ಸಂಜೆ ಸಮಯದಲ್ಲಿ ಗ್ರಾಹಕರು ಹೆಚ್ಚಿದ್ದರಿಂದ ಮಾರುಕಟ್ಟೆ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಇದರಿಂದ ವಾಹನ ಸವಾರರು ಸಮಸ್ಯೆ ಎದುರಿಸಿದರು. ಖರೀದಿಗೆ ಬಂದಿದ್ದ ಜನರು ವಾಹನ ನಿಲ್ಲಿಸಲು ಸ್ಥಳ ಇಲ್ಲದೆ, ಪಾಲಿಕೆ ಆವರಣದ ಬಳಿ, ಗಾಂಧಿ ಪಾರ್ಕ್ ಬಳಿ, ಕಿ.ಮೀಗಟ್ಟಲೇ ದೂರ ದ್ವಿಚಕ್ರ ವಾಹನ ನಿಲ್ಲಿಸಿ ಖರೀದಿಗೆ ಇಳಿದರು.

ಅದರಂತೆ, ಬಿ.ಎಚ್ ರಸ್ತೆ, ಮುಖ್ಯ ಬಸ್ ನಿಲ್ದಾಣದಲ್ಲಿಯೂ ಖರೀದಿ ಜೋರಿತ್ತು. ಕೆಲಸ ಮುಗಿಸಿ ಊರು, ಮನೆಗೆ ತೆರಳುವ ಗ್ರಾಹಕರು ಗಡಿ ಬಿಡಿಯಲ್ಲಿ ಕೊಂಡು ಬಸ್ ಏರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT